ಕೊಡಗು: ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಕೊಡಗಿನ ಆರ್ಥಿಕ ಪರಿಸ್ಥಿತಿ ಐದು ತಿಂಗಳಿಂದ ಕೊರೋನಾದಿಂದ ನಲುಗಿ ಹೋಗಿದೆ. ಕೊಡಗಿನ ಆರ್ಥಿಕತೆಗೆ ಜೀವ ತುಂಬುವುದಕ್ಕಾಗಿ ಇದೀಗ ಹೋಂ ಸ್ಟೇ, ರೆಸಾರ್ಟ್ಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಬಂದ್ ಆಗಿರುವ ಪ್ರವಾಸೋದ್ಯಮ ಪ್ರವಾಸಿಗರಿಗೆ ಮುಕ್ತವಾಗದೆ ಹೋಂ ಸ್ಟೇ, ರೆಸಾರ್ಟ್ ಉದ್ಯಮಕ್ಕೆ ಜೀವ ಬರುವುದು ಅನುಮಾನವಾಗಿದೆ.
ಕರ್ನಾಟಕದ ಕಾಶ್ಮೀರ, ಮಂಜಿನನಗರಿ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆ ವಿಶೇಷ ಪ್ರಾಕೃತಿಕ ಸಂಪತ್ತಿನ ಸಿರಿಯಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ಕಳೆದ ಐದು ತಿಂಗಳಿಂದ ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಇಡೀ ಪ್ರವಾಸೋದ್ಯಮ ಬಂದ್ ಆಗಿದೆ. ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಸಾವಿರಾರು ಹೋಂ ಸ್ಟೇ ರೆಸಾರ್ಟ್ ಗಳು, ನೂರಾರು ಹೊಟೇಲ್ ಗಳು ಬಂದಾಗಿದ್ದವು. ಇದನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಆತಂಕದ ಸ್ಥಿತಿಯಲ್ಲಿವೆ. ಇದೆಲ್ಲವನ್ನೂ ಗಮನಿಸಿದ ಜಿಲ್ಲಾಡಳಿತ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಹೊಟೇಲ್, ಹೋಂ ಸ್ಟೇ, ರೆಸಾರ್ಟ್ ಗಳನ್ನು, ಷರತ್ತು ವಿಧಿಸಿ ಪುನರ್ ಆರಂಭಿಸಲು ಅವಕಾಶ ನೀಡಿದೆ.
ಜಿಲ್ಲೆಗೆ ಬರುವ ಪ್ರವಾಸಿಗರು ನೇರ ಹೋಂ ಸ್ಟೇ, ರೆಸಾರ್ಟ್‍ಗಳು ಮತ್ತು ಹೊಟೇಲ್ಗಳಿಗೆ ಬರಬೇಕು. ಬಂದವರು ಅಲ್ಲಿಯೇ ತಂಗಬೇಕು. ವಿನಾಕಾರಣ ಹೊರಗೆ ಎಲ್ಲೂ ಸುತ್ತಾಡುವಂತಿಲ್ಲ. ಇನ್ನು ಹೊಟೇಲ್, ರೆಸಾರ್ಟ್ ಮತ್ತು ಹೊಟೇಲ್ ಗಳ ಸಿಬ್ಬಂದಿ ಕೂಡ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕೈಗಳಿಗೆ ಗ್ಲೌಸ್ ಧರಿಸಬೇಕು ಎಂದು ಕಡ್ಡಾಯಗೊಳಿಸಿದೆ.
ಜಿಲ್ಲೆಯ ಜನರ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳ ಪುನರ್ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲದಿದ್ದರೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಹೀಗಾಗಿ ಆ ಉದ್ಯಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಿದ್ದಾರೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್. ಹೋಂ ಸ್ಟೇ, ರೆಸಾರ್ಟ್ ಹೋಟೆಲ್ ಪುನರ್ಆರಂಭಿಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ವೀಕ್ಷಣೆಗೆ ಮುಕ್ತವಾಗದ ಹೊರತು, ಪ್ರವಾಸಿಗರು ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಗೆ ಬರುವುದು ಸಂಪೂರ್ಣ ಅನುಮಾನವಾಗಿದೆ. ಅಲ್ಲದೇ ಹೋಂ ಸ್ಟೇ, ರೆಸಾರ್ಟ್ಗೆ ಹೊರ ಜಿಲ್ಲೆಯಿಂದ ಬರುವವರು ಎಲ್ಲಿಯೂ ಹೊರಗೆ ಸುತ್ತಾಡುವಂತಿಲ್ಲ. ವೃದ್ಧರು ಮಕ್ಕಳು ಹೊರ ಜಿಲ್ಲೆ, ಹೊರರಾಜ್ಯಗಳಿಂದ ಬರುವಂತಿಲ್ಲ. ಇದೆಲ್ಲವನ್ನೂ ಗಮನಿಸಿರುವ ಜಿಲ್ಲೆಯ ನೋಂದಾಯಿತ ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಸಂಘ ಸದ್ಯಕ್ಕೆ ಹೋಂ ಸ್ಟೇ, ರೆಸಾರ್ಟ್ಗಳನ್ನು ಪುನರ್ ಆರಂಭಿಸುವುದಿಲ್ಲ ಎಂದು ನಿರ್ಧರಿಸಿದೆ.
ಇದನ್ನು ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್-19: ಒಂದೇ ದಿನ 5503 ಕೇಸ್, 1.12 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ