ಕೊಡಗು(ಆ.10): ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಕಳೆದ ಎರಡು ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಹಮ್ಮಿಯಾಲ, ಆವಂಡಿ, ಮುಟ್ಲುು, ಮತ್ತು ಮುಕ್ಕೋಡ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಪರಿಣಾಮವಾಗಿ ಈ ಮೂರು ಗ್ರಾಮಗಳ ಸಂಪರ್ಕ ದುಸ್ತರವಾಗಿದ್ದು, ಜನರು ಪರದಾಡುವಂತಾಗಿದೆ.
ಮುಕ್ಕೋಡ್ಲು, ಹಮ್ಮಿಯಾಲ, ಆವಂಡಿ ಮತ್ತು ಮುಟ್ಲು ಗ್ರಾಮಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು ಅಷ್ಟು ಕುಟುಂಬಗಳು ಈಗ ನಡೆದುಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆ ಸುರಿದ ಪರಿಣಾಮ ಹೊಳೆಗಳು ತುಂಬಿ ಹರಿದಿದ್ದು, ನೀರಿನ ರಭಸಕ್ಕೆ ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಮುಟ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಹುತೇಕ ಕುಸಿದು ಹಾಗೆ ನಿಂತಿದೆ. ಸದ್ಯ ಅಪಾಯದ ಸ್ಥಿತಿಯಲ್ಲಿರುವ ಸೇತುವೆಗಳ ಮೇಲೆ ಜನರು ನಡೆದುಕೊಂಡೆ ಓಡಾಡುತ್ತಿದ್ದಾರೆ.
ಇನ್ನು ಮೇರಿಯಂಡ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ರಸ್ತೆ ಬಹುತೇಕ ಬಂದ್ ಆಗಿದೆ. ರಸ್ತೆ ಮೇಲಿದ್ದ ಮಣ್ಣನ್ನು ಸ್ವಲ್ಪ ತೆರವು ಮಾಡಲಾಗಿದ್ದು, ಜನರು ಓಡಾಡಲು ಸಾಧ್ಯವಾಗುವಂತೆ ಮಾಡಲಾಗಿದೆ. ಸೋಮವಾರ ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಹಮ್ಮಿಯಾಲ, ಆವಂಡಿ ಮತ್ತು ಮುಟ್ಲು ಗ್ರಾಮಗಳಲ್ಲಿ ಮಳೆಯಿಂದ ತೊಂದರೆಗೆ ಈಡಾಗಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
ಭೂಕುಸಿತವಾಗಿರುವ ಪ್ರದೇಶಗಳಲ್ಲಿ ಈಗಲೂ ಭೂಮಿಯೊಳಗಿಂದ ಭಾರೀ ಶಬ್ಧ ಬರುತ್ತಿದ್ದು ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ. ಅಲ್ಲದೆ ಭಾರೀ ಮಳೆಗೆ ಭೂಮಿ ಕುಸಿದಿದ್ದರಿಂದ ಆ ಒತ್ತಡಕ್ಕೆ ಮನೆಗಳು ಬಿರುಕುಬಿಟ್ಟಿದ್ದು, ಕುಸಿದು ಬೀಳುವ ಸ್ಥಿತಿ ತಲುಪಿವೆ.
ಇನ್ನು ರೈತರ ನೂರಾರು ಎಕರೆಯ ವಿವಿಧ ಬೆಳೆಗಳು ಹಾಳಾಗಿವೆ. ಕಾಫಿ, ಏಲಕ್ಕಿ ಬೆಳೆ ಕೊಳೆ ರೋಗಕ್ಕೆ ಸಂಪೂರ್ಣ ಹಾಳಾಗಿವೆ. ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡು ಕರಗಿ ಹೋಗಿವೆ. ಹೀಗಾಗಿಿ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೆಲ್ಲರಿಗೂ ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ವಿತರಿಸಲಾಗುವುದು. ಜೊತೆಗೆ ಮಳೆ ಹಾನಿ ಅನುದಾನದಲ್ಲಿ ಕೂಡಲೇ ಸೇತುವೆಗಳ ಮರು ನಿರ್ಮಿಸಲಾಗುವುದು ಎಂದಿದ್ದಾರೆ.
ಮೇರಿಯಂಡ ತೋಟದ ಬಳಿ ಭೂಮಿ ಕುಸಿಯುವ ಮೊದಲು ಭಾರೀ ಶಬ್ಧ ಬಂದಿತು. ಏನಾಯಿತೆಂತು ನೋಡುವಷ್ಟರಲ್ಲಿ ಗುಡ್ಡ ಕುಸಿದಿತ್ತು. ನಮ್ಮ ಮನೆಗಳ ಬಳಿಯೂ ಭೂಮಿ ಒಳಗಿಂದ ಭಾರೀ ಶಬ್ಧ ಬರುತ್ತಿದೆ. ಇದು ನಮಗೂ ಸಾಕಷ್ಟು ಆತಂಕ ಮೂಡಿಸಿದೆ. ಹೆದರಿಕೆಯಲ್ಲೇ ಜೀವನ ಮಾಡಬೇಕಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಭಾರಿ ಅಂತಹ ಭೀಕರ ಮಳೆ ಸುರಿಯದಿದ್ದರೂ ಸುರಿದ ಸಾಧಾರಣ ಮಳೆಗೆ ಹಲವೆಡೆ ಮತ್ತೆ ಮತ್ತೆ ಅನಾಹುತಗಳು ಸಂಭವಿಸುತ್ತಿದ್ದು ಇನ್ನೂ ಒಂದು ತಿಂಗಳು ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಜನರಲ್ಲಿ ಆತಂಕ ಇದ್ದೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ