HOME » NEWS » District » KODAGU PEOPLE VIOLATE THE COVID GUIDELINE FOR BUY ESSENTIAL THINGS RHHSN RSK

ಕೊಡಗು ಲಾಕ್​ಡೌನ್: ಅಗತ್ಯ ವಸ್ತುಗಳ ಖರೀದಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಮುಗಿಬಿದ್ದ ಜನರು!

ಕೊಡಗಿನಲ್ಲಿ ನಿತ್ಯ ಕೋವಿಡ್ ಪ್ರಕರಣಗಳು 600 ಕೇಸುಗಳ ದಾಖಲಾಗುತ್ತಿದ್ದು, ಸೋಂಕಿನಿಂದ 8 ಜನರು ಪ್ರಾಣ ತೆತ್ತುತಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಾದ್ಯಂತ ವಾರದ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ. ಉಳಿದ ಎರಡು ದಿನಗಳಲ್ಲಿ ಮಾತ್ರ ನಿಗದಿತ ಅವಧಿಯಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.

news18-kannada
Updated:May 7, 2021, 6:15 PM IST
ಕೊಡಗು ಲಾಕ್​ಡೌನ್: ಅಗತ್ಯ ವಸ್ತುಗಳ ಖರೀದಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಮುಗಿಬಿದ್ದ ಜನರು!
ಸಾಂದರ್ಭಿಕ ಚಿತ್ರ.
  • Share this:
ಕೊಡಗು: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಾರದ ಐದು ದಿನ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದು, ಶುಕ್ರವಾರ ಮತ್ತು ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಇಂದು ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಇದ್ದಿದ್ದರಿಂದ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮೂರ್ನಾಡು ಮತ್ತು ಸುಂಟಿಕೊಪ್ಪ ಸೇರಿದಂತೆ ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ಜನಜಂಗುಳಿ ಏರ್ಪಟಿತ್ತು. ಎಂದಿನಂತೆ ಮಾರ್ಕೆಟ್ ಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೆ ನೂಕು ನುಗ್ಗಲು ಎದುರಾಗಬಹುದೆಂದು ಜಿಲ್ಲಾಡಳಿತ ಬೇರೆ ಬೇರೆ ಸ್ಥಳಗಳಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿತ್ತು.

ಮಡಿಕೇರಿಯಲ್ಲಿ ಸರ್ಕಾರಿ ಬಸ್ಸು ನಿಲ್ದಾಣ ಮತ್ತು ಆರ್​ಎಂಸಿ ಆವರಣದಲ್ಲಿ ಹಣ್ಣು ತರಕಾರಿಗಳ ಮಾರಾಟಕ್ಕೆ ಅವಕಾಶ ನೀಡಿತ್ತು. ಹೀಗಾಗಿ ಮಡಿಕೇರಿ ನಗರ ಸಭೆ ಕೂಡ ಬಸ್ಸು ನಿಲ್ದಾಣದ ಅಲ್ಲಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳ ಖರೀದಿಗೆ ವ್ಯವಸ್ಥೆ ಮಾಡಿತ್ತು. ಪ್ರತಿ ಅಂಗಡಿ ಮುಂಗಟ್ಟುಗಳ ಮುಂದೆ, ಮೂರು ಅಡಿ ದೂರಕ್ಕೆ ಒಂದರಂತೆ ಮಾರ್ಕ್ ಮಾಡಿ ಜನರು ಸರದಿ  ಸಾಲಿನಲ್ಲಿ ನಿಂತು ವಸ್ತುಗಳ ಖರೀದಿಗೆ ವ್ಯವಸ್ಥೆ ಮಾಡಿತ್ತು. ಆದರೆ ಜನರು ಅಂಟಿಕೊಂಡಂತೆ ನಿಂತು ವಸ್ತುಗಳ ಖರೀದಿ ಮಾಡುತ್ತಿದ್ದರು. ಒಂದೆಡೆ ನಗರಸಭೆ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿ ಎಂದು ಮೈಕಿನಲ್ಲೇ ಸಾಕಷ್ಟು ಸೂಚನೆ ನೀಡುತ್ತಿದ್ದರೂ ಸಹ ಜನರು ಮಾತ್ರ ಕ್ಯಾರೆ ಎನ್ನುತ್ತಿರಲಿಲ್ಲ. ಬದಲಾಗಿ ಜನರು ಮಾತ್ರ ಎಂದಿನಂತೆ ಮುಗಿಬಿದ್ದು, ಯಾವ ಅಂತರವೂ ಇಲ್ಲದೆ ವಸ್ತುಗಳ ಖರೀದಿ ಮಾಡಿದರು.

ಇದನ್ನು ಓದಿ: ಸತ್ತ ವ್ಯಕ್ತಿಗಳ ಹೆಸರಿನಲ್ಲೂ ಬೆಡ್ ಮುಂದುವರೆಸುತ್ತಿರುವ ಖಾಸಗಿ ಆಸ್ಪತ್ರೆಗಳ ಹೆಸರು ನಾಳೆ ಬಹಿರಂಗ; ಸಚಿವ ಆರ್.ಅಶೋಕ್

ಇನ್ನು ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದ್ದರೂ ಜನರು ಒಂಭತ್ತು ಗಂಟೆಯ ಬಳಿಕ ಬಸ್ತುಗಳ ಖರೀದಿಗೆ ಒಮ್ಮೆಲೆ ಬಂದಿದ್ದರಿಂದ ಮಡಿಕೇರಿ ನಗರದ ಇಂದಿರಾ ಗಾಂಧಿ ವೃತ್ತ, ಹಳೇ ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸವಾರರು ಪರದಾಡಬೇಕಾಯಿತು. ಇನ್ನು ಮಡಿಕೇರಿ ನಗರದಲ್ಲೇ 2 ಗಂಟೆಯಾದರೂ ಕೆಲವು ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದವು. ಪೊಲೀಸರು ಎಷ್ಟು ಬಾರಿ ಸೂಚನೆ ನೀಡಿದ್ದರೂ ಅಂಗಡಿ ಮಾಲೀಕರು ಅಂಗಡಿ ಬಂದ್ ಮಾಡಿರಲಿಲ್ಲ. ಹೀಗಾಗಿ ಮಡಿಕೇರಿ ನಗರ ಠಾಣೆ ಎಸ್‍ಐ ಅಂತಿಮ ಅವರು ದಾಳಿ ಮಾಡಿ ಪರಿಶೀಲಿಸಿದಾಗ ಅಂಗಡಿ ಶೆಲ್ಟರ್ ಮುಚ್ಚಿದಂತೆ ಇದ್ದರೂ ಒಳಗೆ ಜನರು ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ ಅಂಗಡಿ ಮಾಲೀಕನಿಗೆ ದಂಡ ವಿಧಿಸಿ ಕೂಡಲೇ ಬಂದ್ ಮಾಡುವಂತೆ ಎಚ್ಚರಿಕೆ ನೀಡಿದರು.
Youtube Video

ಒಟ್ಟಿನಲ್ಲಿ ಕೊಡಗಿನಲ್ಲಿ ನಿತ್ಯ ಕೋವಿಡ್ ಪ್ರಕರಣಗಳು 600 ಕೇಸುಗಳ ದಾಖಲಾಗುತ್ತಿದ್ದು, ಸೋಂಕಿನಿಂದ 8 ಜನರು ಪ್ರಾಣ ತೆತ್ತುತಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಾದ್ಯಂತ ವಾರದ ಐದು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ. ಉಳಿದ ಎರಡು ದಿನಗಳಲ್ಲಿ ಮಾತ್ರ ನಿಗದಿತ ಅವಧಿಯಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.
Published by: HR Ramesh
First published: May 7, 2021, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories