HOME » NEWS » District » KODAGU PANCHAYAT OFFICERS DEMANDED 30 THOUSAND BRIBES RSK MAK

ಗುಡಿಸಲಲ್ಲಿದ್ದು ಕೂಲಿ ಮಾಡುವ ಕುಟುಂಬಕ್ಕೆ ಆವಾಸ್​ ಯೋಜನೆ ಅಡಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಂದ 30 ಸಾವಿರ ಲಂಚಕ್ಕೆ ಬೇಡಿಕೆ

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಜೇನುಕಲ್ಲುಬೆಟ್ಟ ಗ್ರಾಮದ ನಿವಾಸಿ ಮಲ್ಲಿಗೆ ಎಂಬ ಮಹಿಳೆ ತನ್ನ 14 ವರ್ಷದ ಮಗನೊಂದಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ತನ್ನ ಬಲಗೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಮಲ್ಲಿಗೆಗೆ ಸರಿಯಾಗಿ ನಡೆದಾಡಲು ಸಾಧ್ಯವಾಗುವುದಿಲ್ಲ.

news18-kannada
Updated:February 13, 2021, 8:22 PM IST
ಗುಡಿಸಲಲ್ಲಿದ್ದು ಕೂಲಿ ಮಾಡುವ ಕುಟುಂಬಕ್ಕೆ ಆವಾಸ್​ ಯೋಜನೆ ಅಡಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಂದ 30 ಸಾವಿರ ಲಂಚಕ್ಕೆ ಬೇಡಿಕೆ
ಗುಡಿಸಲಿನಲ್ಲಿ ಬದುಕುತ್ತಿರುವ ಬಡ ಕುಟುಂಬ.
  • Share this:
ಕೊಡಗು : ಶಾಲೆಗೆ ಹೋಗಬೇಕಾದ ಬಾಲಕ ಕೂಲಿ ಮಾಡಿ ತನ್ನ ತಾಯಿಯನ್ನು ಸಾಕುತ್ತಿದ್ದರೆ, ಅಂತಹ ಕುಟುಂಬಕ್ಕೆ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಡಲು ಪಂಚಾಯಿತಿ ಅಧಿಕಾರಿಗಳು 30 ಸಾವಿರ ಲಂಚ ಕೇಳಿದ್ದಾರೆ. ಅಂಗವಿಕಲರ ಶಿಷ್ಯ ವೇತನ ಮಾಡಿಸಿಕೊಡಿಸಲು ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರು 3 ಸಾವಿರ ಲಂಚ ಕೊಡುವಂತೆ ಒತ್ತಾಯಿಸಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ಶಾಲೆಗೆ ಹೋಗುತ್ತಲೇ ವಾರದಲ್ಲಿ ಮೂರು ದಿನ ಕೂಲಿ ಮಾಡಿ ಸಾಕುತ್ತಿರುವ ಬಾಲಕ ತಾಯಿಯ ಕಣ್ಣೀರ ನುಡಿಗಳಿವು. ಹೌದು ಆಡಿಕೊಂಡು ಶಾಲೆಗೆ ಹೋಗಬೇಕಾದ ತನ್ನ ಮಗನ ಕೂಲಿಯಿಂದ ಬದುಕು ದೂಡುತ್ತಿರುವ ಈ ಮಹಿಳೆಯೇ ಸ್ವತಃ ಹೇಳುತ್ತಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಜೇನುಕಲ್ಲುಬೆಟ್ಟ ಗ್ರಾಮದ ನಿವಾಸಿ ಮಲ್ಲಿಗೆ ಎಂಬ ಮಹಿಳೆ ತನ್ನ 14 ವರ್ಷದ ಮಗನೊಂದಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ತನ್ನ ಬಲಗೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಮಲ್ಲಿಗೆಗೆ ಸರಿಯಾಗಿ ನಡೆದಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ 8 ನೇ ತರಗತಿಗೆ ಹೋಗಬೇಕಾಗಿರುವ ಆಕೆಯ 14 ವರ್ಷದ ಮಗ ವಾರದಲ್ಲಿ ಮೂರು ದಿನ ಶಾಲೆಗೆ ಹೋದರೆ, ಮೂರು ದಿನ ಕೂಲಿಗೆ ಹೋಗುತ್ತಿದ್ದಾನೆ. ಒಂದು ದಿನಕ್ಕೆ 150 ರೂಪಾಯಿ ಕೂಲಿ ಸಿಗುತ್ತದೆ. ಇದೇ ಹಣದಿಂದ ಮನೆಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಕೊಂಡು, ತನ್ನ ತಾಯಿಯನ್ನು ಸಾಕುತ್ತಿದ್ದಾನೆ.

ಮದುವೆಯಾಗಿ ಇಲ್ಲಿಗೆ ಕರೆದುತಂದು ನಾನು ಗರ್ಭಿಣಿಯಾಗಿರುವಾಗಲೇ ಕೂಲಿಗೆಂದು ಹೋದ ಗಂಡ ಇಂದಿಗೂ ಬಂದಿಲ್ಲ. ಈ ನಡುವೆ ಕಳೆದ ಐದಾರು ವರ್ಷಗಳಿಂದ ತಮಗೊಂದು ಮನೆ ನಿರ್ಮಿಸಿಕೊಡುವಂತೆ ಕೂಡಿಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿಮಾಡಿ ಅರ್ಜಿ ಸಲ್ಲಿಸಿದ್ದಾರಂತೆ ಮಹಿಳೆ ಮಲ್ಲಿಗೆ. ಆದರೆ ಅರ್ಜಿ ಪಡೆದುಕೊಳ್ಳುವ ಅಧಿಕಾರಿಗಳು 30 ಸಾವಿರ ಕೊಟ್ಟರೆ ಮಾತ್ರವೇ ಮನೆ ನಿರ್ಮಿಸಿಕೊಡುವುದಾಗಿ ಬೇಡಿಕೆ ಇಡುತ್ತಿದ್ದಾರಂತೆ. ಕೂಲಿ ಕೆಲಸ ಮಾಡಿ ನನ್ನ ಮಗನೇ ನನ್ನನ್ನು ಸಾಕುತ್ತಿರುವಾಗ ಅವರಿಗೆ ನಾನು ಎಲ್ಲಿಂದ ಮುವತ್ತು ಸಾವಿರ ಕೊಡೋದು ಎಂದು ಬೇಸರದಿಂದ ತಮ್ಮ ಅಳಲು ತೋಡಿಕೊಂಡಿದ್ದಾರೆ ಮಲ್ಲಿಗೆ.

ಇದನ್ನೂ ಓದಿ: Murugesh Nirani: 18 ಸಾವಿರ ಕೋಟಿ ರೂ. ಅದಿರು ನಿಧಿ ಬಳಕೆಗೆ ಕೇಂದ್ರದ ನೆರವು ಕೋರಿದ ಸಚಿವ ಮುರುಗೇಶ್ ನಿರಾಣಿ

ಕನಿಷ್ಠ ಅಂಗವಿಕಲರ ವೇತನ ಬರುವಂತೆ ಮಾಡಿಸಿಕೊಡುವಂತೆ ಕೇಳಿದರೆ, ಕೂಡಿಗೆಯಲ್ಲಿರುವ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರು ಮೂರು ಸಾವಿರ ಲಂಚ ಕೊಡಗುವಂತೆ ಒತ್ತಾಯಿಸಿದ್ದರಂತೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬೆಟ್ಟದ ತಪ್ಪಲಿನಲ್ಲೇ ಇರುವುದರಿಂದ ಆನೆ, ಚಿರತೆ ಕಾಡುಪ್ರಾಣಿಗಳ ಕಾಟ ಮಿತಿಮೀರಿರುವ ಈ ಸ್ಥಳದಲ್ಲಿ ಇವರ ಜೀವನ ನರಕಯಾತನೆಯೇ ಸರಿ.

ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಇದು ನಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ. ಎಲ್ಲರ ಮಕ್ಕಳಂತೆ ನನ್ನ ಮಗನು ಶಾಲೆಗೆ ಹೋಗಿ ಕಲಿಯಬೇಕೆಂದು ಕೈಯಲ್ಲಿ ಹಣವಿಲ್ಲದಿದ್ದರಿಂದ ಆಶ್ರಮ ಶಾಲೆಗೆ ಸೇರಿಸಿದ್ದೇನೆ. ಆದರೆ ಅವನು ಶಾಲೆಗೆ ಹೋದರೆ ಮನೆಯಲ್ಲಿ ಉಪ್ಪು ಹುಳ್ಳಿಗೂ ಹಣವಿಲ್ಲ. ನಿನನ್ನು ಯಾರೂ ಕೂಲಿಗೂ ಕರೆಯುವುದಿಲ್ಲ, ಇನ್ನು ಜೀವನ ಹೇಗೆ ನಡೆಯುತ್ತದೆ ನಾನೇ ಮೂರು ದಿನ ಕೂಲಿಗೆ ಹೋಗುತ್ತೇನೆ ಎಂದು ಮಗ ಕೂಲಿಗೆ ಹೋಗುತ್ತಿದ್ದಾನೆ ಎಂದು ಮಲ್ಲಿಗೆ ಮಮ್ಮಲ ಮರುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇವರ ಕಷ್ಟಕ್ಕೆ ಮಿಡಿಯುವರೇ ಕಾದು ನೋಡಬೇಕಾಗಿದೆ.
Published by: MAshok Kumar
First published: February 13, 2021, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories