news18-kannada Updated:September 22, 2020, 6:55 PM IST
ಕೊಡಗಿನ ಪ್ರವಾಹದ ಚಿತ್ರ.
ಕೊಡಗು: ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಿಂದಲೂ ನಿರಂತರವಾಗಿ ರಣಭೀಕರ ಮಳೆಗೆ ಪ್ರವಾಹ ಮತ್ತು ಭೂಕುಸಿತ ಎದುರಿಸಿದೆ. ಮೂರು ವರ್ಷದಲ್ಲೂ ರೈತರು ಅಪಾರ ನಷ್ಟ ಅನುಭವಿಸಿದ್ದರು. ಆದರೆ ಈ ಭಾರೀ ಮಾತ್ರ ಒಂದುವರೆ ತಿಂಗಳ ಅವಧಿಯಲ್ಲೇ ಮೂರು ಭಾರಿ ಸುರಿದ ಮಳೆಗೆ ಜಿಲ್ಲೆಯ ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಧರೆಯ ಸ್ವರ್ಗ ಎನ್ನುವಂತಿದ್ದ ಕೊಡಗು ಜಿಲ್ಲೆ ಅದೇಕೋ ಮೂರು ವರ್ಷಗಳಿಂದ ನರಕವಾಗಿಬಿಟ್ಟಿದೆ. ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನ, ಜಾನುವಾರಗಳನ್ನು ಬಲಿ ಪಡೆದಿದ್ದು ಅಷ್ಟೇ ಅಲ್ಲ, ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆಯನ್ನು ಸರ್ವನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುತಿತ್ತು. ಆದರೆ ಈ ಬಾರಿ ಮಾತ್ರ ಆಗಸ್ಟ್ 5 ರಿಂದ ಸೆಪ್ಟೆಂಬರ್ 20 ವರೆಗೆ ಅಂದರೆ ಒಂದುವರೆ ತಿಂಗಳ ಅವಧಿಯಲ್ಲಿ ಮೂರು, ಮೂರು ಬಾರಿ ಧಾರಕಾರ ಮಳೆ ಸುರಿದು ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಕೊರೋನಾ ಲಾಕ್ ಡೌನ್ ನಿಂದ ವ್ಯಾಪಾರದಲ್ಲೂ ನಷ್ಟ ಅನುಭವಿಸಿ ಕೃಷಿಯತ್ತ ಮುಖಮಾಡಿದ್ದವರು ಪ್ರವಾಹದಿಂದ ಕೃಷಿಯಲ್ಲೂ ನಷ್ಟ ಅನುಭವಿಸುವಂತೆ ಮಾಡಿದೆ. ‘
ಜುಲೈ ಅಂತ್ಯದಲ್ಲೇ ಭತ್ತದ ಬೆಳೆ ನಾಟಿ ಮಾಡಿದ್ದೆವು. ಆಗಸ್ಟ್ ಆರಂಭದಲ್ಲಿ ಸುರಿದ ಮಳೆಯಿಂದ ಭತ್ತದ ಪೈರೆಲ್ಲಾ ಕೊಚ್ಚಿ ಹೋಯಿತು. ಮತ್ತೆ ನಾಟಿ ಮಾಡಿದ್ದೆವು. ಆಗಸ್ಟ್ ಕೊನೆಯಲ್ಲಿ ಸುರಿದ ಭಾರೀ ಮಳೆಗೆ ಆಗೊಮ್ಮೆ ಬೆಳೆ ನಷ್ಟವಾಯಿತು. ಈಗ ಸುರಿದ ಮಳೆಗೆ ಮತ್ತೆ ನಷ್ಟ ಅನುಭವಿಸಿದ್ದೇವೆ. ಆಗಸ್ಟ್ ನಲ್ಲಿ ಪ್ರವಾಹದ ನೀರು ನುಗ್ಗಿ ಕಾಫಿಗೆ ಕೊಳೆರೋಗ ಬಂದು ಕರಗಿ ಹೋಗಿತ್ತು. ಉಳಿದ ಗಿಡಗಳಲ್ಲಿ ಅಲ್ಪ ಪ್ರಮಾಣದ ಕಾಫಿ ಇತ್ತು ಮತ್ತೆ ಸುರಿದ ಮಳೆಗೆ ಉಳಿದಿದ್ದ ಕಾಫಿಯೂ ಕರಗಿ ನೆಲಕಚ್ಚುತ್ತಿದೆ.
ಇದನ್ನೂ ಓದಿ : ಕನ್ನಡ ಕಿರುತೆರೆಗೂ ಅಂಟಿತಾ ಮಾದಕ ಕಂಟಕ? ಸ್ಮಾಲ್ ಸ್ಕ್ರೀನ್ ಸುಂದರಿ ರಶ್ಮಿತಾ ಸ್ಪಷ್ಟನೆ!
ಹೀಗಾಗಿ ಸಂಪೂರ್ಣ ನಷ್ಟ ಅನುಭವಿಸುತ್ತಿದ್ದೇವೆ ಎನ್ನೋದು ರೈತ ಮಧು ಅವರ ಅಳಲು. ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಮಳೆಗೆ ಪ್ರವಾಹ ಮತ್ತು ಭೂಕುಸಿತವಾಗಿತ್ತು. ಐದು ಜನರು ಪ್ರಾಣಕಳೆದುಕೊಂಡು 600 ಕೋಟಿಯಷ್ಟು ಮೂಲಸೌಲಭ್ಯದ ನಷ್ಟವಾಗಿತ್ತು. ಜೊತೆಗೆ 41 ಸಾವಿರ ಹೆಕ್ಟೇರ್ ನಷ್ಟು ವಿವಿಧ ಬೆಳೆಗಳು ಹಾಳಾಗಿದ್ದವು. ರೈತರಿಗೆ ಪರಿಹಾರ ನೀಡಲು ಸೆಪ್ಟೆಂಬರ್ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಬಾರೀ ಮಳೆ ಸುರಿದಿದ್ದರಿಂದ ಮೂಲಸೌಲಭ್ಯಕ್ಕೆ ಸಂಬಂಧಿಸಿ ದೊಡ್ಡ ನಷ್ಟ ಸಂಭವಿಸಿಲ್ಲ. ಆದರೆ ರೈತರ ಭತ್ತ ಮತ್ತು ಕಾಫಿ ಬೆಳೆಗಳು ಭಾರೀ ನಷ್ಟ ಆಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
ಹೀಗಾಗಿ ಅರ್ಜಿ ಸಲ್ಲಿಸಲು ಇದ್ದ ಅವಕಾಶವನ್ನು ಸೆಪ್ಟೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಸರ್ಕಾರ ಪರಿಹಾರ ಕೊಟ್ಟರೂ ರೈತರು ತಾವು ಬೆಳೆ ಬೆಳೆಯುವುದಕ್ಕಾಗಿ ವ್ಯಯಿಸಿದಷ್ಟು ಹಣವನ್ನೂ ನೀಡೋದಿಲ್ಲ. ಹೀಗಾಗಿ ಈ ವರ್ಷದಲ್ಲಿ ರೈತರು ಒಂದುವರೆ ತಿಂಗಳಲ್ಲೇ ಮೂರು ಮೂರು ಬಾರಿ ನಷ್ಟ ಅನುಭವಿಸಿದ್ದು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.ರವಿ.ಎಸ್ ಹಳ್ಳಿ ನ್ಯೂಸ್ 18 ಕನ್ನಡ ಕೊಡಗು
Published by:
MAshok Kumar
First published:
September 22, 2020, 6:55 PM IST