ಆನ್‌ಲೈನ್​ನಲ್ಲೇ ಅರ್ಥಪೂರ್ಣ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿದ ವಿದ್ಯಾರ್ಥಿಗಳು!

ಕೋವಿಡ್ ನ ಸಂಕಷ್ಟ ಪರಿಸ್ಥಿತಿಯಲ್ಲೂ ಸುರಕ್ಷಿತವಾಗಿ ಮನೆ ಮನೆಯಲ್ಲಿಯೇ ಸ್ವಾತಂತ್ರ್ಯದ ಹಣತೆಯನ್ನು ಬೆಳಗುವುದರ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಭಾರತ ಮಾತೆ ಪೋಷಾಕು ಧರಿಸಿರುವ ವಿದ್ಯಾರ್ಥಿಗಳು.

ಭಾರತ ಮಾತೆ ಪೋಷಾಕು ಧರಿಸಿರುವ ವಿದ್ಯಾರ್ಥಿಗಳು.

  • Share this:
ಕೊಡಗು : ಕೋವಿಡ್ ನಿಂದಾಗಿ ರಾಜ್ಯದ ಶಾಲೆಗಳು ಬಂದ್ ಆಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಹೀಗಾಗಿ ಶಾಲೆಗಳಲ್ಲಿ ಶಿಕ್ಷಕರಷ್ಟೇ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಷ್ಪೇ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ. ಆದರೆ ಈ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯೋತ್ಸವದಿಂದ ದೂರ ಉಳಿಸಿಲ್ಲ. ಬದಲಾಗಿ ಶಾಲೆಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ನಲ್ಲೇ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ಈ ಶಾಲೆ ಪ್ರೇರೇಪಿಸಿದೆ. ಒಂದು ವಾರಗಳ ಕಾಲ ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದ ಶಾಲೆ ಇಂದು ಆನ್‌ಲೈನ್ ನಲ್ಲೇ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದೆ.

ಹೌದು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ತಮ್ಮ ಮನೆ ಮನೆಯಲ್ಲಿಯೆ ವಿನೂತನವಾಗಿ ಆಚರಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಶಾಲೆಯ ಶಿಕ್ಷಕ ಸತೀಶ್ ಅವರು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ತರಗತಿ ಮಾಡಲು ಈ ಹಿಂದೆಯೇ ಅಟ್ಟಣಿಗೆ ನಿರ್ಮಿಸಿದ್ದರು. ಈಗ ಅದನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳ ಭಾವಚಿತ್ರ ಮತ್ತು ಭಾರತದ ಸುಂದರ ಭೂಪಟದಿಂದ ಸಿಂಗಾರಗೊಳಿಸಿದ್ದಾರೆ. ಅಲ್ಲಿಂದಲೇ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.

ಪ್ರತೀ ವಿದ್ಯಾರ್ಥಿಯೂ ಕೂಡ ತಮ್ಮ ಮನೆಗಳ ಮುಂದೆ ಭಾರತದ ಭೂಪಟಗಳನ್ನು ಬಿಡಿಸಿ, ತಾವು ಕೂಡ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ, ಭಾರತ ಭೂಪಟದ ಮುಂದೆ ನಿಂತು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತು ಪುಟ್ಟ ಪುಟ್ಟ ಭಾಷಣ ಮಾಡಿರುವುದು ವಿಶೇಷವಾಗಿದೆ. ಬಳಿಕ ವಿದ್ಯಾರ್ಥಿಗಳು ಅದರ ವಿಡಿಯೋ ಮಾಡಿ ಶಿಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುಂಚೆ ಬೆಳಗ್ಗೆ 7:30 ರಿಂದ 8.30 ರವರೆಗೆ ಆನ್ಲೈನ್ನಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೆಯೇ ಪೋಷಕರು ಮತ್ತು ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಿದ್ದಾರೆ.

ಶಾಲಾ ಶಿಕ್ಷಕರಾದ ಸತೀಶ್ ಅವರು ವಿದ್ಯಾರ್ಥಿಗಳಿಗೆ ಒಂದು ವಾರದಿಂದಲೇ ಪ್ರತಿನಿತ್ಯ ಒಂದೊಂದು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ವಿದ್ಯಾರ್ಥಿಗಳಿಗೆ ಭಾರತದ ಭೂಪಟ ಬಿಡಿಸುವುದು, ರಾಷ್ಟ್ರ ನಾಯಕರ ಚಿತ್ರ ಬಿಡಿಸುವುದು, ರಾಷ್ಟ್ರೀಯ ಚಿಹ್ನೆಗಳ ಚಿತ್ರ ಬಿಡಿಸುವುದು ಮತ್ತು ಮಾದರಿ ತಯಾರಿಸುವುದು ದೇಶ ಭಕ್ತಿಗೀತೆಗಳನ್ನು ಹಾಡುವುದು, ದೇಶದ ಕುರಿತು ಪ್ರಬಂಧ ರಚಿಸುವುದು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಅರಿವು ಮೂಡಿಸಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಇದನ್ನು ಓದಿ: ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಭಯೋತ್ಪಾದಕ ವಾನಿ ತಂದೆ ಮುಜಾಫರ್

ವಿದ್ಯಾರ್ಥಿಗಳು ಕೂಡ ಅಷ್ಟೇ ಆಸಕ್ತಿಯಿಂದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿದ್ದಾರೆ. ಕೋವಿಡ್ ನ ಸಂಕಷ್ಟ ಪರಿಸ್ಥಿತಿಯಲ್ಲೂ ಸುರಕ್ಷಿತವಾಗಿ ಮನೆ ಮನೆಯಲ್ಲಿಯೇ ವಿದ್ಯಾರ್ಥಿಗಳು ಆಚರಿಸುವ ಮೂಲಕ ಸ್ವಾತಂತ್ರ್ಯದ ಹಣತೆಯನ್ನು ಬೆಳಗುವುದರ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹಾಗೂ ಅನವಶ್ಯಕವಾಗಿ ಗುಂಪುಗೂಡುವುದನ್ನು ನಿಯಂತ್ರಿಸಿ, ಕೋವಿಡ್​ನಿಂದ ದೂರವಾಗಿ ಉಳಿಯಬೇಕು.
Published by:HR Ramesh
First published: