ಭೂ ಕುಸಿತದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಆಸರೆ ಕಿತ್ತುಕೊಂಡು ಕೊರೋನಾ 

ಕೊರೋನಾ ಮಹಾಮಾರಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಎದೆಗುಂದದೆ ಬದುಕಿಗೊಂದು ಆಸರೆ ಕಟ್ಟಿಕೊಂಡಿದ್ದವರ ಬದುಕಿಗೂ ಕೊರೋನಾ ಬರೆ ಎಳೆದಿದೆ. ಹೀಗಾಗಿ ಸಂತ್ರಸ್ತರಿಗೆ ಇದ್ದ ಆಸರೆಯೂ ಇಲ್ಲದಂತೆ ಆಗಿದ್ದು, ಮುಂದಿನ ಬದುಕು ಹೇಗೆ ಎಂಬ ಆತಂಕ ಶುರುವಾಗಿದೆ.

news18-kannada
Updated:July 8, 2020, 4:28 PM IST
ಭೂ ಕುಸಿತದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಆಸರೆ ಕಿತ್ತುಕೊಂಡು ಕೊರೋನಾ 
ಮಸಾಲೆ ಪದಾರ್ಥ ತಯಾರಿಸುತ್ತಿರುವ ಪ್ರವಾಹ ಸಂತ್ರಸ್ತ ಮಹಿಳೆಯರು.
  • Share this:
ಕೊಡಗು: ಪ್ರಕೃತಿಯ ಭೀಕರ ಹೊಡೆತದಿಂದ ನಲುಗಿ ಹೋಗಿದ್ದ ಆ ಊರಿನ ನೂರಾರು ಕುಟುಂಬಗಳು ಅದೆಲ್ಲವನ್ನೂ ಮೆಟ್ಟಿನಿಂತು ಸ್ವಂತ ಉದ್ಯೋಗ ಆರಂಭಿಸಿದ್ದವು. ಕೊಡಗಿನ ಮಸಾಲ ಪದಾರ್ಥಗಳು, ಚಾಕೋಲೇಟ್ ಗಳನ್ನು ಉತ್ಪಾದಿಸಿ ಆಸರೆ ಮಳಿಗೆಯಲ್ಲಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದವು. ಆದರೆ ಕೊರೋನಾ ಮಹಾಮಾರಿ ಆಸರೆಯನ್ನೇ ಮುರಿದು ಬೀಳಿಸುತ್ತಿದೆ.

ಮಸಾಲೆ ಪದಾರ್ಥಗಳ ಹುರಿದು ಘಮಘಮಿಸುವ ಮಸಾಲೆ ಪುಡಿಗಳನ್ನು ತಯಾರು ಮಾಡುತ್ತಿರುವ ಮಹಿಳೆಯರು, ಕೊಡಗಿನ ಪ್ರಸಿದ್ಧ ಹೋಂಮೇಡ್ ಚಾಕೋಲೇಟ್ ಮಾಡುತ್ತಿರುವವರು. ಟೈಲರಿಂಗ್ ಮಾಡುವ ಮೂಲಕ ಸ್ವಂತ ದುಡಿಮೆ ಮಾಡುತ್ತಿರುವ ಇವರೆಲ್ಲರೂ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಾಲೂರಿನಲ್ಲಿ 2018 ರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ, ಮನೆ ಮಠಗಳನ್ನು ಕಳೆದುಕೊಂಡವರು. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ಮತ್ತದೇ ಊರಿನಲ್ಲಿ ಸ್ವಂತ ಉದ್ಯೋಗ ಆರಂಭಿಸಿದ್ದರು.

ಉತ್ಪಾದನೆಯಾದ ಚಾಕೊಲೇಟ್, ಮಸಾಲೆ ಪದಾರ್ಥಗಳನ್ನು ಮಾರಲು, ಮಡಿಕೇರಿಯ ಪ್ರವಾಸಿತಾಣ ರಾಜಾಸೀಟ್ ಬಳಿ ಆಸರೆ ಮಳಿಗೆಯನ್ನು ತೆರೆದಿದ್ದರು. ಸಾಕಷ್ಟು ಮಸಾಲೆ ಪದಾರ್ಥ, ಚಾಕೋಲೇಟ್ ಜೊತೆಗೆ ಇನ್ನಿತರ ಸ್ಪೈಸಿಸ್ ವಸ್ತುಗಳನ್ನು ಆಸರೆ ಮಳಿಗೆಯಲ್ಲಿ ಮಾರಾಟ ಮಾಡಿ, ನೆಮ್ಮದಿಯ ಆಸರೆ ಪಡೆದಿದ್ದರು. ಆದರೆ ಕೊರೋನಾ ಮಹಾಮಾರಿ ಅಬ್ಬರಿಸಿದ ಪರಿಣಾಮ ಪ್ರವಾಸೋದ್ಯಮ ಸೇರಿದಂತೆ ಕೊಡಗಿನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಹೀಗಾಗಿ ಭೂಕುಸಿತದಲ್ಲಿ ನಲುಗಿದ್ದ ಸಂತ್ರಸ್ತರು ಯಾವುದೇ ಉತ್ಪನ್ನಗಳ ಮಾರಾಟವಿ ಮಾಡಲಾಗದೆ ಮತ್ತೆ ಅವರ ಬದುಕು ಅತಂತ್ರವಾಗಿದೆ. ಆಸರೆ ಅಂಗಡಿಯ ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಕಷ್ಟ ತೋಡಿಕೊಳ್ಳುತ್ತಾರೆ ಚೋಂದಮ್ಮ.

ಮಸಾಲೆ ಪದಾರ್ಥಗಳನ್ನು ಮಾಡುವ ಜೊತೆಗೆ ಹತ್ತಾರು ಮಹಿಳೆಯರು ಟೈಲರಿಂಗ್ ಮಾಡುವ ಮೂಲಕ ಬದುಕು ಕಂಡುಕೊಂಡಿದ್ದರು. ವಿವಿಧ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ಹೊಲೆದು, ಉತ್ತಮ ಆದಾಯ ಗಳಿಸುತ್ತಿದ್ದರು. ಪ್ರತೀ ವರ್ಷದಂತೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲೆದಿದ್ದಾರೆ. ಆದರೆ ಕೊರೋನಾದಿಂದ ಶಾಲೆಗಳು ಆರಂಭವಾಗದೆ, ಲಕ್ಷಾಂತರ ಬಂಡವಾಳ ಹಾಕಿ ಹೊಲೆದಿರುವ ಸಮವಸ್ತ್ರಗಳು ಹಾಗೇ ಉಳಿದಿವೆ. ಹೀಗಾಗಿ ಕೊರೋನಾದಿಂದ ಸಂತ್ರಸ್ತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಸಾಲೆ ಉತ್ಪಾದನಾ ಘಟಕ ಮತ್ತು ಟೈಲರಿಂಗ್ ಘಟಕಗಳಲ್ಲಿ 60 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಆದಾಯವಿಲ್ಲದೆ ಸಿಬ್ಬಂದಿಗೂ ಸಂಬಳವೂ ಇಲ್ಲದೆ ಬದುಕು ಅತಂತ್ರವಾಗಿದೆ ಎನ್ನುತ್ತಾರೆ  ಸಂಯೋಜಕ ಬಾಲಾಜಿ ಕಶ್ಯಪ್.

ಇದನ್ನು ಓದಿ: ಮೃತನಾದ 6 ತಿಂಗಳ ಬಳಿಕ ಅಂತ್ಯಸಂಸ್ಕಾರ; ಮಲೇಷಿಯಾದಲ್ಲಿ ಮೃತಪಟ್ಟ ಮೈಸೂರಿನ ಯವಕನ ಸಾವಿನ ರಹಸ್ಯ ಇನ್ನೂ ನಿಗೂಢ

ಒಟ್ಟಿನಲ್ಲಿ ಕೊರೋನಾ ಮಹಾಮಾರಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ಎದೆಗುಂದದೆ ಬದುಕಿಗೊಂದು ಆಸರೆ ಕಟ್ಟಿಕೊಂಡಿದ್ದವರ ಬದುಕಿಗೂ ಕೊರೋನಾ ಬರೆ ಎಳೆದಿದೆ. ಹೀಗಾಗಿ ಸಂತ್ರಸ್ತರಿಗೆ ಇದ್ದ ಆಸರೆಯೂ ಇಲ್ಲದಂತೆ ಆಗಿದ್ದು, ಮುಂದಿನ ಬದುಕು ಹೇಗೆ ಎಂಬ ಆತಂಕ ಶುರುವಾಗಿದೆ.
Published by: HR Ramesh
First published: July 8, 2020, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading