ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ರೈತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಇವೆರಡರ ನಡುವೆ ಈ ಕಳೆದ ಮೂರು ದಿನಗಳಿಂದ ಬುರೇವಿ ಚಂಡಮಾರುತ್ತದ ಎಫೆಕ್ಟ್ ಕೊಡಗಿನ ರೈತರನ್ನು ಇನ್ನಷ್ಟು ಹೈರಾಣಾಗಿಸಿದೆ.
ಹೌದು, ಮೂರು ವರ್ಷಗಳಿಂದ ಭೂಕುಸಿತ, ಪ್ರವಾಹದಿಂದ ಕೊಡಗಿನ ರೈತರು ತತ್ತರಿಸಿದ್ದರು. ಅವೆಲ್ಲವನ್ನೂ ಹೇಗೋ ನಿಭಾಯಿಸಿಕೊಂಡು ಸಮಸ್ಯೆಯಿಂದ ಹೊರ ಬರುತ್ತಿದ್ದ ಜಿಲ್ಲೆಯ ಅನ್ನದಾತನಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಬುರೇವಿ ಚಂಡಮಾರುತ್ತ ಮತ್ತೆ ಪೆಟ್ಟು ನೀಡಿದೆ. ಹೌದು ಚಂಡಮಾರುತ್ತದ ಪರಿಣಾಮವಾಗಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದೆ. ಜೊತೆಗೆ ಮುಂಜಾನೆಯಿಂದ ಬೆಳಿಗ್ಗೆ 10 ಗಂಟೆ ವರೆಗೆ ಜಿಲ್ಲೆಯ ಹಲವೆಡೆ ತುಂತುರು ಮಳೆ ಬೀಳುತ್ತಿದೆ. ಭಾರೀ ಪ್ರಮಾಣದಲ್ಲಿ ಬೀಸುತ್ತಿರುವ ಗಾಳಿಗೆ ಈಗಾಗಲೇ ಕೊಯ್ಲಿಗೆ ಬಂದಿರುವ ನೂರಾರು ಎಕರೆ ಭತ್ತದ ಬೆಳೆ ಸಂಪೂರ್ಣ ಬಿದ್ದಿದೆ. ಇದರಿಂದ ಅದನ್ನು ಕೊಯ್ಲು ಮಾಡುವುದು ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಮತ್ತೊಂದೆಡೆ ಎಷ್ಟೋ ಗದ್ದೆಗಳು ಇನ್ನೂ ಒಣಗಬೇಕಾಗಿದ್ದು, ಇಲಿ- ಹೆಗ್ಗಣಗಳು ಭಾರೀ ಪ್ರಮಾಣದಲ್ಲಿ ಬೆಳೆಯನ್ನು ನಾಶಮಾಡುತ್ತಿದೆ. ತುಂತುರು ಮಳೆಯೂ ಬರುತ್ತಿರುವುದರಿಂದ ಕೊಯ್ಲಿಗೆ ಬಂದಿರುವ ಭತ್ತದ ಬೆಳೆ ಕರಗಿ ಹೋಗುವ ಆತಂಕವೂ ಎದುರಾಗಿದೆ ಎನ್ನುತ್ತಾರೆ ಬೆಟ್ಟತ್ತೂರಿನ ರೈತ ನಾಗೇಶ್.
ಇದನ್ನು ಓದಿ: ಹೆಂಡತಿಗೆ ಅವಿರೋಧವಾಗಿ ಗ್ರಾಪಂ ಅಧ್ಯಕ್ಷಗಿರಿ ಕೊಡಿಸಲು 25 ಲಕ್ಷ ಆಫರ್ ನೀಡಿದ ವಿರಾಜಪೇಟೆ ತಹಸೀಲ್ದಾರ್?
ಮಗದೊಂದೆಡೆ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಬಿದ್ದಿರುವ ಭತ್ತದ ಬೆಳೆಯ ಮೇಲೆಲ್ಲಾ ಓಡಾಡಿ ಇಡೀ ಭತ್ತ ಗದ್ದೆಯಲ್ಲಿ ಉದುರಿ ಅಲ್ಲಿಯೇ ಮೊಳಕೆಯೊಡೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಅದರಲ್ಲೂ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು, ಮೊಣ್ಣಂಗೇರಿ ಜೋಡುಪಾಲ ಸೇರಿದಂತೆ ಜಿಲ್ಲೆಯ ಹಲವೆಡೆ ಭತ್ತ ಹಾಗೂ ಕಾಫಿ ಮೋಡ ಕವಿದ ವಾತಾವರಣದಿಂದ ಒಕ್ಕಣೆ ಮಾಡುವುದೇ ಕಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ