ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತು ಅಂದರೆ ಸಾಕು, ಯಾವಾಗ ಪ್ರವಾಹ, ಎಲ್ಲಿ ಭೂ ಕುಸಿತ ಆರಂಭವಾಗುತ್ತದೆಯೋ ಎನ್ನುವ ಆತಂಕದಲ್ಲೇ ಜನರು ಬದುಕು ದೂಡುತ್ತಾರೆ. ಈ ನಡುವೆ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳೇ ಕುಸಿಯುವ ಆತಂಕ ಎದುರಾಗಿದೆ. 2018 ರಲ್ಲಿ ಜಿಲ್ಲೆಯ 37 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂ ಕುಸಿತ ಸಂಭವಿಸಿತ್ತು. ಈ ವೇಳೆ ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಹಲವೆಡೆ ಕುಸಿದಿತ್ತು. ಈ ಬಾರಿ ಜೂನ್ ತಿಂಗಳಲ್ಲೇ ಸುರಿಯುತ್ತಿರುವ ಮಳೆ ಹೆದ್ದಾರಿಗಳಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.
ಹಲವೆಡೆ ಹೆದ್ದಾರಿಗಳಲ್ಲಿ ಬಿರುಕು ಮೂಡಿದ್ದು, ಅವುಗಳು ಕುಸಿದು ಹೋಗುವ ಆತಂಕವಿದೆ. ಹೀಗಾಗಿಯೇ 2018 ರಲ್ಲಿ ಕುಸಿದು ಮತ್ತೆ ಅದೇ ಸ್ಥಳಗಳಲ್ಲಿ ಎಲ್ಲೆಡೆ ಮಳೆ ನೀರು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ರಕ್ಷಿಸಲಾಗುತ್ತಿದೆ. ಆದರೆ 2018 ರಿಂದ ಪ್ರತೀ ವರ್ಷದ ಮಳೆಗಾಲದಲ್ಲಿ ಕುಸಿದಿರುವ ರಸ್ತೆ ಬದಿಗೆ ಮರಳು ತುಂಬಿದ ಚೀಲಗಳನ್ನು ತುಂಬಿ ರಸ್ತೆಗೆ ತಡೆಗೋಡೆಯಂತೆ ಇಡಲಾಗುತ್ತಿದೆ. ಆದರೆ ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಇದಕ್ಕಾಗಿ ಸರ್ಕಾರ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಇದು ಜನರ ತೆರಿಗೆಯ ಹಣವನ್ನು ಪ್ರತೀ ವರ್ಷ ಸರ್ಕಾರ ಮತ್ತು ಜಿಲ್ಲಾಡಳಿತ ಪೋಲು ಮಾಡುತ್ತಿದೆ ಎನ್ನೋದು ಎಂಎಲ್ಸಿ ವೀಣ್ಣಾ ಅಚ್ಚಯ್ಯ ಅವರ ಗಂಭೀರ ಆರೋಪ.
ಇದು ಮಂಗಳೂರು - ಮಡಿಕೇರಿ ರಸ್ತೆ ಕಥೆ ಅಷ್ಟೇ ಅಲ್ಲ. ಮಡಿಕೇರಿಯಿಂದ ವಿರಾಜಪೇಟೆ, ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳ ಕಥೆ ಕೂಡ ಇದೇ ಆಗಿದೆ. ಮಡಿಕೇರಿಯಿಂದ ವಿರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಡಿಕೇರಿ ಹೊರವಲಯದಲ್ಲೇ ರಸ್ತೆಯ ಕಡಿದಾದ ಜಾಗಗಳಲ್ಲಿ ಹೆದ್ದಾರಿ ಕುಸಿಯುವ ಪರಿಸ್ಥಿತಿ ಎದುರಾಗಿದೆ. ಹೆದ್ದಾರಿಯಿಂದ ತಮ್ಮ ಮನೆಗಳಿಗೆ ಹೋಗಲು ಜನರು ಸಂಪರ್ಕ ರಸ್ತೆಗಳಿಗಾಗಿ ಭಾರಿ ಪ್ರಮಾಣದಲ್ಲಿ ಇಳಿಜಾರು ಪ್ರದೇಶಗಳನ್ನು ಕೊರೆದಿದ್ದಾರೆ. ಅಲ್ಲದೆ ಇತ್ತೀಚೆಗೆ ಅಷ್ಟೇ ಮಡಿಕೇರಿಯಿಂದ ಮೇಕೇರಿವರೆಗೆ ರಸ್ತೆ ಕಾಂಕ್ರೀಟೀಕರಣ ಮಾಡುವಾಗ ಹಲವು ಕಡೆಗಳಲ್ಲಿಯೂ ರಸ್ತೆ ಇಳಿಜಾರಿನಲ್ಲಿ ಡ್ಯಾಮೇಜ್ ಆಗಿದೆ. ಇವೆಲ್ಲವೂ ಹಲವೆಡೆ ರಸ್ತೆ ಕುಸಿದು ಹೋಗುವ ಆತಂಕವಿದ್ದು, ಯಾವಾಗ ವಿರಾಜಪೇಟೆ ರಸ್ತೆ ಕುಸಿದು ಅನಾಹುತ ಸೃಷ್ಟಿಸುವುದೋ ಎನ್ನುವ ಆತಂಕ ಎದುರಾಗಿದೆ. ಇನ್ನು ಸೋಮವಾರಪೇಟೆ ರಸ್ತೆಯಲ್ಲೂ ಮಾದಾಪುರದವರೆಗೆ ಇಂತಹ ಅಪಾಯದ ಘಟನೆಗಳು ಹಲವು ಇವೆ. ಒಂದು ವೇಳೆ ಈ ಹೆದ್ದಾರಿಗಳು ಕುಸಿದಿದ್ದೇ ಆದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರವಾಹ ಮತ್ತು ಭೂ ಕುಸಿತದಂತಹ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವುದು ದುಸ್ಥರವಾಗಿ ಬಿಡುತ್ತದೆ.
ಜಿಲ್ಲೆಯಲ್ಲಿ ಹೆದ್ದಾರಿಗಳು ಕುಸಿಯುವ ಭೀತಿ ಇರುವುದರಿಂದಲೇ ಜಿಲ್ಲಾಡಳಿತ ಈಗಾಗಲೇ ಜಿಲ್ಲೆಗೆ ಭಾರೀ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ. ಸೆಪ್ಟೆಂಬರ್ 15 ರವರೆಗೆ ಯಾವುದೇ ಭಾರಿ ವಾಹನಗಳು ಓಡಾಡದಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಯೋಗದಲ್ಲಿ ಅದ್ಭುತ ಸಾಧನೆಗೈದ 14ರ ಪೋರ; ವಿದೇಶಗಳಲ್ಲೂ ಕಮಾಲ್ ಮಾಡಿದ ಕನ್ನಡಿಗ!
ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭೂ ಕುಸಿತ, ಪ್ರವಾಹ ಸಂಭವಿಸಿ ಸಾಕಷ್ಟು ಹಾನಿ ಸೃಷ್ಟಿಸಿದೆ. ಈ ವರ್ಷವೂ ಸಹ ಕೊಡಗಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಮುಂದೆ ಯಾವ ಅನಾಹುತ ಸೃಷ್ಟಿಸಲಿದೆಯೋ ಎಂಬ ಆತಂಕ ಇಲ್ಲಿನ ಜನರು ಹಾಗೂ ಜಿಲ್ಲಾಡಳಿತಕ್ಕೆ ಎದುರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ