ಪರ್ಯಾಯ ವ್ಯವಸ್ಥೆ ಮಾಡದೆ ಪ್ರವಾಹವೆಂದು ಮನೆ ಖಾಲಿ ಮಾಡುವಂತೆ ಕೊಡಗು ಜಿಲ್ಲಾಡಳಿತ ನೊಟೀಸ್

ಸುಮ್ಮನೆ ಮನೆಗಳನ್ನು ಖಾಲಿ ಮಾಡಿ ಎಂದರೆ ಎಲ್ಲಿಗೆ ಅಂತಾ ಹೋಗುವುದು ಎನ್ನೋದು ಜನರ ಪ್ರಶ್ನೆ. ಕಳೆದ ಬಾರಿಯ ಪ್ರವಾಹದಲ್ಲಿ ಮನೆಗಳೆಲ್ಲಾ ಕೊಚ್ಚಿ ಹೋಗಿದ್ದವು. ಎಷ್ಟೋ ಮನೆಗಳು ಸಂಪೂರ್ಣ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಿಲ್ಲದ ಸ್ಥಿತಿಯಲ್ಲಿವೆ. ಅವುಗಳಲ್ಲೇ ಇಂದಿಗೂ ಬದುಕುತ್ತಿದ್ದು, ಯಾವಾಗ ಬಿದ್ದು ಹೋಗುತ್ತವೆಯೋ ಎನ್ನೋ ಆತಂಕದಲ್ಲಿ ಕಾಲ ದೂಡುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ. 

ಕಳೆದ ಪ್ರವಾಹದಲ್ಲಿ ಹಾನಿಗೊಳಗಾದ ಮನೆ.

ಕಳೆದ ಪ್ರವಾಹದಲ್ಲಿ ಹಾನಿಗೊಳಗಾದ ಮನೆ.

  • Share this:
ಕೊಡಗು(ಜೂ.13): ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಆಗೊಮ್ಮೆ ಈಗೊಮ್ಮೆ ಸಾಧಾರಣ ಮಳೆ ಸುರಿಯುತ್ತಿದೆ. ಆದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಸಹಜವಾಗಿಯೇ ಅದು ವಿಪರೀತವಾಗುತ್ತದೆ. ಒಂದು ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದೇ ಆದಲ್ಲಿ ನದಿ ಪಾತ್ರದ ಜನರಿಗೆ ಮತ್ತೆ ಕಂಟಕ ತಪ್ಪಿದಲ್ಲ. ಹೀಗಾಗಿ ನದಿ ಪಾತ್ರದ ಜನರಿಗೆ ಮನೆಗಳನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಆದರೆ ಪರ್ಯಾಯ ವ್ಯವಸ್ಥೆಗಳನ್ನೇ ಮಾಡದೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಜನರಿಂದ ಆಕ್ರೋಶವೂ ವ್ಯಕ್ತವಾಗಿದೆ.

2019 ರಲ್ಲಿ ಕೊಡಗಿನಲ್ಲಿ ಭಾರೀ ಮಳೆ ಸುರಿದು ಕಂಡುಕೇಳರಿಯದಷ್ಟು ಪ್ರವಾಹ ಎದುರಾಗಿತ್ತು. ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ನೂರಾರು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದವು. ಬಳಿಕ ಸಂತ್ರಸ್ಥರ ನಿರಂತರ ಹೋರಾಟದ ಫಲವಾಗಿ ಕೊನೆಗೂ ಜಿಲ್ಲಾಡಳಿತ ಮಡಿಕೇರಿ ತಾಲ್ಲೂಕಿನ ಅಭ್ಯತ್ ಮಂಗಲ ಬಳಿ ನಿರಾಶ್ರಿತರಿಗೆ ಜಾಗಗಳನ್ನು ಗುರುತಿಸಿ ನಿವೇಶನ ಹಂಚಲು ಮುಂದಾಗಿತ್ತು.

ಆದರೆ, ಇಂದಿಗೂ ನಿವೇಶನ ವಿತರಣೆ ಮಾಡಿಲ್ಲ. ಆದರೆ ಮಳೆಗಾಲ ಆರಂಭವಾಗಿರುವುದಿರಂದ ಮತ್ತೆ ಪ್ರವಾಹ ಎದುರಾಗಬಹುದು ಎಂದು ಮನೆಗಳನ್ನು ಖಾಲಿ ಮಾಡುವಂತೆ ಹಲವು ಹಳ್ಳಿಗಳ ನೂರಾರು ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಇತ್ತ ಪರ್ಯಾಯ ವ್ಯವಸ್ಥೆಯೂ ಇಲ್ಲದೆ, ಇರುವ ಮನೆಯನ್ನು ಬಿಟ್ಟು ಎಲ್ಲಿಗೆ ಹೋಗೋದು? ಎಂಬುದು ಜನರ ಚಿಂತೆ.

ಸುಮ್ಮನೆ ಮನೆಗಳನ್ನು ಖಾಲಿ ಮಾಡಿ ಎಂದರೆ ಎಲ್ಲಿಗೆ ಅಂತಾ ಹೋಗುವುದು ಎನ್ನೋದು ಜನರ ಪ್ರಶ್ನೆ. ಕಳೆದ ಬಾರಿಯ ಪ್ರವಾಹದಲ್ಲಿ ಮನೆಗಳೆಲ್ಲಾ ಕೊಚ್ಚಿ ಹೋಗಿದ್ದವು. ಎಷ್ಟೋ ಮನೆಗಳು ಸಂಪೂರ್ಣ ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಿಲ್ಲದ ಸ್ಥಿತಿಯಲ್ಲಿವೆ. ಅವುಗಳಲ್ಲೇ ಇಂದಿಗೂ ಬದುಕುತ್ತಿದ್ದು, ಯಾವಾಗ ಬಿದ್ದು ಹೋಗುತ್ತವೆಯೋ ಎನ್ನೋ ಆತಂಕದಲ್ಲಿ ಕಾಲ ದೂಡುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ. ಆದರೆ, ಜಿಲ್ಲಾಡಳಿತ ಮಾತ್ರ ಇದ್ಯಾವುದನ್ನು ಗಮನಿಸದೆ ಕೇವಲ ಮನೆ ಖಾಲಿ ಮಾಡುವಂತೆ ನೋಡಿ ನೀಡಿರುವುದಕ್ಕೆ ಸಂತ್ರಸ್ತರು ಪಂಚಾಯಿತಿ ಎದುರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಕೆ.ಗೋಪಾಲಯ್ಯ

ಒಟ್ಟಿನಲ್ಲಿ ಒಂದೆಡೆ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಆದರೆ ಕಳೆದ ಬಾರಿಯ ಸಂತ್ರಸ್ತರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡದೆ, ಕೇವಲ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
First published: