ಕೊಡಗು: ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಳ್ಳುವವರಿಗೆ ವ್ಯಾಕ್ಸಿನ್ ವಿತರಣೆ

ಕಳೆದ ಮೂರು ವರ್ಷಗಳಿಂದಲೂ ಪ್ರವಾಹದಂತಹ ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಕೊವಿಡ್ ಇರುವುದರಿಂದ ಜನರು ಸಂಬಂಧಿಕರ ಮನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು; ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ಜಿಲ್ಲೆಯಲ್ಲಿ ಅಪಾಯಗಳು ಎದುರಾಗುವ ಸಾಧ್ಯತೆಗಳಿವೆ. ಒಂದೆಡೆ ಪ್ರವಾಹ ಪರಿಸ್ಥಿತಿ ಎದುರಾದರೆ, ಮತ್ತೊಂದೆಡೆ ಭೂಕುಸಿತದಂತ ಘಟನೆಗಳು ನಡೆಯಬಹುದು. ಹೀಗಾಗಿ ಪ್ರವಾಹ ಮತ್ತು ಭೂಕುಸಿತ ಎದುರಾಗುವಂತಹ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡುವುದಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಕಾಳಜಿ ಕೇಂದ್ರದಲ್ಲಿ ಕೊವಿಡ್ ಹರಡುವ ಆತಂಕವೂ ಇರುವುದರಿಂದ ಸ್ಥಳಾಂತರಗೊಳ್ಳು ವಂತಹವರಿಗೆ ವ್ಯಾಕ್ಸಿನ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ನ್ಯೂಸ್ 18 ಕೂಡ ಕಳೆದ ವಾರವಷ್ಟೇ ಪ್ರವಾಹದ ನಡುವೆ ಕೊವಿಡ್ ಆತಂಕ ಎಂದು ಸುದ್ಧಿ ಪ್ರಸಾರ ಮಾಡಿತ್ತು.

ಕಳೆದ ಮೂರು ವರ್ಷಗಳಿಂದ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗುತ್ತಿದ್ದ ಪ್ರದೇಶಗಳು ಸೇರಿದಂತೆ ಈ ಬಾರಿ ಜಿಲ್ಲೆಯಲ್ಲಿ 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತಕ್ಕೆ ನಲುಗುವ ಸಾಧ್ಯತೆ ಇದೆಯಂತೆ. ಇಷ್ಟು ಗ್ರಾಮಗಳ 2800 ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಹೀಗಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳ ಬೇಕು ಎಂದು ಅಷ್ಟು ಕುಟುಂಬಗಳಿಗೂ ಜಿಲ್ಲಾಡಳಿತ ಈಗಾಗಲೇ ಆಯಾ ತಾಲ್ಲೂಕು ಆಡಳಿತ ಮತ್ತು ಪಂಚಾಯಿತಿಗಳ ಮೂಲಕ ನೊಟೀಸ್ ಜಾರಿ ಮಾಡಿದೆ.

ಇನ್ನು ದೂರದ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಲ್ಲಿ ಅಲ್ಲಿಗೆ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಜೊತೆಗೆ ಸ್ಥಳಾಂತರದ ಕೆಲಸವೂ ಕಷ್ಟಕರವಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಕೆಲವು ಕಡೆಗಳಲ್ಲಿ ಜನರು ಸ್ಥಳಾಂತರಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದು ಒಳ್ಳೆಯದಲ್ಲ, ಒಂದು ವೇಳೆ ಪ್ರವಾಹ ಅಥವಾ ಭೂಕುಸಿತದಂತಹ ಘಟನೆಗಳು ನಡೆದರೆ, ತಕ್ಷಣವೇ ಎಲ್ಲರನ್ನೂ ರಕ್ಷಣೆ ಮಾಡುವ ಕೆಲಸ ಕಷ್ಟವಾಗುತ್ತದೆ. ಆದ್ದರಿಂದ ಜನರು ಸ್ಥಳಾಂತರಗೊಳ್ಳುವುದು ಉತ್ತಮ ಎಂದಿದ್ದಾರೆ.

ಇದನ್ನೂ ಓದಿ: Sanchari Vijay RIP| ಸಂಚಾರಿ ವಿಜಯ್ ಹುಟ್ಟೂರಲ್ಲಿ ನೀರವ ಮೌನ; ನಟನನ್ನು ನೆನೆದು ಕಣ್ಣೀರಿಟ್ಟ ಗೆಳೆಯ, ಸಾಕಿ ಬೆಳೆಸಿದ ತಾಯಿ!

ಕಳೆದ ಮೂರು ವರ್ಷಗಳಿಂದಲೂ ಪ್ರವಾಹದಂತಹ ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಕೊವಿಡ್ ಇರುವುದರಿಂದ ಜನರು ಸಂಬಂಧಿಕರ ಮನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ ಸಂಬಂಧಿಕರ ಮನೆಗೆ ಹೋದರೂ ಅವರು ತಮ್ಮನ್ನು ಆತಂಕದಿಂದ ಬೇರೆಯದೇ ರೀತಿಯಲ್ಲಿ ನೋಡುತ್ತಾರೆ. ಇಂತಹ ಸ್ಥಿತಿಯಲ್ಲಿ ಸಂಬಂಧಿಕರ ಮನೆಗೆ ಹೋಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಸ್ಥಳಾಂತರಗೊಳ್ಳಬೇಕಾಗಿರುವ ಜನರು. ಆದರೆ ಕಾಳಜಿ ಕೇಂದ್ರಗಳಲ್ಲಿ ಹೆಚ್ಚಿನ ಜನರು ಒಂದೆಡೆ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ.

ಇದನ್ನೂ ಓದಿ: TamilNadu Politics| ತಮಿಳುನಾಡು ರಾಜಕಾರಣಕ್ಕೆ ಚಿನ್ನಮ್ಮ ಎಂಟ್ರಿ; ಚುನಾವಣೆ ಬೆನ್ನಿಗೆ AIADMK ಯಲ್ಲಿ ಬಂಡಾಯದ ಬಿರುಗಾಳಿ

ಹೀಗಾಗಿ ಸ್ಥಳಾಂತರಗೊಳ್ಳಬೇಕಾಗಿರುವ ಕುಟುಂಬಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೂಡಲೇ ವ್ಯಾಕ್ಸಿನ್ ಹಾಕಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆ ತಹಶೀಲ್ದಾರ್ ಗಳಿಂದ ಮಾಹಿತಿ ಪಡೆದು ಸ್ಥಳಾಂತರ ಗೊಳ್ಳುತ್ತಿರುವ ಕುಟುಂಬಗಳಿಗೆ ವ್ಯಾಕ್ಸಿನ್ ವಿತರಣೆಗೆ ಮುಂದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: