ಕೊಡಗು: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಗುರುವಾರ ಕುದ್ದು ಫೀಲ್ಡಿಗಿಳಿದಿದ್ದರು. ಮಡಿಕೇರಿ ನಗರದ ವಿವಿಧ ಬೀದಿಗಳಲ್ಲಿ ಅನಿರೀಕ್ಷಿತವಾಗಿ ಓಡಾಡಿದ ಜಿಲ್ಲಾಧಿಕಾರಿ ಮಾಸ್ಕ್ ಹಾಕದೆ ಓಡಾಡುತ್ತಿದ್ದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಸ್ವತಃ ಅವರೇ ಸ್ಥಳದಲ್ಲಿಯೇ 70 ಜನರಿಗೆ ದಂಡ ವಿಧಿಸಿ ಕೋವಿಡ್ ನಿಯಮ ಪಾಲಿಸದಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಡಿಕೇರಿ ನಗರದ ಅಂಚೆ ಕಚೇರಿ ಬಳಿಯಿಂದ ರಸ್ತೆಯಲ್ಲಿ ನಡೆದುಕೊಂಡೇ ಓಡಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಕಾಲೇಜು ರಸ್ತೆ, ಮಾರುಕಟ್ಟೆ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ಕೇವಲ ಒಂದು ಗಂಟೆಯಲ್ಲಿ ಮಾಸ್ಕ್ ಹಾಕದ 70 ಜನರಿಗೆ ದಂಡ ವಿಧಿಸಿ 7 ಸಾವಿರ ದಂಡ ಸಂಗ್ರಹಿಸಿದ್ದಾರೆ. ಈ ವೇಳೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಅವರು ಜಿಲ್ಲಾಧಿಕಾರಿ ಅವರೊಂದಿಗೆ ಸಾಥ್ ನೀಡಿದ್ದಾರೆ. ಬಳಿಕ ರಾಮದಾಸ್ ಜೊತೆಗೆ ಚರ್ಚಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಂಗಡಿ ಮುಂಗಟ್ಟು, ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸಿರಲೇಬೇಕು. ಒಂದು ವೇಳೆ ಮಾಸ್ಕ್ ಧರಿಸದೇ ಇದ್ದಲ್ಲಿ ಅಂಗಡಿ ಮುಂಗಟ್ಟು, ಹೊಟೇಲ್ ಮತ್ತು ರಸ್ಟೋರೆಂಟ್ ಗಳ ಮಾಲೀಕರಿಗೆ ದಂಡ ವಿಧಿಸಿ ಅಂತ ಸೂಚಿಸಿದ್ದಾರೆ. ಅಲ್ಲದೇ ಅವರ ವ್ಯಾಪಾರ ಉದ್ದಿಮೆ ಪರವಾನಗಿಯನ್ನು ಕೋವಿಡ್ ಮುಗಿಯುವವರೆಗೂ ರದ್ದು ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ...! ಗದಗಿನಲ್ಲಿ ಅಬ್ಬರಿಸಿದ ವರುಣ, ಜನರ ಪರದಾಟ
ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯವೆಂದು ಅಂಗಡಿಗಳ ಮುಂದೆ ಬೋರ್ಡ್ ಹಾಕಿ, ಸ್ಯಾನಿಟೈಸರ್ ಇಡುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಈ ಕುರಿತು ಈಗಾಗಲೇ ಅಂಗಡಿ ಮುಂಗಟ್ಟು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಮಾಲೀಕರಿಗೆ ಸೂಚನಾ ಪತ್ರ ಕಳುಹಿಸಿರುವುದಾಗಿ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ತಿಳಿಸಿದ್ದಾರೆ. ಇತ್ತ ಗುರುವಾರ ಮಡಿಕೇರಿ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಬಂದಿದ್ದ ಬಹುತೇಕ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮಡಿಕೇರಿಯ ನಗರಸಭೆಯಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಹುತೇಕ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಕೊನೆಯ ದಿನವೆಂದು ನಾಮಪತ್ರ ಸಲ್ಲಿಕೆಗೆ ಒಟ್ಟೊಟ್ಟಿಗೆ ಬಂದಿದ್ದರಿಂದ ನಗರಸಭೆಯ ಆವರಣದಲ್ಲಿ ನೂಕುನುಗ್ಗಲು ಉಂಟಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ