ಇಲ್ಲಿನ ಸೋಂಕಿತರು ನಿಜಕ್ಕೂ ಲಕ್ಕಿ.. ಕೋವಿಡ್ ಕೇರ್ ಸೆಂಟರ್​​ನಲ್ಲಿ ಭರ್ಜರಿ ಬಾಡೂಟ!

ಸೋಂಕಿತರಿಗೆ ಬಾಯಿಗೆ ರುಚಿಸುವಂತೆ ವಾರದಲ್ಲಿ ಒಮ್ಮೆ ಮಾಂಸದ ಊಟ ಮತ್ತು ವಾರದಲ್ಲಿ ಎರಡು ಬಾರಿ ಮೊಟ್ಟೆ ಖಾದ್ಯಗಳ ಮೂಲಕ ಸೋಂಕಿತರಿಗೆ ಭರ್ಜರಿ ಬಾಡೂಟ ನೀಡಲಾಗುತ್ತಿದೆ.

ಕೋವಿಡ್​ ಸೆಂಟರ್​ನಲ್ಲಿನ ನಾನ್​​ ವೆಜ್​ ಖಾದ್ಯ

ಕೋವಿಡ್​ ಸೆಂಟರ್​ನಲ್ಲಿನ ನಾನ್​​ ವೆಜ್​ ಖಾದ್ಯ

  • Share this:
ಕೊಡಗು : ಕೋವಿಡ್ ಕೇರ್ ಸೆಂಟರ್ ಅಂದ್ರೆ ಕೇವಲ ಸಮಸ್ಯೆಗಳ ಆಗರ ಎನ್ನೋ ಸ್ಥಿತಿ ಎಷ್ಟೋ ಕಡೆಗಳಲ್ಲಿ ಇರಬಹುದು. ಊಟ-ತಿಂಡಿ ಚೆನ್ನಾಗಿಲ್ಲ ಎನ್ನೋ ದೂರುಗಳು ಹೊಸದೇನು ಅಲ್ಲ. ಆದರೆ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಹಾಗಲ್ಲ. ಸರ್ಕಾರ ನೀಡಿರುವ ಮೆನು ಬದಲಿಗೆ ಕೊಡಗಿನ ಆಹಾರ ಪದ್ಧತಿಯ ರೀತಿಯಲ್ಲೇ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇರುವವರಿಗೆ ಆಹಾರ ನೀಡಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಸೋಂಕಿತರಿಗೆ ಬಾಯಿಗೆ ರುಚಿಸುವಂತೆ ವಾರದಲ್ಲಿ ಒಮ್ಮೆ ಮಾಂಸದ ಊಟ ಮತ್ತು ವಾರದಲ್ಲಿ ಎರಡು ಬಾರಿ ಮೊಟ್ಟೆ ಖಾದ್ಯಗಳ ಮೂಲಕ ಸೋಂಕಿತರಿಗೆ ಭರ್ಜರಿ ಬಾಡೂಟ ನೀಡಲಾಗುತ್ತಿದೆ.

ಇದು ಸೋಂಕಿತರಿಗೆ ಫುಲ್ ಖುಷಿಯಾಗುವಂತೆ ಮಾಡಿದೆ. ಕೊರೋನಾ ಸೋಂಕು ತಗುಲಿರುವವರಿಗೆ ಟೇಸ್ಟ್ ಇರೋದಿಲ್ಲ ಎನೋದು ಸತ್ಯವೇ. ಅಂತಹವರಿಗೆ ಮಾಮೂಲಿ ಸೊಪ್ಪು, ತರಕಾರಿಗಳ ಊಟ ನೀಡಿದ್ರೆ ಹೇಗೆ. ಅದರಲ್ಲೂ ಮಾಂಸ ಪ್ರಿಯರಾಗಿರುವ ಕೊಡಗಿನ ಜನತೆ ಅಂತಹ ಊಟಗಳು ಅಪಥ್ಯವೇ ಸರಿ. ಹೀಗಾಗಿ ಟೇಸ್ಟಿಯಾದ ಊಟ ಇರಲಿ ಅಂತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇರುವ ಸೋಂಕಿತರಿಗೆ ವಾರದಲ್ಲಿ ಒಮ್ಮೆ ಚಿಕನ್ ಊಟ ಮತ್ತು ಮೊಟ್ಟೆ ಮಸಾಲೆಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಸೋಂಕಿತರು ಬಾದಾಮಿ, ರಾಗಿ ಸೇರಿ ಈ 5 ಆಹಾರ ಸೇವಿಸಿದ್ರೆ ಸಾಕಂತೆ; ಕೇಂದ್ರದಿಂದಲೇ ಅಧಿಕೃತ ಸಲಹೆ

ಸರ್ಕಾರ ಕೋವಿಡ್ ಕೇರ್, ಕೋವಿಡ್ ಆಸ್ಪತ್ರೆಗಳಲ್ಲಿ ಇರುವವರಿಗೆ ಇಂದಹದ್ದೇ, ಇಂತಿಷ್ಟೇ ಆಹಾರ ಕೊಡಬೇಕು ಎನ್ನೋ ಮೆನು ಮಾಡಿದೆ. ಆ ಮೆನು ಪ್ರಕಾರ ಆಹಾರ ನೀಡೋದಾದ್ರೆ, ತಿಂಡಿಗೆ ಚಿತ್ರಾನ್ನ, ಪೊಂಗಲ್, ಬಿಸಿಬೇಳೆ ಬಾತ್ ಹಾಗೂ ಊಟಕ್ಕೆ ಅನ್ನ-ಸಾಂಬಾರ್ ನೀಡಬೇಕು. ಕೊಡಗಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಅನ್ನದ ಆಹಾರಗಳನ್ನು ಬಳಸೋದು ಕಡಿಮೆ. ಒಂದು ವೇಳೆ ಅವುಗಳನ್ನು ನೀಡಿದರೆ ಕೊಡಗಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇನ್ನಿಲ್ಲದ ಸಮಸ್ಯೆ ಎದುರಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಕೊಡಗಿನ ಆಹಾರ ಪದ್ಧತಿಯಂತೆ ಕಡುಬು ಅದಕ್ಕೆ ಸಾಗು, ದೋಸೆ, ಚಪಾತಿ ಇಂತಹವುಗಳನ್ನು ನೀಡಲಾಗುತ್ತಿದೆ.

ಸರ್ಕಾರ ಮೆನು ಪ್ರಕಾರ ಮೊಟ್ಟೆಯನ್ನು ಕೊಡಲು ಅವಕಾಶವಿದ್ರೂ, ಅದು ಬಾಯಿಗೆ ರುಚಿಸದಿರಬಹುದು ಎಂದು ಮೊಟ್ಟೆ ಜೊತೆಗೆ ಮಸಾಲ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಕೋವಿಡ್ ಕೇರ್ ಸೆಂಟರ್ ಗೆ ಆಹಾರ ಪೂರೈಸುವ ಮೇಲುಸ್ತುವಾರಿ ಹೊತ್ತಿರುವ ಅಧಿಕಾರಿ ಕವಿತಾ. ಅದಕ್ಕಿಂತ ಮುಖ್ಯವಾಗಿ ವಾರದಲ್ಲಿ ಒಂದು ದಿನ ಚಿಕನ್ ಊಟ ಪೂರೈಸಲಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಮಸಾಲೆಯನ್ನು ಬಳಸಿ ಚಿಕನ್ ಮಾಡಿ ಅದರ ಜೊತೆಗೆ ಚಪಾತಿ ಪೂರೈಸಲಾಗುತ್ತಿದೆ. ಕೊಡಗಿನಲ್ಲಿ ಸಹಜವಾಗಿ ಹೆಚ್ಚು ಮಾಂಸ ಪ್ರಿಯರಾಗಿದ್ದು, ಮಾಂಸದೂಟ ಇಲ್ಲದಿದ್ದರೆ ಬಾಯಿಗೆ ರುಚಿಸೋದಿಲ್ಲ.

ಹೀಗಾಗಿ ಸರ್ಕಾರದ ಮೆನುಗೆ ಬದಲಾಗಿ ರುಚಿಕಟ್ಟಾದ ಮತ್ತು ಕೊಡಗಿನ ಆಹಾರ ಪದ್ಧತಿಯ ಊಟವನ್ನೇ ಪೂರೈಸಲಾಗುತ್ತಿದೆ. ಇದು ಸೋಂಕಿತರಿಗೆ ತುಂಬಾನೇ ಖುಷಿ ಕೊಟ್ಟಿದೆ. ಹೀಗೆ ವಿಶೇಷ ಆಹಾರ ನೀಡೋದಕ್ಕೆ ಸರ್ಕಾರದ ಹಣದ ಜೊತೆಗೆ ಕೆಲವು ದಾನಿಗಳ ಕೊಡುಗೆಯೂ ಇದೆ.

ಇನ್ನು ರಾಜ್ಯದಲ್ಲಿಂದು ಹೊಸದಾಗಿ 16,604 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ ಬರೋಬ್ಬರಿ 411 ಜನ ಕೊರೋನಾಗೆ ಬಲಿಯಾಗಿದ್ದಾರೆ. ರಾಜ್ಯಾದ್ಯಂತ 44,473 ಮಂದಿ ಇಂದು ಗುಣಮುಖರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 4 ಸಾವಿರಕ್ಕೆ ಕೊರೊನಾ ಕೇಸ್​ಗಳ ಸಂಖ್ಯೆ ಇಳಿದಿದೆ. ಬೆಂಗಳೂರಿನಲ್ಲಿ ಇಂದು ಕೇವಲ 3,992 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 242 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕು ತಗ್ಗಿದ್ದರೂ ಸಾವಿನ ಪ್ರಮಾಣ ರಾಜ್ಯದಲ್ಲಿ ತಗ್ಗುತ್ತಿಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Kavya V
First published: