ಕೊಡಗು ಕೋವಿಡ್ ಸೋಂಕಿತರಿಗೆ ಹತ್ತು ಗಂಟೆಗೆ ಸಿಗುತ್ತಿದೆಯಂತೆ ಹಳಸಲು ಊಟ; ವಿಡಿಯೋ ಮಾಡಿ ಅಳಲು ತೋಡಿಕೊಂಡ ಮಹಿಳಾ ರೋಗಿಗಳು!

ಮೇ 6 ರಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿರ್ವಹಣೆ ಸಭೆಯಲ್ಲೂ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ ಎಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಕಾರ್ಯಪ್ಪ ಮತ್ತು ಸೂಪರಿಡೆಂಟೆಂಡ್ ಲೋಕೇಶ್ ಅವರ ಗಮನ ಸೆಳೆದಿದ್ದರು.

ರಾತ್ರಿ 10 ಗಂಟೆಗೆ ಹಳಸಿದ ಊಟ ನೀಡುತ್ತಿರುವುದು.

ರಾತ್ರಿ 10 ಗಂಟೆಗೆ ಹಳಸಿದ ಊಟ ನೀಡುತ್ತಿರುವುದು.

  • Share this:
ಕೊಡಗು: ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎನ್ನೋದು ಆಗಿಂದಾಗ್ಗೆ ಸಾಬೀತಾಗುತ್ತಿದೆ. ಸೋಮವಾರ ರಾತ್ರಿ ಕೂಡ ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯ ಮಹಿಳಾ ಕೋವಿಡ್ ಸೋಂಕಿತರಿರುವ ವಾರ್ಡಿಗೆ ರಾತ್ರಿ ಹತ್ತು ಗಂಟೆಯಲ್ಲಿ ಊಟ ನೀಡಲಾಗಿದೆ. ಅಷ್ಟು ತಡವಾಗಿ ನೀಡಿದ್ದ ಊಟವೂ ಸಂಪೂರ್ಣ ಹಳಸಿ ಹೋಗಿತ್ತು ಎಂದು ಸೋಂಕಿತರು ಅಳಲು ತೋಡಿಕೊಂಡು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆ ಮೂಲಕ ಮಡಿಕೇರಿ ಕೋವಿಡ್ ಆಸ್ಪತ್ರೆಯ ಕರ್ಮಕಾಂಡವನ್ನು ಸ್ವತಃ ಸೋಂಕಿತ ಮಹಿಳೆಯರೇ ಬಯಲು ಮಾಡಿದ್ದಾರೆ.

ಹೌದು, ಮಡಿಕೇರಿ ನಗರದಲ್ಲಿ ಇರುವ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿ ಹತ್ತು ಗಂಟೆಯಾದರೂ ಸೋಂಕಿತರಿಗೆ ಸರಿಯಾಗಿ ಊಟ ಸಿಗುತ್ತಿಲ್ಲವಂತೆ. ಹತ್ತು ಗಂಟೆಗೆ ಹಳಸಿದ ಅನ್ನ ಕೊಡುತ್ತಿದ್ದಾರಂತೆ. ರಾತ್ರಿ ಹತ್ತು ಗಂಟೆಗೆ ಊಟ ಕೊಡುತ್ತಿದ್ದೀರಲ್ಲಾ ಇದು ಸರಿನಾ ಎಂದು ಊಟ ನೀಡುವ ಸಿಬ್ಬಂದಿಯನ್ನು ಪ್ರಶ್ನಿಸಿರುವ ಸೋಂಕಿತರೊಬ್ಬರು ಅದೆಲ್ಲವನ್ನೂ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ. ಕೊಟ್ಟರು ಆ ಊಟ ಹಳಸಿಹೋಗಿರುತ್ತದೆ. ಹೀಗಾಗಿ ಅಲ್ಲಿಯ ಸೋಂಕಿತ ರೋಗಿಗಳು ಊಟ ಕೊಟ್ಟ ಎರಡು ನಿಮಿಷಕ್ಕೆ ಎಲ್ಲರೂ ಊಟ ಎಸೆಯಬೇಕಾಯಿತ್ತೆಂದು ಆ ವಾರ್ಡಿನಲ್ಲಿದ್ದ ಎಲ್ಲಾ ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.

ಒಬ್ಬೊಬ್ಬ ಸೋಂಕಿತ ಮಹಿಳೆಯೂ ಬೆಡ್ ಮೇಲೆ ಕುಳಿತು ತಮಗೆ ಕೊಟ್ಟಿರುವ ಊಟದಲ್ಲಿ ಅನ್ನ ಸಂಪೂರ್ಣ ಹಳಸಿ ಹೋಗಿದೆ ಎನ್ನೋದನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಸೋಂಕಿತ ರೋಗಿಗಳಲ್ಲಿ ಬಹುತೇಕ ಜನರು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ರಾತ್ರಿ ಹತ್ತು ಗಂಟೆಗೆ ಹಳಸಿದ ಅನ್ನ ಕೊಟ್ಟರೆ ಹೇಗೆ ತಿನ್ನಲು ಸಾಧ್ಯ ಎಂದು ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿ ಕೋವಿಡ್ ಆಸ್ಪತ್ರೆಯ ಕರ್ಮಕಾಂಡವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಇದನ್ನು ಓದಿ: ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಜತೆಗೆ 6 ವೆಂಟಿಲೇಟರ್ ಬೆಡ್ ಅಳವಡಿಕೆ; ಸಚಿವ ಕೆ. ಸುಧಾಕರ್

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೋಂಕಿತರನ್ನು ವೇಯ್ಟಿಂಗ್ ಕೊಠಡಿಯಲ್ಲಿ ದಿನವಿಡೀ ಒಂದೊಂದು ಬೆಡ್ ಮೇಲೆ ನಾಲ್ಕೈದು ರೋಗಿಗಳನ್ನು ಹಾಕಿ ಸತಾಯಿಸುತ್ತಿದ್ದಾರೆ ಎಂದು ಸೋಂಕಿನಿಂದ ಬಳಲುತ್ತಿದ್ದ ವಕೀಲರಾದ ಪವನ್ ಪೆಮ್ಮಯ್ಯ ಎಂಬುವವರು ವಿವಿಧ ತಪಾಸಣೆಗೆ ಆಸ್ಪತ್ರೆಗೆ ಹೋಗಿ ಅನುಭವಿಸಿದ್ದ ಸಮಸ್ಯೆ ಬಗ್ಗೆಯೂ ವಿಡಿಯೋ ಮಾಡಿ ಅಧಿಕಾರಿಗಳು ಮತ್ತು ಸಚಿವರ ಗಮನ ಸೆಳೆದಿದ್ದರು. ಮೇ 6 ರಂದು ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿರ್ವಹಣೆ ಸಭೆಯಲ್ಲೂ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ ಎಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಕಾರ್ಯಪ್ಪ ಮತ್ತು ಸೂಪರಿಡೆಂಟೆಂಡ್ ಲೋಕೇಶ್ ಅವರ ಗಮನ ಸೆಳೆದಿದ್ದರು.

ಈ ವೇಳೆ ಸಚಿವ ಸೋಮಣ್ಣ ಅವರು ಸೋಂಕಿತರಿಗೆ ಊಟ, ಬಿಸಿನೀರು ಇಂತಹವನ್ನು ಕೊಡುವುದಕ್ಕೆ ಸಮಸ್ಯೆ ಏನು ಎಂದು ತರಾಟೆಗೆ ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಇವೆಲ್ಲವನ್ನೂ ಗಮನಿಸಿದಾಗ ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆ ಇವೆ ಎನ್ನೋದನ್ನು ಸಾಬೀತು ಮಾಡಿವೆ.
Published by:HR Ramesh
First published: