ಕೊಡಗು: ಕಾವೇರಿ ಅದೊಂದು ನದಿಯಷ್ಟೇ ಅಲ್ಲ. ನಾಡಿನ ಲಕ್ಷಾಂತರ ಜನರ ಜೀವನಾಡಿಯೂ ಹೌದು. ಕಾವೇರಿ ಕೊಡಗಿನ ಕುಲದೇವತೆ ಅಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಆಕೆಯ ಲಕ್ಷಾಂತರ ಭಕ್ತರಿದ್ದಾರೆ. ಅಕ್ಟೋಬರ್ ತಿಂಗಳ ತುಲಾಸಂಕ್ರಮಣದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ವಿಶ್ವದರ್ಶನ ನೀಡುತ್ತಾಳೆ. ಆ ಕ್ಷಣಗಳಿಗಾಗಿಯೇ ಸಾವಿರಾರು ಭಕ್ತರು ಬಂದು ಆ ಮಾತೆಯನ್ನು ಜಪಿಸುತ್ತಾ ತಲಕಾವೇರಿಯಲ್ಲಿ ಕಾಯುತ್ತಿದ್ದರು. ಈ ಬಾರಿಯೂ ಅಕ್ಟೋಬರ್ 17 ರಂದು ಬೆಳಿಗ್ಗೆ 7 ಗಂಟೆ ಮೂರು ನಿಮಿಷಕ್ಕೆ ಕಾವೇರಿ ತೀರ್ಥರೂಪಿಣಿಯಾಗಲಿದ್ದಾಳೆ. ಆದರೆ ತೀರ್ಥರೂಪದಲ್ಲಿ ಜಗತ್ತಿಗೆ ದರ್ಶನ ನೀಡುವ ಕಾವೇರಿ ಮಾತೆಯನ್ನು ಈ ಬಾರಿ ಕೊರೋನಾದಿಂದಾಗಿ ನೇರವಾಗಿ ಕಣ್ತುಂಬಿಕೊಳ್ಳುವ ಭಾಗ್ಯವಿಲ್ಲ.
ಇಡೀ ರಾಜ್ಯದಲ್ಲಿ ಕೊರೋನಾ ಇರುವ ಪ್ರಮಾಣಕ್ಕಿಂತ ಕೊಡಗಿನಲ್ಲೇ ಡೆಡ್ಲಿ ವೈರಸ್ ಮಿತಿಮೀರುತ್ತಿದೆ ಎನ್ನೋದು ಆತಂಕದ ವಿಷಯ. ಜಿಲ್ಲೆಯಲ್ಲಿ ಶೇಕಡಾ 18 ರಷ್ಟು ಕೋವಿಡ್ ವೈರಸ್ ಹರಡಿದೆ. ಹೀಗಾಗಿಯೇ ಜಿಲ್ಲಾಡಳಿತ ಅರ್ಚಕರು, ದೇವಾಲಯ ಸಮಿತಿ ಮುಖಂಡರು ಮತ್ತು ಸ್ವಯಂ ಸೇವಕರನ್ನು ಹೊರತುಪಡಿಸಿ ಉಳಿದ ಯಾರಿಗೂ ತೀರ್ಥೋದ್ಭವದ ವೇಳೆಗೆ ಪ್ರವೇಶ ಇಲ್ಲ. ಇವರು ಕೂಡ 72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ಕೊರೊನಾ ನೆಗಟಿವ್ ವರದಿ ತಂದರೆ ಮಾತ್ರವೇ ತೀರ್ಥೋದ್ಭವದ ವೇಳೆ ಕೆಲಸ ನಿರ್ವಹಿಸಲು ಅವಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮ ಒಡೆದವರಿಗೆ ಬಿಜೆಪಿ ಸೇರಲು ಹೈಕಮಾಂಡ್ ಒಪ್ಪಲ್ಲ: ವಿಜುಗೌಡ ಎಸ್. ಪಾಟೀಲ
ಕಾವೇರಿ ತೀರ್ಥರೂಪಿಣಿಯಾಗುತ್ತಿದ್ದಂತೆ, ತಲಕಾವೇರಿಯಲ್ಲಿ ನೆರೆದಿರುತ್ತಿದ್ದ ಸಾವಿರಾರು ಭಕ್ತರು ಕೊಳದಲ್ಲಿ ಸ್ನಾನ ಮಾಡುತ್ತಿದ್ದರು. ಪಾಪ ತೊಳೆದುಕೊಂಡೆವೆಂದು ತೀರ್ಥ ಪಡೆದು ಪುನೀತರಾಗುತ್ತಿದ್ದರು. ಆದರೆ ಈ ಬಾರಿ ಕೊರೋನಾ ಮಿತಿಮೀರುತ್ತಿರುವುದರಿಂದ ಕೊಳದಲ್ಲಿ ಸ್ನಾನಕ್ಕೂ ಅವಕಾಶ ನಿರ್ಬಂಧಿಸಲಾಗಿದೆ. ತೀರ್ಥೋದ್ಭವದ ನಂತರ ಅಂದರೆ ಬೆಳಿಗ್ಗೆ 8 ಗಂಟೆ ಬಳಿಕ ಭಕ್ತರು ಎಂದಿನಂತೆ ತಲಕಾವೇರಿಗೆ ಭೇಟಿ ನೀಡಿ ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹೊರ ಜಿಲ್ಲೆಯಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ.
ಇನ್ನು ತೀರ್ಥೋದ್ಭವಕ್ಕೆ ಬರುತ್ತಿದ್ದ ಸಾವಿರಾರು ಭಕ್ತರಿಗೆ ಕೊಡಗು ಏಕೀಕರಣ ರಂಗ ಮತ್ತು ಮಂಡ್ಯದ ರೈತರು ಅನ್ನದಾನ ನಡೆಸುತ್ತಿದ್ದರು. ಕೋವಿಡ್ನಿಂದಾಗಿ ಅದಕ್ಕೂ ಅವಕಾಶವಿಲ್ಲ. ಅಷ್ಟೇ ಅಲ್ಲ, ತೀರ್ಥೋದ್ಭವದ ವೇಳೆ ನೂರಾರು ಭಕ್ತರು ಕೊಳದ ಬಳಿ ಕುಳಿತು ಭಜಿಸುತ್ತಿದ್ದರು. ಅದಕ್ಕೂ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ. ಇದು ಭಕ್ತರ ಭಾವನೆಗಳಿಗೆ ಘಾಸಿ ಮಾಡಿದೆ ಅಂತಾ ಕಾವೇರಿ ಭಕ್ತರಾದ ಎಂ. ಬಿ. ದೇವಯ್ಯ ಅವರ ಅಸಮಾಧಾನ.
ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ : ಜನಪ್ರತಿನಿಧಿಗಳ ಇಬ್ಬಗೆಯ ನೀತಿಗೆ ಸಾರ್ವಜನಿಕರ ಆಕ್ರೋಶ
ಒಟ್ಟಿನಲ್ಲಿ ಕೊರೋನಾ ಮಾಹಾಮಾರಿ ತೀರ್ಥೋದ್ಭವಕ್ಕೂ ಕಾಡಿದ್ದು, ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಿದ್ದ ತೀರ್ಥ ರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳುವುದಕ್ಕೂ ಅವಕಾಶ ಇಲ್ಲದಂತೆ ಆಗಿದೆ. ಆದರೆ ತೀರ್ಥೋದ್ಭದ ಬಳಿಕ ಒಂದು ತಿಂಗಳ ಕಾಲ ಕಾವೇರಿ ಮಾತೆ ಅಲ್ಲಿಯೇ ನೆಲೆಸಿರುತ್ತಾಳೆ ಎನ್ನೋ ನಂಬಿಕೆ ಹಿನ್ನೆಲೆಯಲ್ಲಿ, ಭಕ್ತರು ಒಮ್ಮೆಲೇ ನುಗ್ಗಿ ಕೊರೊನಾ ಹರಡುವುದಕ್ಕೆ ಅವಕಾಶ ನೀಡದೆ, ಸಮಾಧಾನಿತರಾಗಿ ದರ್ಶನ ಪಡೆದುಕೊಂಡಲ್ಲಿ ಎಲ್ಲವೂ ಸುಗಮವಾಗಲಿದೆ ಎಂಬುದು ಹಲವರ ಅಭಿಪ್ರಾಯ.
ವರದಿ: ರವಿ ಎಸ್ ಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ