ಚಿಕ್ಕಮಗಳೂರು: ಅದು ಕಾಫಿನಾಡ ದೊಡ್ಡ ನೀರಾವರಿ ಯೋಜನೆ. 30 ವರ್ಷಗಳಿಂದ ಆಮೆಗತಿಯಲ್ಲೇ ಇದೆ. ಬರೋ ರಾಜಕಾರಣಿಗಳೆಲ್ಲಾ ಈ ವರ್ಷ, ಮುಂದಿನ ವರ್ಷ ನೀರು ಬರುತ್ತೆ ಅಂತಾ ಮಾತಲ್ಲೇ ನೀರು ಹರಿಸಿದರೆಯೇ ವಿನಃ ನೈಸರ್ಗಿಕವಾಗಿ ನೀರನ್ನ ಹರಿಸಲಿಲ್ಲ. ಸದ್ಯ ರಾಜಕಾರಣಿಗಳ ಬಂಡವಾಳ ಅರ್ಥ ಮಾಡ್ಕೊಂಡ ಜನ ಇದೀಗ ಚುನಾವಣೆ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.
ಚಿಕ್ಕಮಗಳೂರಿನ ಬಹುಬೇಡಿಕೆಯ ಕರಗಡ ನೀರಾವರಿ ಯೋಜನೆಯಿಂದ ತಮಗೆ ಸಿಗಬಹುದಾದ ನೀರಿಗಾಗಿ ಜನರು 30 ವರ್ಷಗಳಿಂದಲೂ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ರಾಜಕಾರಣಿಗಳು, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ರೈತರ ಕನಸು ಕನಸಾಗೇ ಇದೆ. ದಶಕಗಳಿಂದಲೂ ಬರಗಾಲಕ್ಕೆ ತುತ್ತಾಗುತ್ತಿರುವ ಕಡೂರು ಹಾಗೂ ಚಿಕ್ಕಮಗಳೂರಿನ 60 ರಿಂದ 70 ಹಳ್ಳಿಗಳಿಗೆ ಕುಡಿಯುವ ನೀರಿಗೆ ಈ ಯೋಜನೆ ಜೀವನಾಡಿ. ಆದ್ರೆ, 22 ಲಕ್ಷದಲ್ಲಿ ಆರಂಭವಾದ ಯೋಜನೆ 3 ದಶಕದಲ್ಲಿ 17 ಕೋಟಿ ಗಡಿ ದಾಟಿದೆ. ಕರಗಡದ ಹೆಸರಲ್ಲಿ ಹಣದ ಕಂತೆಗಳು ರಾಜಕಾರಣಿಗಳು, ಅಧಿಕಾರಿಗಳ ಪಾಲಾಗ್ತಿದ್ದಂತೆ ಯೋಜನೆ ಹಳ್ಳ ಹಿಡಿಯಿತು.
ಕಾಮಗಾರಿಗಾಗಿ ಹಿಂದೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿರೋ ಸ್ಥಳ ವೀಕ್ಷಣೆಗೆ ಲೆಕ್ಕವಿಲ್ಲ. ಆದ್ರು ಕಾಮಗಾರಿ ಮುಗಿದಿಲ್ಲ ಎಂದು ರೈತರು ರಾಜಕಾರಣಿಗಳು-ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು. ಸದ್ಯ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಸಿಟ್ಟನ್ನ ತೀರಿಸಿಕೊಂಡಿರುವ ಜನ ಈ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಕೊಟ್ಟಿದ್ದ ಅಧಿಕಾರವನ್ನ ವಾಪಸ್ ಪಡೆದಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಶಾಸಕ ಸಿ.ಟಿ. ರವಿಯವರು ಆಯ್ಕೆಯಾಗುತ್ತಿದ್ದರೂ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಯೋಜನೆ ಪೂರ್ಣಗೊಳ್ಳಲಿಲ್ಲ ಎಂಬ ಜನರ ಸಿಟ್ಟನ್ನ ಕಾಂಗ್ರೆಸ್ ಲಾಭವಾಗಿ ಮಾಡಿಕೊಂಡಿದೆ.
ಇದನ್ನೂ ಓದಿ: ಭಾರತ ಸೇರಿ ಏಷ್ಯನ್ ಮಾರುಕಟ್ಟೆಗಳಿಗೆ ಕಚ್ಛಾ ತೈಲ ಬೆಲೆ ಏರಿಸಿದ ಸೌದಿ; ಪರ್ಯಾಯ ಮಾರ್ಗಕ್ಕೆ ಭಾರತ ಯತ್ನ
ಚಿಕ್ಕಮಗಳೂರು ತಾಲೂಕಿನಲ್ಲಿ ಬರೋ ಯೋಜನೆಗೆ ಒಳಪಡುವ ಕಳಸಾಪುರ, ಕೆ ಬಿ ಹಾಳ್, ಮಾಚೇನಹಳ್ಳಿ, ಸಿಂದಿಗೆರೆ ಸೇರಿದಂತೆ 8ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯರು ಗೆದ್ದು ಅಧಿಕಾರ ಹಿಡಿದಿದ್ದರು. ಆದ್ರೆ ಮೊನ್ನೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಅಧಿಕಾರ ಕಳೆದುಕೊಂಡು ಶಾಕ್‍ಗೆ ಒಳಗಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಅಧಿಕೃತವಾಗಿ ಪಕ್ಷಗಳ ಚಿಹ್ನೆಯಲ್ಲಿ ನಡೆಯದಿದ್ರೂ ಕೂಡ ಅಲ್ಲಿ ಚುನಾವಣೆಯಲ್ಲಿ ನಿಲ್ಲುವಂತಹ ಅಭ್ಯರ್ಥಿಗಳನ್ನ ಪಕ್ಷಗಳೇ ಆಯ್ಕೆ ಮಾಡಿ ಟಿಕೆಟ್ ಕೊಟ್ಟು ನಿಲ್ಲಿಸೋದು ಹಿಂದಿನಿಂದಲೂ ನಡೆದು ಬಂದಿದೆ. ಈ ಭಾಗದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಲು ಕರಗಡ ನೀರಾವರಿ ಯೋಜನೆಯೇ ಕಾರಣ ಅಂತಾ ಹೇಳಲಾಗುತ್ತಿದೆ.
ಒಟ್ಟಾರೆ, ಇದು ಸಿ.ಟಿ ರವಿ ಕ್ಷೇತ್ರದಲ್ಲೇ ಬರುವ ಮಹತ್ವದ ಯೋಜನೆಯಾಗಿದೆ. ಜನರಿಂದ ಮೇಲಿಂದ ಮೇಲೆ ಆಯ್ಕೆ ಆಗುತ್ತಿದ್ದರೂ ಕನಸಿನ ಯೋಜನೆಯ ನೀರು ಸಿಕ್ಕಿಲ್ಲ ಅನ್ನೋ ಅಸಮಾಧಾನ ಈ ಭಾಗದ ಲಕ್ಷಾಂತರ ರೈತರಲ್ಲಿ ಇರೋದಂತೂ ಸತ್ಯ. ಇದರ ಭಾಗವಾಗಿಯೇ ಮೊನ್ನೆ ನಡೆದ ಗ್ರಾಮ ಪಂಚಾಯ್ತಿ ಚುನವಾಣೆಯಲ್ಲಿ ರೈತರು ತಮ್ಮ ಸಿಟ್ಟನ್ನ ತೀರಿಸಿಕೊಂಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಈ ಯೋಜನೆ ರಾಜಕಾರಣಿಗಳಿಗೆ ಮತ ತಂದು ಕೊಡೋ ಅಕ್ಷಯಪಾತ್ರೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಇನ್ನಾದ್ರೂ ಸಂಬಂಧಪಟ್ಟೋರು ಇತ್ತ ಗಮನ ಹರಿಸಿ ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸುತ್ತಾರಾ ಅನ್ನೋದನ್ನ ಕಾದುನೋಡಬೇಕು.
ವರದಿ: ವೀರೇಶ್ ಹೆಚ್ ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ