news18-kannada Updated:February 13, 2021, 7:26 PM IST
ಬಂಧಿತ ಆರೋಪಿಗಳು.
ಕಲಬುರ್ಗಿ; ಯುವಕನೋರ್ವನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರೋ ಕಲಬುರ್ಗಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಅದೂ ಸಹ ಕೇವಲ 15 ಸಾವಿರ ರೂಪಾಯಿ ಗಳಿಗಾಗಿ ಕೊಲೆ ನಡೆದಿರೋದು ಅಚ್ಚರಿ ಮೂಡಿಸಿದೆ. ಹಣಕಾಸಿನ ವಿಚಾರಕ್ಕೆ ಯುವಕನ ಕಿಡ್ನ್ಯಾಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಲಬುರ್ಗಿ ಪೊಲೀಸರು ಮುವ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀಶೈಲ್, ಇಸ್ಮಾಯಿಲ್ ಮತ್ತು ಜೀತೆಂದ್ರ ಎಂದು ಗುರುತಿಸಲಾಗಿದೆ. ಕಲಬುರ್ಗಿಯ ದುಬೈ ಕಾಲೋನಿಯ ವಿರೇಶ್ ಭಿಮಳ್ಳಿ ಎಂಬ ಯುವಕನನ್ನು ಅಪಹರಿಸಿದ್ದ ಆರೋಪಿಗಳು ಬರ್ಬರವಾಗಿ ಹತ್ಯೆಗೈದಿದ್ದರು.
ಮೃತ ವೀರೇಶ್ ಭೀಮಳ್ಳಿ ತನ್ನ ಗೆಳೆಯ ಆಟೋ ಚಾಲಕ ಸಾಗರ್ ಎಂಬಾತನಿಗೆ 15 ಸಾವಿರ ರೂಪಾಯಿ ಸಾಲ ಕೊಡಿಸಿದ್ದಾರೆ. ಸಾಲ ಕೊಟ್ಟಿದ್ದ ಶ್ರೀಶೈಲ್ ಎಂಬಾತ ಮರು ಪಾವತಿಗೆ ಒತ್ತಡ ತಂದಿದ್ದ. ಆಟೋ ಚಾಲಕ ಸಾಗರ್ ಹಣ ಮರು ಪಾವತಿಸದೇ ಇದ್ದಾಗ, ಸಾಲ ಕೊಡಿಸಿದ್ದ ವೀರೇಶ್ ಬೆನ್ನು ಬಿದ್ದಿದ್ದ. ಗೆಳೆಯನಿಗೆ ಕೊಟ್ಟ ಸಾಲವನ್ನು ನಾನೇಕೆ ತೀರಿಸಿಲಿ ಎಂದಿದ್ದ ವೀರೇಶ್ ಗೆ ಅದೇ ಮುಳುವಾಗಿ ಪರಿಣಮಿಸಿದೆ. ಹಣ ಕೊಡಲು ನಿರಾಕರಿಸಿದನೆಂದು ಕುಪಿತಗೊಂಡಿದ್ದ ಶ್ರೀಶೈಲ್, ತನ್ನ ಇಬ್ಬರು ಸಹಚರರೊಂದಿಗೆ ಸೂಪರ್ ಮಾರುಕಟ್ಟೆಗೆ ತೆರಳಿದ್ದ.
ಸೂಪರ್ ಮಾರುಕಟ್ಟೆಯಲ್ಲಿ ವೀರೇಶ್ ಕೆಲಸ ಮಾಡುತ್ತಿದ್ದ ಭಾಂಡೆ (ಪಾತ್ರೆ) ಅಂಗಡಿಗೆ ನುಗ್ಗಿ ಒತ್ತಾಯ ಪೂರ್ವಕವಾಗಿ ಆಟೋದಲ್ಲಿ ಎಳೆದೊಯ್ದಿದ್ದ. ಕಲಬುರ್ಗಿ ತಾಲೂಕಿನ ಸಿಂಧಗಿ ಗ್ರಾಮದ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಇರಿದು, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದರು. ತಗ್ಗನ್ನು ತೋಡಿ ಅಲ್ಲಿಯೇ ಹೂತು ಹಾಕಲು ಪ್ರಯತ್ನಿಸಿದ್ದ ಆರೋಪಿಗಳು ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದರೆ ಪೋಷಕರು ಮಾತ್ರ ಕೆಲಸಕ್ಕೆಂದು ಹೋದ ಮಗ ಇನ್ನೂ ಬಂದಿಲ್ಲವೆಂದು ಎದುರು ನೋಡುತ್ತಲೇ ಇದ್ದರು. ಕೊನೆಗೆ ಮಗನಿಗಾಗಿ ಹುಡುಕಾಟ ನಡೆಸಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು.
ಕಾಣೆಯಾಗಿದ್ದ ವೀರೇಶ್ ಶವ ಅರ್ಧಂಬರ್ಧ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೀರೇಶ್ ಕೆಲಸ ಮಾಡುತ್ತಿದ್ದ ಅಂಗಡಿಯ ಅಕ್ಕ - ಪಕ್ಕದಲ್ಲಿನ ಶಾಪ್ ಗಳ ಸಿಸಿ ಕ್ಯಾಮರಾ ಫೂಟೇಜ್ ಗಮನಿಸಿದಾಗ ಆರೋಪಿಗಳು ವೀರೇಶ್ ನನ್ನು ಎಳೆದೊಯ್ದಿರೋದು ಖಾತ್ರಿಯಾಗಿತ್ತು. ಸಿಸಿ ಕ್ಯಾಮರಾ ಫೂಟೇಜ್ ಆಧರಿಸಿ ತನಿಖೆ ಆರಂಭಿಸಿದ್ದ ಕಲಬುರ್ಗಿ ಗ್ರಾಮೀಣ ಠಾಣೆ ಪೊಲೀಸರು, ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಕಲಬುರ್ಗಿ ನಿವಾಸಿಗಳಾಗಿದ್ದು, ಪ್ರಕರಣ ನಡೆಯುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳನ್ನು ನೋಡಿದ್ದ ಪೋಷಕರು ವೀರೇಶ್ ನನ್ನು ಗುರುತು ಹಿಡಿದಿದ್ದರು.
ಇದನ್ನೂ ಓದಿ: Minimum Support Price: ಕನಿಷ್ಟ ಬೆಂಬಲ ಬೆಲೆ ಕಾನೂನಾಗಬೇಕು: ದೇವನೂರು ಮಹಾದೇವ ಒತ್ತಾಯ
ಪೋಷಕರು ಕೊಟ್ಟ ಸುಳಿವನ್ನಾಧರಿಸಿ ಜಾಲ ಬೀಸಿದ ಪೊಲೀಸರು, ಮುವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾಸಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಹಣಕಾಸಿನ ವಿಚಾರದಲ್ಲಿ ವಿರೇಶ್ ನನ್ನ ಚಾಕುವಿನಿಂದ ಇರಿದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದುದಾಗಿ ಆರೋಪಿಗಳು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ.
ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆಆದರೆ ಕೇವಲ 15 ಸಾವಿರ ರೂಪಾಯಿಗಾಗಿ, ಅದೂ ಸಹ ತೆಗೆದುಕೊಳ್ಳದ ಹಣವನ್ನು ಕಟ್ಟಿಕೊಡುವಂತೆ ಒತ್ತಡ ಹಾಕಿ ಕೊಲೆ ಮಾಡಿರೋದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹಣಕಾಸಿನ ವ್ಯವಹಾರದ ಜೊತೆಗೆ ಬೇರೆ ಏನಾದರೂ ಕಾರಣಗಳಿರಬಹುದಾ ಎಂಬ ಕುರಿತೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.
(ವರದಿ - ಶಿವರಾಮ ಅಸುಂಡಿ)
Published by:
MAshok Kumar
First published:
February 13, 2021, 7:26 PM IST