ಗ್ರಾ.ಪಂ. ಚುನಾವಣೆ ಫಲಿತಾಂಶ ಬಳಿಕ ಕೋಲಾರದಲ್ಲಿ ಬಿಜೆಪಿಯವರ ಸುಳಿವೇ ಇಲ್ಲ: ಕೆಎಚ್ ಮುನಿಯಪ್ಪ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಪಂಚಾಯಿತಿಗಳ ಅಧಿಕಾರ ಹಿಡಿದ ಇದು ನಿಚ್ಚಳವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.

ಕೆಎಚ್ ಮುನಿಯಪ್ಪ

ಕೆಎಚ್ ಮುನಿಯಪ್ಪ

  • Share this:
ಕೋಲಾರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ‌ ಚುನಾವಣಾ ಫಲಿತಾಂಶ ವಿಚಾರವಾಗಿ ಕೋಲಾರದಲ್ಲಿ ರಾಜಕೀಯ ಪಕ್ಷಗಳ ನಡುವಿನ ಮಾತಿನ ಜಟಾಪಟಿ ಇನ್ನೂ ನಿಂತಿಲ್ಲ. ಪಂಚಾಯಿತಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 900 ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಯಾರದೋ ಮಗುವನ್ನ ನಮ್ಮದು ಎನ್ನುತ್ತಿದ್ದಾರೆ ಎಂದು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿರುಗೇಟು ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರ ಯಾರು ಹಿಡಿಯುತ್ತಾರೆ ಎಂದು ನೋಡಿದಾಗ ಗ್ರಾ.ಪಂ. ಚುನಾವಣೆಯಲ್ಲಿ ಹೆಚ್ಚು ಗೆದ್ದವರಾರು ಎಂಬುದು ನಿಚ್ಚಳವಾಗಲಿದೆ ಎಂದು ಮುನಿಯಪ್ಪ ಹೇಳಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ವಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅದು ಎಲ್ಲರಿಗು ತಿಳಿಯಲಿದೆ. ಬಿಜೆಪಿಯವರು ಗ್ರಾಮ ಪಂಚಾಯಿತಿgU ಅನುದಾನ ನೀಡಿಲ್ಲ. ಜಿಲ್ಲೆಯಲ್ಲಿ ಬಿಜೆಪಿಗರು ಯಾರೂ ಕಾಣಿಸುತ್ತಲೆ ಇಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಶೇಕಡಾ 10 ರಷ್ಟು ಸ್ಥಾನದಲ್ಲೂ ಬಿಜೆಪಿ ಬೆಂಬಲಿತರು ಗೆದ್ದಿಲ್ಲ ಎಂದು ಸಂಸದ ಮುನಿಸ್ವಾಮಿ ಅವರ ಹೆಸರೇಳದೆ ಮುನಿಯಪ್ಪ ಕುಟುಕಿದರು.

ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯ್ದ ಮುನಿಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕೆ.ಎಚ್. ಮುನಿಯಪ್ಪ, ದೇಶದಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಇಂದಿಗೂ ಪಂಚಾಯಿತಿಗಳಿಗೆ ಅನುದಾನ ಬರುತ್ತಿದೆಯೆಂದರೆ ಅದು ಕಾಂಗ್ರೆಸ್ ಪಕ್ಷದ ಅತ್ಯುನ್ನತ ಕೊಡುಗೆ. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಕನಸನ್ನ ನನಸು ಮಾಡಲು ರಾಜೀವ್ ಗಾಂಧಿಯವರು ಪ್ರಯತ್ನ ಪಟ್ಟಿದ್ದರು. ನರೇಗಾ ಯೋಜನೆ ಜಾರಿಗೆ ತಂದು ಗ್ರಾಮ ಸ್ವರಾಜ್ಯ ಕನಸನ್ನ ನನಸು ಮಾಡಿದ್ದೇವೆ ಎಂದು ಹೇಳಿಕೊಂಡರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಕನ್ನಡದ ಕಂಪು; ಕನ್ನಡ ಸಮ್ಮೇಳನದ ರೀತಿಯಲ್ಲಿಯೇ ಕಲ್ಯಾಣ ಸಂಭ್ರಮ

ಮುನಿಸ್ವಾಮಿ ಹೇಳಿದ್ದೇನು?

ಕೋಲಾರ ಜಿಲ್ಲೆಯಲ್ಲಿ 900 ಮಂದಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್ ಪಕ್ಷದವರು ಯಾರಿಗೋ ಹುಟ್ಟಿರೊ ಮಗುವನ್ನ ನಮ್ಮದು ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಮುನಿಸ್ವಾಮಿ ಕೋಲಾರ ಕಾಂಗ್ರೆಸ್ ನಾಯಕರ ವಿರುದ್ದ ಮೊನ್ನೆ ಕಿಡಿಕಾರಿದ್ದರು.

ಜಿಲ್ಲೆಯಲ್ಲಿ ಎಲ್ಲೆಡೆ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳು ಜಯಶೀಲರಾಗಿದ್ದು,  ಮಾಲೂರು ತಾಲೂಕು ಒಂದರಲ್ಲೇ ನಾವು 300 ಕ್ಕು ಹೆಚ್ಚು ಸ್ತಾನಗಳನ್ನ ಗೆದ್ದಿದ್ದೇವೆ. ಮಾಲೂರು ತಾಲೂಕಿನಲ್ಲಿ ಶಾಸಕ ನಂಜೇಗೌಡ 26 ಪಂಚಾಯಿತಿ  ಕಾಂಗ್ರೆಸ್ ಪಕ್ಷದ ವಶದಲ್ಲಿದೆ  ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಕೇವಲ ಎರಡು-ಮೂರು ಪಂಚಾಯಿತಿ ಮಾತ್ರ ಕಾಂಗ್ರೆಸ್ ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷದ ನಾಯಕರು ಅವರ ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಸಂಸದ ವಾಗ್ದಾಳಿ ನಡೆಸಿದ್ದರು.

ಕೆಜಿಎಫ್ ಚಿನ್ನದ ಗಣಿಯಲ್ಲಿ ಇನ್ನೂ 100 ವರ್ಷ ಕಾಲ ಚಿನ್ನ ತೆಗೆದರೂ ನಷ್ಟವಾಗಲ್ಲ: ಕೆಎಚ್ ಮುನಿಯಪ್ಪ

ಕೋಲಾರದ ಚಿನ್ನದ ಗಣಿ ಪುನರ್ ಆರಂಭ ವಿಚಾರವಾಗಿ ಕೇಂದ್ರ ಗಣಿ ಇಲಾಖೆ ಈಗಾಗಲೇ ಪರಿಶೋಧನೆಯನ್ನ ಆರಂಭಿಸಿದೆ. ಇದೀಗ ಕೆಜಿಎಫ್ ಗಣಿಯನ್ನ ಪುನರ್ ಆರಂಭಿಸಿದರೂ ಮುಂದಿನ ನೂರು ವರ್ಷಗಳ ಕಾಲ ಚಿನ್ನದ ಗಣಿಗಾರಿಕೆಯನ್ನ ಲಾಭದಲ್ಲಿ ನಡೆಸಬಹುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ದೇಶವನ್ನೇ ಮಾರಾಟ ಮಾಡಲು ಹೊರಟಿದೆ; ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಆರೋಪ

ಕೋಲಾರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಚಿನ್ನದ ಗಣಿ ಪುನರ್ ಆರಂಭಿಸುವ ವಿಚಾರವಾಗಿ ಸುದೀರ್ಘ ವಿವರಣೆ ನೀಡಿದರು. ಇಡೀ ಪ್ರಪಂಚದಲ್ಲಿ ಶೇ. 0.5 ನಷ್ಟು ಚಿನ್ನ ಸಿಗುತ್ತಿರುವ ಗಣಿಗಳನ್ನ ಹೊಂದಿರುವ ದೇಶಗಳು ಲಾಭದಲ್ಲಿವೆ. ನಮ್ಮ ಕೋಲಾರದ ಗಣಿಯಲ್ಲಿ 3 ರಿಂದ 5 ಗ್ರಾಂ ವರೆಗು ಚಿನ್ನ ಸಿಗುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರ ನಿರಾತಂಕವಾಗಿ ಗಣಿಗಾರಿಕೆ ಪುನರ್ ಆರಂಭಿಸಬಹದು ಎಂದು ಸಲಹೆ ನೀಡಿದ್ದಾರೆ.

ನಾನು ಕೇಂದ್ರ ಸಚಿವನಾಗಿದ್ದ ವೇಳೆ ಗ್ಲೋಬಲ್ ಟೆಂಡರ್ ಮೂಲಕ ಗಣಿ ಪುನರ್ ಆರಂಭಿಸುವ ಪ್ರಯತ್ನ ಮಾಡಿದ್ದೆ. ಭಾರತ್ ಗೋಲ್ಡ್ ಮೈನ್ಸ್ ನಡೆಸಲು ಸಾಲ ಮಾಡಿದ್ದು ನಿಜವೇ. ಆದರೆ ನಷ್ಟದ ನೆಪವೊಡ್ಡಿ ಚಿನ್ನದ ಗಣಿಯನ್ನ ವಾಜಪೇಯಿ ಸರ್ಕಾರದ ವೇಳೆ ಮುಚ್ಚಿದ್ದರು. ನಾನು ಗಣಿಯನ್ನ ನಿಲ್ಲಿಸದೆ ಮುನ್ನಡೆಯಲು ಸಾಕಷ್ಟು ಪ್ರಯತ್ನಿಸಿದ್ದೇನೆ. ನಮ್ಮಲ್ಲಿರುವ ಚಿನ್ನದ ಗುಣಮಟ್ಟ ಬೇರೆಲ್ಲೂ ಸಿಗಲ್ಲ. ಸರ್ಕಾರ ಆದಷ್ಟು ಬೇಗ ಕೆಜಿಎಫ್ ಗಣಿ ಪುನರ್ ಆರಂಭಿಸಬೇಕು. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಮುಂದೆ ಭೇಟಿಯಾಗಿ ಮಾತನಾಡುವೆ ಎಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: