news18-kannada Updated:January 19, 2021, 7:26 AM IST
ಕೇಶವಪ್ರಸಾದ ರಾವ್
ಕೋಲಾರ: ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ಈಗಾಗಲೇ ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ. ಆದರೆ ಇದೀಗ ಆರನೇ ಕೊಠಡಿ ತೆರೆಸಲು ರಾಯಲ್ ಫ್ಯಾಮಿಲಿ (ರಾಜ ಮನೆತನ) ಅವರಿಂದ ತೊಡಕು ಉಂಟಾಗಿದೆ. ನಾಗರ ರಕ್ಷಣೆಯಲ್ಲಿರುವ ಆ ಬಾಗಿಲು ತೆಗೆಯುತ್ತಾರೋ ಅಂತಹವರ ವಂಶ, ಮನೆತನವೇ ಸರ್ವನಾಶವಾಗುತ್ತೆ ಅನ್ನೋ ಮಾತುಗಳು ಬಲವಾಗಿ ಹರಿದಾಡುತ್ತಿದೆ. ಹೀಗಾಗಿ ಸುಮಾರು 150 ವರ್ಷಗಳಿಂದ ರಹಸ್ಯವಾಗಿರೋ ಈ ಸಂಪತ್ತು ಏನು, ಎಷ್ಟು ಮೌಲ್ಯದ್ದು ಅನ್ನೋ ಕುತೂಹಲ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಎಷ್ಟೇ ಒತ್ತಡ ಬಂದರೂ ಸಹ ಆರನೇ ಸಂಖ್ಯೆಯ ಕೊಠಡಿಯನ್ನು ತೆಗೆಯೋದಕ್ಕೆ ರಾಜ ಮನೆತನದವರ ಒಪ್ಪಿಗೆ ಸೂಚಿಸುತ್ತಿಲ್ಲ.
ಆದರೆ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಕೇಶವ ಪ್ರಸಾದ್ ರಾವ್ ಎಂಬುವವರು, “ನಾನು ಈ ಸಾಹಸಕ್ಕೆ ಕೈ ಹಾಕುತ್ತೇನೆ. ನನಗೆ ದೈವಿಬಲ ಇರುವುದರಿಂದ ಆರಾಮಾಗಿ ಆ ಬಾಗಿಲು ತೆಗೆಯುತ್ತೇನೆ. ಅದರಲ್ಲಿರುವ ಹಣ, ಸಂಪತ್ತು ಯಾವುದೂ ನನಗೆ ಬೇಡ. ಕೇವಲ ಬಾಗಿಲು ತೆಗೆಯೋಕೆ ಮಾತ್ರ ಅನುಮತಿ ಕೊಡಿಸಿ” ಎಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಆಡಿಟರ್ ವೃತ್ತಿಯಲ್ಲಿರುವ ಕೇಶವ ಪ್ರಸಾದ್ ಅವರು ಎರಡು ವರ್ಷಗಳ ಹಿಂದೆಯೇ ಪದ್ಮನಾಭಸ್ವಾಮಿ ದೇಗುಲದ ವಿಚಾರದಲ್ಲಿ ಹಸ್ತಕ್ಷೇಪ ಅರ್ಜಿಯನ್ನು ಸಲ್ಲಿಸಿದ್ದಾರೆ. ಆರನೇ ಕೊಠಡಿಗೆ ನಾಗಬಂಧನ ಇರುವುದರಿಂದ ನನಗೆ ತಿಳಿದಿರೋ ಗರುಡ ಬಂಧನ ಪ್ರಯೋಗದಿಂದ ಬಾಗಿಲು ತೆಗೆದುಕೊಡುತ್ತೇನೆ. ಆಮೇಲೆ ಬೇಕಾದ್ರೆ ನೀವು ಅಲ್ಲಿರೋ ಸಂಪತನ್ನು ಬಳಸಿಕೊಳ್ಳಿ ಎಂದು ತಾವು ಹಾಕಿರೋ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದುವರೆಗೂ ಸುಪ್ರೀಂ ಕೋರ್ಟ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣಕ್ಕಾಗಿ ಮೊನ್ನೆ ಅವರು ಮಾಧ್ಯಮಗಳ ಮೂಲಕ ಸುಪ್ರೀಂಕೋರ್ಟ್ಗೆ ಮತ್ತೊಮ್ಮೆ ಮನವಿ ಮಾಡಿದರು.
ಇದನ್ನೂ ಓದಿ: ಗಡಿ ಕ್ಯಾತೆ ತೆಗೆಯುವ ತಲೆಹರಟೆಗಳಿಗೆ ತಕ್ಕ ಉತ್ತರ ಕೊಡಲೇಬೇಕು; ಟಿ.ಎಸ್.ನಾಗಾಭರಣ
ಮೂಲತಃ ಕೋಲಾರದಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿರುವ ಕೇಶವ ಪ್ರಸಾದ್ ರಾವ್, 11 ವರ್ಷಗಳಿಂದ ವಿಶೇಷ ಪೂಜೆ ಮಾಡಿ ದೈವಿಕ ಶಕ್ತಿ ಪಡೆದುಕೊಂಡಿದ್ದಾರಂತೆ. ಒಂದು ವೇಳೆ ಬಾಗಿಲು ತೆಗೆದ ಬಳಿಕ ನನಗೆ ಸಾವು ಸಂಭವಿಸಿದರೆ ಯಾರು ಜವಾಬ್ದಾರರಲ್ಲ ಅಂತಾನೂ ತಾವು ಹಾಕಿರೋ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಕೆಜಿಎಫ್ನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದರು. “ದೇವರ ಶಕ್ತಿಯನ್ನ ಎದುರು ಹಾಕಿಕೊಳ್ಳುವ ಪ್ರಯತ್ನ ನಮ್ಮದಲ್ಲ, ಜೊತೆಗೆ ದೇವರಿಗೆ ಅಗೌರವ ತೋರುವ ಪ್ರಯತ್ನವೂ ಇಲ್ಲ. ನಾನು ಕೆಜಿಎಫ್ ಮತ್ತು ಮುಳಬಾಗಿಲು ತಾಲೂಕಿನಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿರುವೆ. ಆರನೇ ಕೊಠಡಿ ತೆರೆಯುವುದರಿಂದ ಅದರಲ್ಲಿರುವ ಸಂಪನ್ಮೂಲದ ಸದ್ಬಳಕೆಯಾಗಲಿದೆ. ಆರನೇ ಕೊಠಡಿ ತೆರೆಯುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ” ಎಂದರು.
ಒಟ್ಟಿನಲ್ಲಿ ಅನಂತ ಪದ್ಮಾನಾಭನ ದೇಗುಲದ ಆರನೇ ಕೊಠಡಿ ತೆರೆಯುವ ವಿಚಾರವಾಗಿ, ವಿಚಾರವಾಗಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಹೀಗಿರುವಾಗ ಕೋಲಾರದ ಕೇಶವ್ ಪ್ರಸಾದ್ ಎನ್ನುವರು, ದೇಗುಲದ ನೆಲಮಾಳಿಗೆಯಲ್ಲಿರುವ ಆರನೇ ಕೊಠಡಿಯನ್ನ ತಾವು ತೆರೆದು ಮುಂಬರುವ ಸವಾಲುಗಳನ್ನು ಎದುರಿಸುವುದಾಗಿ ಘಂಟಾಘೋಷವಾಗಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವರದಿ: ರಘುರಾಜ್
Published by:
Vijayasarthy SN
First published:
January 19, 2021, 7:18 AM IST