ಉಡುಪಿ: ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಉಡುಪಿಯಲ್ಲೂ ಸುಧಾ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು. ಸುಧಾ ಪತಿ ಸ್ಟಾಯಿನಿ ಉಡುಪಿ ಮೂಲದವರಾಗಿದ್ದು, ಪತಿಯ ತಂದೆಗೆ ಸೇರಿದ ಆಸ್ತಿ ಮತ್ತು ಸುಧಾ ಪತಿಯ ಸ್ನೇಹಿತರ ಮನೆಯ ಮೇಲೂ ಎಸಿಬಿ ದಾಳಿ ನಡೆದಿದೆ.
ಬೆಳ್ಳಂಬೆಳಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದಲ್ಲಿರುವ ಸುಧಾ ಅವರ ಪತಿಯ ಸ್ನೇಹಿತ ದೇವದಾಸ ಶೆಟ್ಟಿ ಎಂಬವರ ಮನೆಯಲ್ಲಿ ಸತತ ಏಳು ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಬೆಂಗಳೂರು ಎಸಿಬಿ ಅಧಿಕಾರಿಗಳು ಕೆಲವು ಮಹತ್ವದ ಕಾಗದಪತ್ರಗಳನ್ನು ಕೊಂಡೊಯ್ದಿದ್ದಾರೆ. ದೇವದಾಸ ಶೆಟ್ಟಿ ಸುಧಾ ಅವರ ಪತಿಯ ಗೆಳೆಯರಾಗಿದ್ದು, ಇವರ ಹೆಸರಲ್ಲೂ ಬೇನಾಮಿ ಆಸ್ತಿಇದೆ ಎಂಬ ಸಂಶಯದ ಮೇಲೆ ಈ ದಾಳಿ ನಡೆದಿದೆ.
ಇವರ ಮನೆಯಲ್ಲಿ ಕೆಲವು ಮಹತ್ವದ ಕಾಗದಪತ್ರಗಳು ಸಿಕ್ಕಿವೆ. ಬಳಿಕ ಬಾರ್ಕೂರು ಸಮೀಪ ಇರುವ ಸುಧಾ ಅವರ ಮಾವ ಸ್ಟ್ಯಾನಿ ಪಾಯಸ್ ಎಂಬವರ ಕಟ್ಟಡಕ್ಕೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಕಟ್ಟಡ ಸಮುಚ್ಛಯದಲ್ಲಿ ಸುಧಾ ಅವರ ಪತಿಯ ತಂದೆಯ ಹೂಡಿಕೆಯಿದ್ದು, ಅದರ ವಿವರಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ, ಪಾಯಸ್ ಅವರ ಮನೆಯಲ್ಲೂ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: KAS ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ; ಡಾ. ಸುಧಾ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, 10 ಲಕ್ಷ ರೂ. ಪತ್ತೆ
ಡಾ ಸುಧಾ ಅವರು ಕೆಲಕಾಲ ಉಡುಪಿಯಲ್ಲೂ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನಲಾಗಿದೆ. ಕುಂದಾಪುರ ತಾಲೂಕಿನ ಕಂದಾವರದಲ್ಲೂ ಸುಮಾರು ಒಂದು ಕೋಟಿಗೂ ಮಿಕ್ಕಿದ ಭೂಮಿ ಹಾಗೂ ಬ್ರಹ್ಮಾವರದ ವಂಡ್ಸೆಯಲ್ಲಿ ಎಂಬತ್ತು ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿರುತ್ತದೆ. ಬೆಂಗಳೂರು ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸ್ಥಳೀಯ ಅಧಿಕಾರಿಗಳೂ ಜೊತೆಯಲ್ಲಿದ್ದರು.
ಇದೇ ವೇಳೆ, ಮೈಸೂರಿನಲ್ಲೂ ವಿವಿಧ ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆದಿದೆ.
ವರದಿ: ಪರೀಕ್ಷಿತ್ ಶೇಟ್
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಬೆನ್ನಲ್ಲೇ ದೆಹಲಿಗೆ ತೆರಳಿದ ಸಿ.ಟಿ. ರವಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ