ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಪೋಲಿಸರು ರಸ್ತೆಯಲ್ಲಿ ತಡೆಯಲ್ಲ, ನೇರವಾಗಿ ಮನೆಗೇ ನೋಟಿಸ್ ಕಳಿಸ್ತಾರೆ !

ಸಂಚಾರಿ ಪೊಲೀಸರು ಕಾರವಾರ ನಗರದಲ್ಲಿ ಎಲ್ಲೆಂದರಲ್ಲಿ ಅಡ್ಡಗಟ್ಟುತ್ತಾರೆ. ಹೆಲ್ಮೆಟ್ ಧರಿಸಿಲ್ಲ, ವಾಹನದ ಡಾಕ್ಯುಮೆಂಟ್ ಗಳನ್ನ ಚೆಕ್ ಮಾಡಬೇಕೆಂದು ಅಡ್ಡಗಟ್ಟಿ ಸಮಸ್ಯೆ ಮಾಡಲಿದ್ದಾರೆ ಎನ್ನುವ ದೂರು ಕೇಳಿ ಬಂದಿತ್ತು. ಅದಕ್ಕಾಗಿ ಇದೀಗ ಪೊಲೀಸರು ಮನೆ ಬಾಗಿಲಿಗೆ ಸಂಚಾರಿ ನಿಯಮವನ್ನ ಉಲ್ಲಂಘಿಸಿದ ಬೈಕ್ ಸವಾರರಿಗೆ ನೋಟಿಸ್ ಕಳಿಸುವಂಥಾ ಕೆಲಸ ಪ್ರಾರಂಭಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ(ಏಪ್ರಿಲ್ 11): ಹೆಲ್ಮೆಟ್ ಧರಿಸಿಲ್ಲ ಎಂದು ಇತ್ತೀಚಿಗೆ ಮೈಸೂರಿನಲ್ಲಿ ಬೈಕ್ ಸವಾರನೋರ್ವನನ್ನ ಅಡ್ಡಗಟ್ಟುವ ವೇಳೆ ಅಪಘಾತವಾಗಿ ಸವಾರ ಪ್ರಾಣವನ್ನ ಕಳೆದುಕೊಂಡಿದ್ದ. ಇನ್ನು ಈ ಘಟನೆಯಿಂದ ಪೊಲೀಸರ ವಿರುದ್ಧ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ಹೊರಹಾಕಲಾಗಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರಿಗೆ ಇಂತಹ ಕಿರಿಕಿರಿ ತಪ್ಪಿಸಲು ಪೊಲೀಸ್ ಇಲಾಖೆ ವಿನೂತನ ಪ್ರಯೋಗಕ್ಕೆ ಕೈಹಾಕಿದೆ.

ಸಂಚಾರಿ ಪೊಲೀಸರು ಕಾರವಾರ ನಗರದಲ್ಲಿ ಎಲ್ಲೆಂದರಲ್ಲಿ ಅಡ್ಡಗಟ್ಟುತ್ತಾರೆ. ಹೆಲ್ಮೆಟ್ ಧರಿಸಿಲ್ಲ, ವಾಹನದ ಡಾಕ್ಯುಮೆಂಟ್ ಗಳನ್ನ ಚೆಕ್ ಮಾಡಬೇಕೆಂದು ಅಡ್ಡಗಟ್ಟಿ ಸಮಸ್ಯೆ ಮಾಡಲಿದ್ದಾರೆ ಎನ್ನುವ ದೂರು ಕೇಳಿ ಬಂದಿತ್ತು. ಅದಕ್ಕಾಗಿ ಇದೀಗ ಪೊಲೀಸರು ಮನೆ ಬಾಗಿಲಿಗೆ ಸಂಚಾರಿ ನಿಯಮವನ್ನ ಉಲ್ಲಂಘಿಸಿದ ಬೈಕ್ ಸವಾರರಿಗೆ ನೋಟಿಸ್ ಕಳಿಸುವಂಥಾ ಕೆಲಸ ಪ್ರಾರಂಭಿಸಿದ್ದಾರೆ.

ಕಾರವಾರ ನಗರವೊಂದರಲ್ಲಿಯೇ ವಾಹನ ಸಂಚಾರ ಅಧಿಕವಾಗಿ ಆಗುವ ಸ್ಥಳಗಳನ್ನ ಗುರುತಿಸಿ, ಅಲ್ಲಿ ಸಂಚಾರಿ ಪೊಲೀಸರನ್ನ ನಿಲ್ಲಿಸುತ್ತಿದ್ದಾರೆ. ಈ ಹಿಂದೆ ನಿಲ್ಲುತ್ತಿದ್ದ ಪೊಲೀಸರು ಯಾರು ಹೆಲ್ಮೆಟ್ ಧರಿಸುತ್ತಿರಲಿಲ್ಲ, ವೇಗವಾಗಿ ಚಲಾವಣೆ ಮಾಡಿಕೊಂಡು ಬಂದವರು, ಎರಡಕ್ಕಿಂತ ಹೆಚ್ಚು ಜನರನ್ನ ಕೂರಿಸಿಕೊಂಡು ಬಂದವರನ್ನ ಸ್ಥಳದಲ್ಲೇ ಹಿಡಿದು ದಂಡವನ್ನ ಹಾಕುವ ಕಾರ್ಯವನ್ನ ಮಾಡುತ್ತಿದ್ದರು.

ಸದ್ಯ ರಸ್ತೆ ಪಕ್ಕದಲ್ಲಿ ನಿಂತಂತಹ ಪೊಲೀಸರು ಕೈನಲ್ಲಿ ಬುಕ್ ಹಿಡಿದುಕೊಂಡು ಯಾರು ಹೆಲ್ಮೆಟ್ ಹಾಕಿಕೊಂಡು ಬರುವುದಿಲ್ಲವೋ, ಮೂರು ಜನರನ್ನ ಕೂರಿಸಿ ಕೊಂಡು ಹೋಗುತ್ತಾರೋ ಅಂತಹ ಬೈಕ್ ನಂಬರ್ ಗಳನ್ನ ಗುರುತು ಮಾಡಿಕೊಂಡು ಯಾವ ಸ್ಥಳ ಹಾಗೂ ಸಮಯವನ್ನ ಬರೆದುಕೊಳ್ಳುತ್ತಿದ್ದಾರೆ. ಇನ್ನು ಠಾಣೆಗೆ ಬಂದು ಪ್ರತಿನಿತ್ಯ ಸಂಚಾರಿ ನಿಯಮವನ್ನ ಉಲ್ಲಂಘಿಸಿದ ವಾಹನ ಸವಾರರ ಬೈಕ್ ನಂಬರ್ ಆಧಾರದ ಮೇಲೆ ಅವರ ವಿಳಾಸವನ್ನ ತೆಗೆದು ಮನೆಗೆ ದಂಡ ಕಟ್ಟುವ ನೋಟಿಸ್ ಕಳುಹಿಸುತ್ತಿದ್ದಾರೆ.

ಇನ್ನು ಲೈಸೆನ್ಸ್ ನಲ್ಲಿ ಮೊಬೈಲ್ ನಂಬರ್ ಸಹ ಸಿಗುವುದರಿಂದ ಸಂಚಾರಿ ನಿಯಮ ಉಲ್ಲಂಘಿಸಿದವರ ಮೊಬೈಲ್ ನಂಬರ್ ತೆಗೆದುಕೊಂಡು ನೋಟಿಸ್ ಕಳಿಸಿ ಯಾವ ಸಮಯ ಹಾಗೂ ಸ್ಥಳದಲ್ಲಿ ಸಂಚಾರಿ ನಿಯಮವನ್ನ ಉಲ್ಲಂಘಿಸಿದ್ದೀರಿ ಎಂದು ಹೇಳಿ ದಂಡ ವಸೂಲಿ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ. ಮೈಸೂರು ಘಟನೆಯ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಾಹನ ಸವಾರರಿಗೆ ಹಿಡಿದು ಬಡಿದು ದಂಡ ಹಾಕುವ ಬದಲು ನಂಬರ್ ಬರೆದುಕೊಂಡು ನೋಟಿಸ್ ಕೊಟ್ಟು ದಂಡ ಕಟ್ಟಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಬೈಕ್ ನಂಬರ್ ಮೂಲಕ ವಿಳಾಸ ತೆಗೆಯುವ, ನೋಟಿಸ್ ಸಿದ್ದಪಡಿಸುವ, ಮನೆಗೆ ತೆರಳಿ ನೋಟಿಸ್ ಕೊಡುವುದಕ್ಕೆ ಪೊಲೀಸರ ತಂಡವನ್ನ ಸಹ ಸಿದ್ದಪಡಿಸಿದ್ದು ಕಳೆದ ಒಂದು ವಾರದಿಂದ ಬೈಕ್ ನಂಬರ್ ಗಳನ್ನ ಬರೆದುಕೊಂಡು ದಂಡ ವಸೂಲಿಗೆ ಮನೆಯ ಬಾಗಿಲಿಗೆ ನೋಟಿಸ್ ಕಳುಹಿಸುವ ಕಾರ್ಯ ಮಾಡಲಾಗುತ್ತಿದೆ.

ಈ ಹಿಂದೆ ವಾಹನ ಸವಾರರನ್ನ ಅಡ್ಡಗಟ್ಟಿ ದಂಡ ಹಾಕುವಾಗ ಪ್ರತಿನಿತ್ಯ ಕಿರಿಕಿರಿಯಾಗುತ್ತಿತ್ತು. ಸದ್ಯ ಬುಕ್ ನಲ್ಲಿ ನಂಬರ್ ಬರೆದುಕೊಂಡು ನೋಟಿಸ್ ನೀಡುವ ಮೂಲಕ ದಂಡ ವಸೂಲಿ ಮಾಡುತ್ತಿದ್ದು, ಒಂದೊಮ್ಮೆ ಅವರು ತಾವು ನಿಯಮ ಉಲ್ಲಂಘಿಸಿಲ್ಲ ಎಂದು ವಾದ ಮಾಡಿದರೆ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಕೊಟ್ಟು ಖಾತ್ರಿ ಪಡಿಸುವ ಕಾರ್ಯ ಸಹ ಮಾಡುತ್ತೇವೆ. ಯಾರಿಗೂ ಕಿರಿಕಿರಿ ಇಲ್ಲದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವ ಕಾರ್ಯವನ್ನ ಮಾಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿಯೋರ್ವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲಿ ಸಿಸಿ ಟಿವಿ ಮೂಲಕ ನೋಟಿಸ್: ರಾಜ್ಯದ ಕೆಲವು ನಗರಗಳಲ್ಲಿ ಪೊಲೀಸ್ ಇಲಾಖೆಯಿಂದ ಹಾಕಿರುವ ಸಿಸಿಟಿವಿಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರನ್ನ ಗುರುತಿಸಿ ದಂಡ ವಸೂಲಿಗೆ ನೋಟಿಸ್ ಕೊಡುವ ಕಾರ್ಯ ಮಾಡಲಾಗುತ್ತಿತ್ತು. ಅದರಂತೆ ಕಾರವಾರದಲ್ಲೂ ಇದೀಗ ಸಿಸಿಟಿವಿಗಳನ್ನ ಅಳವಡಿಸಲು ಇಲಾಖೆ ಸಜ್ಜಾಗಿದೆ ಎನ್ನಲಾಗಿದೆ. ನಗರದ ಸವಿತಾ ಹೋಟಲ್ ವೃತ್ತ, ಸುಭಾಶ್ ವೃತ್ತ, ಸೇರಿದಂತೆ ನಾಲ್ಕರಿಂದ ಐದು ಕಡೆ ಸಿಸಿಟಿವಿಗಳನ್ನ ಅಳವಡಿಸಿ ಸಂಚಾರಿ ಠಾಣೆಯಲ್ಲಿ ಸಿಸಿಟಿವಿಯ ದೃಶ್ಯವನ್ನ ನೋಡಿ ವಾಹನದ ನಂಬರ್ ಗುರುತಿಸಲು ಸಿಬ್ಬಂದಿಯನ್ನ ಸಹ ನಿಯೋಜನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇನ್ನು ಕೆಲ ದಿನದಲ್ಲಿಯೇ ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಮುಂದಾಗಲಿದ್ದು, ಜನರು ಸಹ ಈ ಬಗ್ಗೆ ಜಾಗೃತಗೊಂಡು ತಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಡೆಯಬೇಕಾಗಿದೆ.
Published by:Soumya KN
First published: