ಯಾದಗಿರಿ (ಅ. 23): ಶಿವನೂರ ಗ್ರಾಮದ ಜನರು ಒಂದು ವಾರಗಳ ಕಾಲ ಭೀಮಾ ನದಿ ಪ್ರವಾಹದಿಂದ ನೆಮ್ಮದಿ ಕಳೆದುಕೊಂಡಿದ್ದರು. ಪ್ರವಾಹ ತಗ್ಗಿದ ನಂತರ ವಾಪಾಸ್ ಬದುಕು ಕಟ್ಟಿಕೊಳ್ಳಲು ಊರಿಗೆ ಬಂದ ನಿರಾಶ್ರಿತರಿಗೆ ಈಗ ವರುಣ ದೇವ ಶಾಕ್ ಕೊಟ್ಟಿದ್ದಾನೆ. ಊರಿಗೆ ಬಂದವರು ಮನೆಯಲ್ಲಿ ಇರಬೇಕೆಂದರೆ ಈಗ ಜೀವ ಭಯದಲ್ಲಿಯೇ ವಾಸ ಮಾಡುವುದು ಅನಿವಾರ್ಯವಾಗಿದೆ. ಭೀಮಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವನೂರ ಗ್ರಾಮಕ್ಕೆ ನೀರು ನುಗ್ಗಿದೆ. ಇದರಿಂದ ಜನರು ಊರು ತೊರೆದು ಬೆಂಡಬೆಂಬಳಿ ಕಾಳಜಿ ಕೇಂದ್ರದಲ್ಲಿ ಒಂದು ವಾರಗಳ ಕಾಲ ಆಶ್ರಯ ಪಡೆದಿದ್ದರು. ಆದರೆ, ಪ್ರವಾಹ ತಗ್ಗಿದ ನಂತರ ನಿರಾಶ್ರಿತರು ಗಂಟುಮೂಟೆ ತೆಗೆದುಕೊಂಡು ಬಸ್ಗಳ ಮೂಲಕ ವಾಪಾಸ್ ಊರಿಗೆ ಬಂದು, ಮನೆಗಳನ್ನು ಕಂಡು ಕಣ್ಣೀರು ಹಾಕಿದ್ದರು.
ಭೀಮಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮದಿಂದ ಮನೆಗಳು ತೊಯ್ದು, ಬಿರುಕು ಬಿಡುವ ಜೊತೆಗೆ ಕೆಲವು ಮನೆಗಳು ಕುಸಿದು ಬಿದ್ದಿದ್ದವು. ಈ ದೃಶ್ಯ ಕಂಡು ಮತ್ತೆ ಹೇಗೆ ಬದುಕು ಕಟ್ಟಿಕೊಳ್ಳಬೇಕೆಂದು ಜನರು ಚಿಂತೆಗೆ ಜಾರಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ತಾಯಮ್ಮ ಮಾತನಾಡಿ, ನಾವು ಕಷ್ಟದಲ್ಲಿದ್ದೇವೆ. ನಮ್ಮ ಗೋಳು ಯಾರೂ ಕೇಳುತ್ತಿಲ್ಲ. ನಮಗೆ ನೆಮ್ಮದಿ ಇಲ್ಲದಂತಾಗಿದ್ದು ಮನೆ ಸೋರುತ್ತಿದ್ದರೂ ಭಯದಲ್ಲಿಯೇ ವಾಸ ಮಾಡುತ್ತಿದ್ದೇವೆ. ನಮಗೆ ಮನೆ ನಿರ್ಮಿಸಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ನೋವು ತೋಡಿಕೊಂಡಿದ್ದಾರೆ.
ಸೋರುತಿಹದು ಮನೆಯ ಮಾಳಿಗೆ:
ಶಿವನೂರ ಗ್ರಾಮದಲ್ಲಿ ಮಳೆಯ ಅವಾಂತರದಿಂದ 8 ಮನೆಗಳು ಕುಸಿದು ಬಿದ್ದಿವೆ. ಇನ್ನೂ ಕೆಲ ಮನೆಗಳು ಭೀಮಾ ನದಿ ಪ್ರವಾಹ ಹಾಗೂ ಮಳೆಯಿಂದ ಮನೆಗಳು ತೊಯ್ದು ಹೋಗಿದ್ದ ಹಿನ್ನೆಲೆಯಲ್ಲಿ ಬಿರುಕು ಬಿಟ್ಟು ಬೀಳುವ ಹಂತಕ್ಕೆ ಬಂದಿವೆ. ಇದರಿಂದ ಜೀವ ಭಯದಲ್ಲಿಯೇ ಕೆಲವರು ಮನೆಯಲ್ಲಿ ವಾಸ ಮಾಡಿದರೆ, ಇನ್ನು ಕೆಲವರು ಬೇರೆ ಕಡೆ ವಾಸವಾಗಿದ್ದಾರೆ.
ಆದರೆ, ತಾಯಮ್ಮನವರ ಮನೆಯು ಈಗಾಗಲೇ ಸ್ವಲ್ಪ ಭಾಗ ಕುಸಿದಿದೆ. ಈಗ ಮನೆಯ ಮೇಲ್ಭಾಗದಲ್ಲಿ ಹಾಗೂ ಕೆಳ ಭಾಗದಲ್ಲಿ ತಾಡಪಾಲ್ ಹಾಕಿ ಮಳೆಯಿಂದ ರಕ್ಷಿಸಿಕೊಂಡರು ಮಳೆ ನೀರು ಸೋರುತ್ತಿದೆ. ಕೆಳಗಡೆ ಬುಟ್ಟಿ ಇಟ್ಟು ನೀರು ಬಿಸಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ಯಾವಾಗ ಮನೆ ಬೀಳುತ್ತೋ ಎಂಬ ಆತಂಕ ಇದೆ. ಅಪ್ಪಿ ತಪ್ಪಿ ಹೆಚ್ಚು ಮಳೆ ಬಂದ್ರೆ ಮನೆಗಳು ಹೆಚ್ಚಿಗೆ ಸೋರುತ್ತಿದ್ದು ನಿದ್ದೆ ಮಾಡಲು ಕೂಡ ಆಗುವುದಿಲ್ಲ. ಯಾವಾಗ ಮನೆ ಬೀಳುತ್ತದೋ ಎಂಬ ಆತಂಕದಲ್ಲಿ ಎಚ್ಚರದಿಂದ ಇರುತ್ತಾರೆ.
ಇದನ್ನೂ ಓದಿ: ಭಾರತ ಕೊಳಕು, ಗಲೀಜು ದೇಶ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ಟೀಕೆ
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಬಸಮ್ಮ ಮಾತನಾಡಿ, ಮಳೆ ಹೆಚ್ಚಾಗಿ ಹಾಗೂ ಭೀಮಾ ನದಿ ನೀರು ನುಗ್ಗಿ ಹಾಗೂ ಮಳೆ ನೀರಿನಿಂದ ತೊಯ್ದು ಹೋಗಿವೆ. ಈಗಾಗಲೇ ಊರಲ್ಲಿ 8 ಮನೆಗಳು ಬಿದ್ದಿದ್ದು ಇನ್ನೂ ಕೆಲ ಮನೆಗಳು ಬಿಳುವ ದುಸ್ಥಿತಿಯಲ್ಲಿವೆ ಎಂದರು. ಈಗಾಗಲೇ ಶಿವನೂರ ಗ್ರಾಮಕ್ಕೆ ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭೇಟಿ ನೀಡಿ ಪರಿಶೀಲನೆ ಮಾಡಿ ಆದಷ್ಟು ಬೇಗ ಗ್ರಾಮ ಸ್ಥಳಾಂತರ ಮಾಡುತ್ತೆನೆಂದು ಹೇಳಿದರು. ಅದೇ ರೀತಿ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿಎಂ ಯಡಿಯೂರಪ್ಪನವರು ಯಾದಗಿರಿ ಜಿಲ್ಲೆಯಲ್ಲಿ ಕೂಡ ವೈಮಾನಿಕ ಸಮೀಕ್ಷೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ