ಚಿಕ್ಕಮಗಳೂರಿನಲ್ಲಿ ಸತತ ಮಳೆಯಿಂದ ಎರಡನೇ ವರ್ಷವೂ ನೆಲ ಕಚ್ಚಿದ ಕಾಫಿ ಬೆಳೆ ; ಬೆಳೆಗಾರ ಕಂಗಾಲು..!
ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಸಂಪೂರ್ಣ ಹಾಳಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಅಂತಾ ಬೆಳೆಗಾರರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು(ಆಗಸ್ಟ್. 25) : ಕಾಫಿನಾಡಿನಲ್ಲಿ ಸ್ವತಃ ಕಾಫಿ ಬೆಳೆಗಾರ ಕಂಗಾಲಾಗಿದ್ದಾನೆ. ಕಾಫಿಯನ್ನೆ ನೆಚ್ಚಿಕೊಂಡು ಬದುಕು ದೂಡುತ್ತಿದ್ದ ಸಾವಿರಾರು ಸಣ್ಣಪುಟ್ಟ ರೈತರು ಇದೀಗ ಸಾಕಪ್ಪ ಸಾಕು, ಮಳೆ ಸಹವಾಸ ಸಾಕು ಎನ್ನುವ ಹಾಗಾಗಿದೆ. ಅಷ್ಟರ ಮಟ್ಟಿಗೆ ಕಾಫಿನಾಡಿನ ರೈತರಿಗೆ ಮಳೆ ಮೇಲೆ ಬೇಸರ ಬಂದೊಗಿದೆ. ಒಂದು ತಿಂಗಳ ಹಿಂದೆ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರು, ಇದೀಗ ಮಳೆ ಸಂಪೂರ್ಣ ನಿಂತರೇ ಸಾಕಪ್ಪ ಎನ್ನುವ ಹಾಗಾಗಿದೆ. ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ನೆಲೆಕಚ್ಚಿದ್ದು, ಬೆಳೆಗಾರ ಮುಂದೇನು ಅಂತಾ ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. ಕಳೆದ ವಾರ ಒಂದು ವಾರ ಸತತವಾಗಿ ಸುರಿದ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ.
ಮಳೆ ಜೊತೆಗೆ ಬಿರುಗಾಳಿಗೆ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಅಂತಾ ಅಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರು ಕಣ್ಣೀರಿಡುವಂತಾಗಿದೆ.
ಇದು ಸತತ ಎರಡನೇ ವರ್ಷ ಮಲೆನಾಡಿನ ರೈತರು ಈ ಪ್ರಮಾಣದಲ್ಲಿ ಕಾಫಿ ಬೆಳೆಯನ್ನ ಕಳೆದುಕೊಳ್ಳುತ್ತಿರುವುದು. ಕಳೆದ ವರ್ಷವೂ ಕೂಡ ಮಹಾಮಳೆಯಿಂದ ಈ ಮಲೆನಾಡ ರೈತರು ಕಾಫಿ ಫಸಲನ್ನ ಕಳೆದುಕೊಂಡು ನೋವನ್ನ ಅನುಭವಿಸಿದ್ರು. ಈ ಬಾರಿಯಾದರೂ ಮಳೆರಾಯ ನಮ್ಮ ಮೇಲೆ ಕೃಪೆ ತೋರಬಹುದು ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ, ಈ ಬಾರಿಯೂ ಭಾರೀ ಮಳೆಯ ಜೊತೆಗೆ ಬಿರುಗಾಳಿ ಆರ್ಭಟಕ್ಕೆ ಕಾಫಿ ಫಸಲು ಸಂಪೂರ್ಣ ಹಾಳಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕು ಅಂತಾ ಬೆಳೆಗಾರರು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಒಂದು ಎಕರೆ ಕಾಫಿ ತೋಟವನ್ನ ನಿರ್ವಹಣೆ ಮಾಡಲು ವರ್ಷಕ್ಕೆ 1 ಲಕ್ಷ ಹಣ ಬೇಕು. ಆದರೆ, ಇದೀಗ ಸತತ ಎರಡನೇ ವರ್ಷವೂ ಕಾಫಿ ಬೆಳೆಗಾರರಿಗೆ ಕಾಫಿ ಫಸಲು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ಸೂಕ್ತ ಪರಿಹಾರ ಬೇಕು ಅಂತಾ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ