ದಕ್ಷಿಣ ಕನ್ನಡ(ಮೇ 24): ಮಳೆಗಾಲದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಾಕೃತಿಕ ವಿಕೋಪ ಸಂಭವಿಸುವ ಪುತ್ತೂರು ತಾಲೂಕು ಮತ್ತೆ ಮಳೆಗಾಲವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ. ಪ್ರಾಕೃತಿಕ ವಿಕೋಪ, ಪ್ರವಾಹ ಸೇರಿದಂತೆ ಮಳೆಗಾಲವನ್ನು ಎದುರಿಸಲು ಪುತ್ತೂರು ತಾಲೂಕಿನಲ್ಲಿ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಲಾಗಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.
ತಾಲೂಕಿನ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. ಈ ಕಾರಣಕ್ಕಾಗಿ ಈ ಬಾರಿ ಉಪ್ಪಿನಂಗಡಿಯಲ್ಲಿ ಮಳೆಗಾಲಕ್ಕೆ ಪೂರ್ವ ತಯಾರಿಯಾಗಿ 2 ಬೋಟ್ಗಳನ್ನು ಸಿದ್ದಗೊಳಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ 5 ಮಂದಿ ಹೋಂ ಗಾರ್ಡ ಗಳನ್ನು ಕಳೆದ ಒಂದು ವಾರಗಳಿಂದ ನಿಯೋಜಿಸಲಾಗಿದೆ. ಅದರೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಜ್ಜುಗೊಳಿಸಲಾಗಿದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಳೆದ ವರ್ಷ ಯಾವುದೇ ಪ್ರವಾಹ ಬಂದಿಲ್ಲ. ಆದಾಗ್ಯೂ ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗುವ ಸಂದರ್ಭದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದು ಸಾಮಾನ್ಯವಾಗಿದೆ. ಈ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳ ಸುಮಾರು 15 ಮನೆಯವರಿಗೆ ಈಗಾಗಲೇ ನೋಟೀಸು ನೀಡಿ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಕಾಳಜಿ ಕೇಂದ್ರ(ಪರಿಹಾರ ಕೇಂದ್ರ)ವಾಗಿ ಗುರುತಿಸಲಾಗಿದೆ. ಕಾಳಜಿ ಕೇಂದ್ರಕ್ಕೆ ದಿನಕ್ಕೊಬ್ಬ ಕಂದಾಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇದನ್ನೂ ಓದಿ: Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ..? ಭಾರತದಲ್ಲಿ ಗೋಚರವಾಗುತ್ತಾ? ಇಲ್ಲಿದೆ ಮಾಹಿತಿ
ಅತಿ ಪ್ರವಾಹ ಕಂಡು ಬಂದಲ್ಲಿ ಈಗಾಗಲೇ ನೋಟೀಸ್ ನೀಡಲಾದ 15 ಕುಟುಂಬಗಳು ಸೇರಿದಂತೆ ಎಲ್ಲಾ ಸಂತ್ರಸ್ಥ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗುವುದು. ಸಂತ್ರಸ್ತ ಕುಟುಂಬಗಳು ಪರಿಹಾರ ಕೇಂದ್ರಕ್ಕೆ ಬರಲು ಒಪ್ಪದಿದ್ದಲ್ಲಿ ಪೊಲೀಸ್ ಇಲಾಖೆ, ಹೋಂ ಗಾರ್ಡ್ ಮತ್ತು ಕಂದಾಯ ಇಲಾಖೆಯ ಮೂಲಕ ಜಂಟೀ ಕಾರ್ಯಾಚರಣೆ ನಡೆಸಿ ಅವರ ಮನವೊಲಿಸಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು.
2020-21 ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ಪರಿಹಾರವಾಗಿ ಸರ್ಕಾರದಿಂದ ರೂ. 50 ಲಕ್ಷ ಅನುದಾನ ಬಂದಿದ್ದು, ಈ ಪೈಕಿ ಕಳೆದ ವರ್ಷ 1 ಜೀವ ಹಾನಿಗೆ ರೂ. 5 ಲಕ್ಷ, 1 ಜಾನುವಾರು ಜೀವ ಹಾನಿಗೆ ರೂ. 10 ಸಾವಿರ, 9 ಮನೆ ಹಾನಿ ತೀವ್ರ ಹಾನಿಗೆ ರೂ. 3.30 ಲಕ್ಷ, 264 ಪಕ್ಕಾ ಮನೆ ಭಾಗಶಃ ಹಾನಿಗೆ ರೂ. 18,27,100 ರೂಪಾಯಿಗಳ ಪರಿಹಾರ ವಿತರಿಸಲಾಗಿದೆ. 29 ತೋಟಗಾರಿಕಾ ಬೆಳೆ ಹಾನಿಗೆ ರೂ. 72, 277 ರೂ, 15 ದನದ ಹಟ್ಟಿ ಹಾನಿಗೆ ರೂ. 33,600 ವಿತರಿಸಲಾಗಿದೆ. ಮುಂಜಾಗೃತಾ ಕ್ರಮ ಕರ್ತವ್ಯ ನಿರ್ವಹಿಸಿದ 16 ಹೋಂ ಗಾರ್ಡ್ ಗಳಿಗೆ ರೂ. 84 ಸಾವಿರ ಮತ್ತು 8 ಕೋವಿಡ್ -19 ಪ್ರಕರಣಕ್ಕೆ ರೂ. 5,52,175 ರೂಪಾಯಿ ವಿನಿಯೋಗಿಸಲಾಗಿದ್ದು, ಒಟ್ಟು ರೂ. 33,40,152 ವಿನಿಯೋಗಿಸಲಾಗಿದೆ.
ಅನುದಾನದಲ್ಲಿ ಉಳಿಕೆಯಾದ ರೂ. 26.31.759 ರೂಪಾಯಿ ಹಣವನ್ನು ಈ ಬಾರಿ ವಿನಿಯೋಗಿಸಲಾಗುವುದು. ಹೆಚ್ಚುವರಿ ಅನುದಾನ ಬೇಕಾದಲ್ಲಿ ಈ ಅನುದಾನ ಮುಗಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಹಸೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ