Shiroor Mutt: ಉಡುಪಿ ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ ವಿವಾದ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಸನ್ಯಾಸಿ ಆಗುವುದನ್ನು ತಡೆಯಲು ಯಾವುದೇ ಶಾಸನ ಅಥವಾ ಕಾನೂನಿಲ್ಲ. ಸಂವಿಧಾನದಲ್ಲೂ ಇಲ್ಲ. ಇದು ನಿಷೇಧಿತ ಅಥವಾ ಹಾನಿಕಾರಕ ಅಭ್ಯಾಸವೂ ಅಲ್ಲ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಉಡುಪಿ(Udupi)ಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠ(Shiroor Mutt)ದ ಮಠಾಧೀಶರಾಗಿ 16 ವರ್ಷದ ಅಪ್ರಾಪ್ತರನ್ನು ಪೀಠಾಧಿಪತಿಯಾಗಿ(Bala Sanyasa) ಪಟ್ಟಾಭಿಷೇಕ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್(Karnataka High court) ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ತೀರ್ಪನ್ನು ಕಾಯ್ದಿರಿಸುವ ಮೊದಲು ಎರಡೂ ಕಡೆಯವರಿಂದ ಸುದೀರ್ಘ ವಿಚಾರಣೆ ನಡೆಸಿತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ಜಸ್ಟೀಸ್‌ ಸಚಿನ್‌ ಶಂಕರ್‌ ಮಗದುಂ ಅವರ ನೇತೃತ್ವದ ವಿಭಾಗೀಯ ಪೀಠವು 4 ಗಂಟೆಗಳಿಗೂ ಹೆಚ್ಚು ಕಾಲ ವಾದ - ವಿವಾದವನ್ನು ಆಲಿಸಿತು.

16 ವರ್ಷದ ವೇದವರ್ಧನ ತೀರ್ಥರನ್ನು (ಅವರ ಪೂರ್ವಾಶ್ರಮದ ಹೆಸರು ಅನಿರುದ್ಧ ಸರಳಥಾಯ) ಉಡುಪಿಯ ಶಿರೂರು ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಲಾಗಿದ್ದು, ಅಪ್ರಾಪ್ತರನ್ನು ಪೀಠಾಧಿಪತಿಯಾಗಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗಿತ್ತು.

ಈ ಸಂಬಂಧ ಅಮಿಕಸ್ ಕ್ಯೂರಿಯಂತೆ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ಹಿರಿಯ ವಕೀಲ ಎಸ್.ಎಸ್.ನಾಗಾನಂದ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಸನ್ಯಾಸಿ ಆಗುವುದನ್ನು ತಡೆಯಲು ಯಾವುದೇ ಶಾಸನ ಅಥವಾ ಕಾನೂನಿಲ್ಲ. ಸಂವಿಧಾನದಲ್ಲೂ ಇಲ್ಲ. ಇದು ನಿಷೇಧಿತ ಅಥವಾ ಹಾನಿಕಾರಕ ಅಭ್ಯಾಸವೂ ಅಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ:Jammu-Kashmir Issue: UN ಸಭೆಯಲ್ಲಿ ಮತ್ತೆ ವಿಷಯ ಕೆದಕಿದ ಪಾಕ್, ತಿರುಗೇಟು ನೀಡಿದ ಭಾರತ

ದ್ವಂದ್ವ ಮಠ ಅಥವಾ ಮಠವನ್ನು ಜೋಡಿಸುವ ವ್ಯವಸ್ಥೆಯ ಅಭ್ಯಾಸದ ಬಗ್ಗೆ ಮಾತನಾಡಿದ ಎಸ್.ಎಸ್.ನಾಗಾನಂದ್, ಒಂದು ಮಠದ ಮುಖ್ಯಸ್ಥರು ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡದೆ ಮೃತಪಟ್ಟರೆ
ಜೋಡಿಯ ಮಠದ ಮುಖ್ಯಸ್ಥರು ಅಂತಹ ಉತ್ತರಾಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಹೇಳಿದರು. ಈಗಾಗಲೇ 1917ರಲ್ಲಿ ಈ ಪದ್ಧತಿಯನ್ನು ಮದ್ರಾಸ್‌ ಹೈಕೋರ್ಟ್‌ ಗುರುತಿಸಿದೆ ಎಂದೂ ಹೇಳಿದರು.

ಇನ್ನು, 16 ವರ್ಷದ ಮಠಾಧೀಶರಿಗೆ ಪಟ್ಟಾಭಿಷೇಕ ಮಾಡಿದ ಸೋದೆ ಶ್ರೀ ವಾದಿರಾಜ ಮಠದ ಪರ ವಕೀಲರು, ಅರ್ಜಿದಾರರು ಈ ವಿಷಯದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿಕೊಂಡರು. ಅರ್ಜಿದಾರರಲ್ಲಿ ಒಬ್ಬರು ಶಿರೂರು ಮಠದ ಹಿಂದಿನ ಧರ್ಮಗುರುಗಳ ರಕ್ತ-ಸಹೋದರರಾಗಿದ್ದಾರೆ ಮತ್ತು ಇತರ ಅರ್ಜಿದಾರರು ಅವರ ಸಂಬಂಧಿಕರಾಗಿದ್ದು, ಅವರು ತಮ್ಮ ಹುಡುಗರಲ್ಲಿ ಒಬ್ಬರನ್ನು ಪೀಠಾಧಿಪಾತಿಯನ್ನಾಗಿ ಮಾಡಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, ಬಾಲ-ಸನ್ಯಾಸದ ಈ ಅಭ್ಯಾಸವು 800ಕ್ಕೂ ಅಧಿಕ ವರ್ಷಗಳಿಂದಲೂ ಇದೆ. ಅವರ ಆಸ್ಥಾನದಿಂದ ಎಲ್ಲಾ ಅಷ್ಟ ಮಠಗಳು ಬಾಲ-ಸನ್ಯಾಸಿಗಳನ್ನು ಪೀಠಾಧಿಪತಿಗಳಾಗಿ ಹೊಂದಿದ್ದವು, ಅವರು ಶ್ರೀ ಕೃಷ್ಣ ಮಠ ಸೇರಿದಂತೆ ಅಷ್ಟ ಮಠಗಳನ್ನು ಸಮರ್ಥವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದೂ ಅವರು ಹೇಳಿದರು.

ಮೇಲಾಗಿ, 18 ತಿಂಗಳ ಕಾಲ ಮಠದ ವ್ಯವಹಾರಗಳ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಜಗಳವಿಲ್ಲ ಎಂದು ಹೇಳಲಾಗಿದೆ. ಈ ನಾಲ್ಕು ವ್ಯಕ್ತಿಗಳು ಮಾತ್ರ ಪೀಠಾಧಿಪತಿ ನೇಮಕ ವಿರೋಧಿಸಿ ನ್ಯಾಯಾಲಯದ ಮುಂದೆ ಬಂದಿದ್ದಾರೆ, ಈ ಅರ್ಜಿದಾರರನ್ನು ಹೊರತುಪಡಿಸಿ ಶಿರೂರು ಮಠದ ಯಾವುದೇ ಅನುಯಾಯಿಗಳು ಪಟ್ಟಾಭಿಷೇಕದ ಕುರಿತು ಯಾವುದೇ ದೂರು ನೀಡಿಲ್ಲ. ಈ ಹಿನ್ನೆಲೆ ಪ್ರಸ್ತುತ ಪ್ರಕರಣದಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದೂ ವಕೀಲರು ಹೇಳಿದರು.

ಅರ್ಜಿಯಲ್ಲಿ ಕೋರಿರುವ ಮನವಿಯನ್ನು ಪಿಐಎಲ್‌ನಲ್ಲಿ ಸಲ್ಲಿಸಲು ಬರುವುದಿಲ್ಲ. ಏಕೆಂದರೆ ಮಠವು ಖಾಸಗಿ ಸಂಸ್ಥೆಯಾಗಿದೆ ಮತ್ತು ಸಂವಿಧಾನದ 25 ಮತ್ತು 26ನೇ ವಿಧಿಯು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೆಲವು ಹಕ್ಕುಗಳನ್ನು ನೀಡುತ್ತದೆ ಎಂದು ಸರ್ಕಾರಿ ವಕೀಲರು ರಾಜ್ಯ ಹೈಕೋರ್ಟ್‌ಗೆ ಹೇಳಿದರು.

ಇದನ್ನೂ ಓದಿ:Tragic Story: ನದಿಯಲ್ಲಿ ಸಿಲುಕಿದ್ದ ಆನೆ ರೆಸ್ಕ್ಯೂ ವೇಳೆ ಘೋರ ದುರಂತ; ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ..

ಪಿ. ಲತವ್ಯ ಆಚಾರ್ಯ ಹಾಗೂ ಇತರರು ಪೀಠಾಧಿಪತಿ ನೇಮಕಾತಿ ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು. ಇವರ ಪರ ಡಿ.ಆರ.. ರವಿಶಂಕರ್‌ ಎಂಬ ವಕೀಲರು ವಾದ ಮಾಡಿದರು. ಈ ಸಂಬಂಧ ವಾದ ವಿವಾದ ಆಲಿಸಿದ ರಾಜ್ಯ ಹೈಕೋರ್ಟ್‌ ಸದ್ಯ ತೀರ್ಪನ್ನು ಕಾಯ್ದಿರಿಸಿದೆ.
Published by:Latha CG
First published: