ಚಾಮರಾಜನಗರ ಆಕ್ಸಿಜನ್ ದುರಂತ: 2 ತಿಂಗಳಾದರೂ ಸಾಂತ್ವನ ಹೇಳುವ ಸೌಜನ್ಯ ತೋರದ ಸರ್ಕಾರ

ಸರ್ಕಾರ ನಿಮ್ಮ  ಜೊತೆ ಇರಲಿದೆ, ನಿಮ್ಮ ನೋವಿಗೆ ಸ್ಪಂದಿಸಲಿದೆ ಎಂದು  ಧೈರ್ಯ ತುಂಬಲಿಲ್ಲ. ಸರ್ಕಾರದ ಈ ನಡೆ ಸಂತ್ರಸ್ಥರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಚಾಮರಾಜನಗರ ಆಸ್ಪತ್ರೆ

ಚಾಮರಾಜನಗರ ಆಸ್ಪತ್ರೆ

  • Share this:
ಚಾಮರಾಜನಗರ (ಜೂ.2) ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದ ಕರಾಳ ಘಟನೆ ನಡೆದು ಇಂದಿಗೆ ಬರೋಬ್ಬರಿ ಎರಡು ತಿಂಗಳಾಯ್ತು. ಮೇ.2 ರಂದು ಘಟಿಸಿದ ಆಕ್ಸಿಜನ್ ಕೊರತೆಯ ಈ ದುರಂತ ಪ್ರಕರಣದಲ್ಲಿ 36 ಮಂದಿ  ಸಾವನ್ನಪ್ಪಿದ್ದರು. ಆದರೆ ಘಟನೆ ನಡೆದು ಎರಡು ತಿಂಗಳಾದರೂ ಸರ್ಕಾರ  ಮೃತರ ಕುಟುಂಬದವರಿಗೆ ಕನಿಷ್ಟ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಸರ್ಕಾರದ ಸಚಿವರಾಗಲಿ,  ಅಧಿಕಾರಿಗಳಾಗಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ  ಸಂಕಷ್ಟ ಆಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. 

ಮುಖ್ಯಮಂತ್ರಿಗಳಿರಲಿ, ಎರಡು ತಿಂಗಳಿಂದ ಜಿಲ್ಲೆಗೆ ಹಲವು ಬಾರಿ ಆಗಮಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು  ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ. ಸರ್ಕಾರ ನಿಮ್ಮ  ಜೊತೆ ಇರಲಿದೆ, ನಿಮ್ಮ ನೋವಿಗೆ ಸ್ಪಂದಿಸಲಿದೆ ಎಂದು  ಧೈರ್ಯ ತುಂಬಲಿಲ್ಲ. ಸರ್ಕಾರದ ಈ ನಡೆ ಸಂತ್ರಸ್ಥರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆ ನಡೆದಾಗ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡ ಉಚ್ಛ ನ್ಯಾಯಾಲಯ, ತನಿಖೆ  ನಡೆಸಲು ನಿವೃತ್ತ ನ್ಯಾಯಮೂರ್ತಿ ವೇಣುಗೋಪಲಾಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ತನಿಖೆ ನಡೆಸಿ ಪ್ರಾಥಮಿಕ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿತ್ತು. ಬಳಿಕ  ಸಂತ್ರಸ್ಥರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆಯಿತ್ತ ಮೇರೆಗೆ ಸರ್ಕಾರ  ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.

ಇದನ್ನೂ ಓದಿ:ಮಗುವಿನ ಒಪ್ಪಿಗೆ ಪಡೆದೇ ಡೈಪರ್ ಚೇಂಜ್ ಮಾಡ್ಬೇಕು; ಆಸ್ಟ್ರೇಲಿಯಾದಲ್ಲಿ ಈ ವಿಚಾರದ ಬಗ್ಗೆ ಭಾರೀ ಚರ್ಚೆ !

ಆದರೆ ವರದಿ ಯಲ್ಲಿ 36 ಮಂದಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದರೂ  24 ಮಂದಿಯ ಕುಟುಂಬಗಳಿಗೆ  ಮಾತ್ರ  ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ 12 ಮಂದಿ ಕುಟುಂಬಸ್ಥರ ಗೋಳು ಕೇಳುವವರೆ ಇಲ್ಲವಾಗಿದ್ದಾರೆ.

ಪರಿಹಾರದ ಚೆಕ್ ವಿತರಿಸಲು ಸಂತ್ರಸ್ತರನ್ನು ಭೇಟಿ ಮಾಡಿದರೆ ಜನಾಕ್ರೋಶ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಪರಿಹಾರದ ಮೊತ್ತವನ್ನು ನೇರವಾಗಿ ವಿತರಿಸದೆ ಆರ್. ಟಿ.ಜಿ.ಸಿ ಮೂಲಕ ಪಾವತಿಸಲಾಗಿದೆ.ಪರಿಹಾರ ದೊರೆಯದ ಕುಟುಂಬಗಳು ಪರಿಹಾರ ಹಾಗು ಡೆತ್ ಸರ್ಟಿಫಿಕೇಟ್ ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ.

ನಮಗೆ ಒಂದು ಕಡೆ ಪರಿಹಾರವೂ ದೊರಕಿಲ್ಲ, ಸರ್ಕಾರದ ಅಧಿಕಾರಿಗಳಾಗಲಿ, ಸಚಿವರಾಗಲಿ ಯಾರೂ ಸಹ ನಮ್ಮ ಕಷ್ಟ ಏನೆಂದು ಕೇಳಿಲ್ಲ, ಆಟೋ ಓಡಿಸುತ್ತಾ ನಮ್ಮ ಜೀವನಕ್ಕೆ ಆಧಾರಸ್ತಂಭವಾಗಿದ್ದ ನನ್ನ ಪತಿ ಕಳೆದುಕೊಂಡು ದಿಕ್ಕೇ ತೋಚದಂತಾಗಿದೆ. ವಯಸ್ಸಾದ ಅತ್ತೆ ಮಾವ,  ಇಬ್ಬರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಹೇಗೆ ಜೀವನ ಸಾಗಿಸಲಿ ಎಂದು ಬಿಸಿಲವಾಡಿ ಗ್ರಾಮದ ಜ್ಯೋತಿ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:LIC Saral Pension: ಸರಳ ಪಿಂಚಣಿ ಯೋಜನೆ ಪರಿಚಯಿಸಿದ ಎಲ್​ಐಸಿ; ಇದರಿಂದ ಸಿಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ನನ್ನ ಕಣ್ಣೆದುರೇ ಆಕ್ಸಿಜನ್ ಕೊರತೆಯಿಂದ ನನ್ನ ಪತಿ ಕೊನೆಯುಸಿರೆಳೆದರು. ಸರ್ಕಾರ ಪರಿಹಾರವನ್ನೂ ನೀಡಿಲ್ಲ, ಡೆತ್ ಸರ್ಟಿಫಿಕೇಟ್ ಕೇಳಿದರೆ ಎಲ್ಲಾ ದಾಖಲೆಗಳನ್ನು ಹೈ ಕೋರ್ಟ್ ಸೀಜ್ ಮಾಡಿದೆ. ವಿಚಾರಣೆ ಮುಗಿದ ಮೇಲಷ್ಟೆ ನಿಮ್ಮ ಪತಿಯ ಡೆತ್ ಸರ್ಟಿಫಿಕೇಟ್ ಸಿಗುತ್ತದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ, ನನಗಂತೂ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ಕೊಳ್ಳೇಗಾಲ ತಾಲೋಕು ಮುಡಿಗುಂಡ ಗ್ರಾಮದ ಸಿದ್ದರಾಜಮ್ಮ  ತಮ್ಮ ಅಳಲು ತೋಡಿಕೊಂಡರು.

ಇನ್ನೊಂದೆಡೆ  ಘಟನೆ ನಡೆದು 60 ದಿನಗಳಾದರೂ ಯಾರನ್ನೂ ಹೊಣೆ ಮಾಡದೆ, ಯಾರ ಮೇಲು ಕ್ರಮವಹಿಸದೆ ನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ವಿಚಾರಣೆ ಕಾಯ್ದಿರಿಸಿ ಪ್ರಾಥಮಿಕವಾಗಿ ಕ್ರಮ ಜರುಗಿಸಬಹುದಾದ ಸಾಧ್ಯತೆಗಳಿದ್ದರೂ ಸರ್ಕಾರ ಮುಗುಮ್ಮಾಗಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಕೈ ತೊಳೆದುಕೊಂಡಿದೆ. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್, ಹಾಗು ಎಸ್.ಡಿ.ಪಿ.ಐ ಎರಡೆರೆಡು ಬಾರಿ ಪ್ರತಿಭಟನೆ ನಡೆಸಿವೆ. ಆದರೆ ಸರ್ಕಾರ ಮಾತ್ರ ಯಾವುದಕ್ಕು ತಲೆಕೆಡಿಸಿಕೊಳ್ಳುತ್ತಿಲ್ಲ.
Published by:Latha CG
First published: