ಕರ್ನಾಟಕದಲ್ಲಿ ಶಾಲಾ ಆರಂಭದ ದಿನಾಂಕ ಖಚಿತವಾಗಿಲ್ಲ; ಸಚಿವ ಸುರೇಶ್ ಕುಮಾರ್

ವಲಸೆ ಕಾರ್ಮಿಕರ ಮಕ್ಕಳಿಗೆ ಅವರು ಇರುವ ಗ್ರಾಮಗಳಲ್ಲಿಯೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಪರೀಕ್ಷೆ ಪ್ರಾರಂಭವಾಗುವ ಎರಡು ದಿನ ಮುಂಚೆ ಕೋವಿಡ್ ದೃಢಪಟ್ಟರೆ ಪರೀಕ್ಷಾ ಕೇಂದ್ರವನ್ನು ಬೇರೆಡೆ ಶಿಫ್ಟ್​ ಮಾಡಬೇಕು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

news18-kannada
Updated:June 3, 2020, 10:29 PM IST
ಕರ್ನಾಟಕದಲ್ಲಿ ಶಾಲಾ ಆರಂಭದ ದಿನಾಂಕ ಖಚಿತವಾಗಿಲ್ಲ; ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್
  • Share this:
ಬಾಗಲಕೋಟೆ (ಜೂ. 3): ಕರ್ನಾಟಕದಲ್ಲಿ ಜುಲೈ 1ರಂದು ಶಾಲೆ ಆರಂಭವಾಗುತ್ತದೆ ಎನ್ನುವುದು ಶಿಕ್ಷಣ ಇಲಾಖೆ ಯೋಚಿತ ದಿನಾಂಕವಷ್ಟೆ, ಅದು ನಿರ್ಧರಿತ ದಿನಾಂಕವಲ್ಲ ಎಂದು ಬಾಗಲಕೋಟೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲಾ ಆರಂಭದ ಬಗ್ಗೆ ಹಲವು ವಿಚಾರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. 

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ, ಎಸ್ ಡಿಎಂಸಿ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕಳುಹಿಸಲಾಗುವುದು. ಕೇಂದ್ರದ ಸಲಹೆ ಬಂದ ಬಳಿಕವಷ್ಟೇ ಶಾಲೆ ಆರಂಭದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಮೇ 31ರಂದು ಪತ್ರ ಬಂದಿದೆ. ಹಾಗಾಗಿ, ರಾಜ್ಯದಲ್ಲಿ ಶಾಲಾ ಆರಂಭಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಂಗ್ರಹವಾದ ಅಭಿಪ್ರಾಯದ ವರದಿಯನ್ನು ಜೂನ್ 15ರೊಳಗೆ  ಕೇಂದ್ರಕ್ಕೆ ಸಲ್ಲಿಸಲಾಗುವುದು. ಜೊತೆಗೆ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿ  ಶಾಲಾ ಆರಂಭಿಸುವ ಬಗ್ಗೆ ನಿರ್ಧರಿಸುತ್ತೇವೆ. ಜೊತೆಗೆ ಕೇಂದ್ರದ ಸಲಹೆ ಏನು ಬರುತ್ತದೆ ಎನ್ನುವುದನ್ನು ನೋಡುತ್ತೇವೆ ಎಂದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಅಭಿಪ್ರಾಯ ಕ್ರೋಢೀಕರಣ ಮಾಡಲಾಗುತ್ತಿದೆ. ಶಾಲಾವಧಿಯೂ ಕಡಿಮೆಯಾಗಲಿದೆ. ಹೀಗಾಗಿ, ರಾಜ್ಯದ ಶಾಲೆಗಳ ಆರಂಭದ ಹಾಗೂ ಶೈಕ್ಷಣಿಕ ಪಠ್ಯಕ್ರಮ ಇಳಿಕೆ ಕ್ರಮದ ಕುರಿತು ಚಿಂತನೆ ನಡೆದಿದೆ. ಪಠ್ಯಕ್ರಮ ಕಡಿತಕ್ಕೆ ಡಿಎಸ್​ಆರ್​ಟಿಗೆ ಸೂಚಿಸಲಾಗಿದೆ. ಎಸ್​ಎಸ್​ಎಲ್​ಸಿ  ಪರೀಕ್ಷೆಗೆ ಹೇಗೆ ಅಗತ್ಯ ಮುಂಜಾಗ್ರತಾ ತೆಗೆದು ಕೊಳ್ಳಲಾಗುತ್ತಿದೆಯೋ ಹಾಗೇ ಶಾಲೆ ಆರಂಭಕ್ಕೂ ಸೂಕ್ತ ಮುಂಜಾಗ್ರತಾ ತೆಗೆದುಕೊಳ್ಳಲಾಗುವುದು. ಶಾಲೆ ಆರಂಭಿಸಿದರೆ  ಹೇಗೆ ಮಾಡಬೇಕು, ಮುಂದಿನ ತರಗತಿಗಳು ಹೇಗೆ? ಮಕ್ಕಳ ಆಟ, ವ್ಯಾಯಾಮ ಹೇಗೆ? ಈ ಬಗ್ಗೆ ಪಾಲಕರ ಅಭಿಪ್ರಾಯ ಪಡೆಯಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Corona Virus; ಹಾಸನದಲ್ಲಿ ಕೊರೋನಾ ಗೆದ್ದು ಬಂದ ಪೊಲೀಸರಿಗೆ ಭವ್ಯ ಸ್ವಾಗತ

2015ರ ಪಿಯುಸಿ ನೇಮಕಾತಿ ಪೂರ್ಣ:

2015ರಲ್ಲಿ ಪದವಿಪೂರ್ವ ಕಾಲೇಜು‌ ಉಪನ್ಯಾಸಕರ ನೇಮಕಾತಿ ನಡೆದಿದ್ದರೂ 5 ವರ್ಷವಾದರೂ ಪೂರ್ಣಗೊಂಡಿಲ್ಲ. ಹೀಗಾಗಿ, ನಾನು ಬಂದ ಬಳಿಕ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಜೂನ್ 18ರ ಬಳಿಕ ಕೌನ್ಸೆಲಿಂಗ್ ಮಾಡಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 2015 ರಿಂದಲೂ ಈ ಸಮಸ್ಯೆ ಇದೆ. ನಾನು ಬಂದ ಮೇಲೆ ರಿಸಲ್ಟ್ ಅನೌನ್ಸ್ ಮಾಡಿಸಿ ಒಂದು ಹಂತಕ್ಕೆ ತಂದಿದ್ದೇನೆ. ಈ ಮಧ್ಯೆ ಕೆಲವರು ಕೋರ್ಟ್​ಗೂ ಹೋಗಿದ್ರು. ಈಗ ಅವರಿಗೆ ನೇಮಕಾತಿ ಆದೇಶ ಕೊಡಬೇಕು. ಜೂನ್ 18ರ ಬಳಿಕ ಕೌನ್ಸಲಿಂಗ್ ಮಾಡಿ ಪಿಯು ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ಪಿಯು ಉಪನ್ಯಾಸಕರ ಅಭ್ಯರ್ಥಿಗಳಿಗೆ ಸಚಿವರು ಸಿಹಿಸುದ್ದಿ ನೀಡಿದ್ದಾರೆ.

ನಮ್ಮ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್​ನಲ್ಲಿದೆ!:ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಿನ್ನೆಯವರೆಗೆ ರಾಜ್ಯದಲ್ಲಿ ಯಾರೊಬ್ಬ ಕೊರೋನಾ ಸೋಂಕಿತರೂ ವೆಂಟಿಲೇಟರ್​ನಲ್ಲಿಲ್ಲ. 14 ಜನರು ಮಾತ್ರ ಐಸಿಯುನಲ್ಲಿ ಇದ್ದಾರೆ. ಸೋಂಕಿತರ ಪ್ರಮಾಣ ಶೇ. 1.3 ಇದೆ. ನಿನ್ನೆಯವರೆಗೂ ರಾಜ್ಯದಲ್ಲಿ 3,19,628 ಜನರನ್ನು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 3,796 ಪಾಸಿಟಿವ್ ಕೇಸ್ ಇವೆ. ಈವರೆಗೂ 52 ಜನರು ಸತ್ತಿದ್ದಾರೆ. ಇದರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1,403 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಇದನ್ನೂ ಓದಿ: ಕಾರುಗಳಿಗೂ ಬಂತು ಸ್ಯಾನಿಟೈಸರ್; ಬೆಂಗಳೂರಲ್ಲಿ ಫಾಗ್ ಸ್ಯಾನಿಟೈಸರ್​ಗೆ ಭಾರೀ ಬೇಡಿಕೆ

ಕೊರೊನಾ ಒಂದು ದಿನ ಬಂದು, ಒಂದೇ ದಿನಕ್ಕೆ ಹೋಗಲ್ಲ. ಕೆಲವು ತಿಂಗಳು ಕೊರೊನಾ ಜೊತೆ ಬದುಕಬೇಕಾಗಿದೆ. ಹೊರಗಿನಿಂದ ಬಂದವರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅವರು ಇಂಪೋರ್ಟ್ ಮಾಡಿದ್ದಾರೆ. ಮೊದಲು ಇಂಪೋರ್ಟ್ ಮೆಟಿರಿಯಲ್ ಎಂದರೆ ಖುಷಿ ಎನಿಸುತ್ತಿತ್ತು. ಆದರೆ, ಈಗ ಇಂಪೋರ್ಟ್ ಮೆಟಿರಿಯಲ್​ಗೆ ಭಯವಾಗುತ್ತಿದೆ. ನಾವು ಮುನ್ನೆಚ್ಚರಿಕೆ ತೆಗೆದುಕೊಂಡು ಕೊರೊನಾದೊಂದಿಗೆ ಬದುಕಬೇಕಿದೆ ಎಂದರು.

ಪಿಯುಸಿ ಪರೀಕ್ಷೆ ಮೌಲ್ಯಮಾಪನಕ್ಕೆ ಉಪನ್ಯಾಸಕರು ಹಿಂದೇಟು:ಈಗಾಗಲೇ ರಾಜ್ಯದಲ್ಲಿ ಇಂಗ್ಲಿಷ್ ವಿಷಯ ಹೊರತುಪಡಿಸಿ ಉಳಿದ ವಿಷಯಗಳ ಪಿಯುಸಿ ಪರೀಕ್ಷೆ ನಡೆದಿದೆ. ಇಂಗ್ಲೀಷ್ ವಿಷಯ ಪರೀಕ್ಷೆ ದಿನಾಂಕ ನಿಗದಿಯಾಗಿದೆ. ಸಾಮಾಜಿಕ ಅಂತರ, ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಪರೀಕ್ಷೆ ನಡೆಸಲಾಗುವುದು. ಇಂಗ್ಲೀಷ್ ಪತ್ರಿಕೆ ಮೌಲ್ಯಮಾಪನ ಜಿಲ್ಲಾ ಹಂತದಲ್ಲಿ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ ಉಳಿದ ವಿಷಯಗಳ ಮೌಲ್ಯಮಾಪನ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು. ಬಾಗಲಕೋಟೆ ಜಿಲ್ಲೆಯ ಪಿಯುಸಿ ಉಪನ್ಯಾಸಕರು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ, ಎಲ್ಲಾ ಪಿಯುಸಿ ಪರೀಕ್ಷೆ ಮೌಲ್ಯಮಾಪನ ಜಿಲ್ಲಾ ಹಂತದಲ್ಲಿ ನಡೆಯಲಿ ಎಂದು ಮನವಿ ಸಲ್ಲಿಸಿದರು.

ಉಚಿತ ಮಾಸ್ಕ್, ಸ್ಯಾನಿಟೈಸರ್ ಪೂರೈಕೆ!!:

ರಾಜ್ಯದ 8.50 ಲಕ್ಷ ಮಕ್ಕಳಿಗೆ ಮಾಸ್ಕ್ ಕೊಡಲು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್​ನವರು ಮುಂದೆ ಬಂದಿದ್ದಾರೆ. ತಮ್ಮ ಸ್ವಯಂ ಸೇವಕರ ಶ್ರದ್ದೆ ಮತ್ತು ಅಕ್ಕರೆಯಿಂದ ತಯಾರಿಸಿದ ಮಾಸ್ಕ್​ಗಳಾಗಿವೆ. ಇವುಗಳನ್ನು ಬಳಕೆ ಮಾಡಿದ ನಂತರ ವಾಶ್ ಮಾಡಿ ಪುನಃ ಬಳಸಬಹುದಾಗಿದೆ. ಅದೇ ರೀತಿ ಖಾಸಗಿ ಸಂಸ್ಥೆಯೊಂದು 75 ಲಕ್ಷ ರೂ.ಗಳ ಮೌಲ್ಯದ ಸ್ಯಾನಿಟೈಜರ್ ಅನ್ನು ಉಚಿತವಾಗಿ ನೀಡಿದ್ದು, ಆಯಾ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಪೂರೈಸಲಾಗುತ್ತಿದೆ ಎಂದರು.

ವಲಸೆ ಕಾರ್ಮಿಕರ ಮಕ್ಕಳಿಗೆ ಅವರು ಇರುವ ಗ್ರಾಮಗಳಲ್ಲಿಯೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಂಟೈನ್‍ಮೆಂಟ್ ಝೋನ್‍ನಲ್ಲಿ ಪರೀಕ್ಷಾ ಕೇಂದ್ರ ಇರದಂತೆ  ನೋಡಿಕೊಳ್ಳಬೇಕು. ಪರೀಕ್ಷೆ ಪ್ರಾರಂಭವಾಗುವ ಎರಡು ದಿನ ಮುಂಚೆ ಕೋವಿಡ್ ದೃಢಪಟ್ಟರೆ ಪರೀಕ್ಷಾ ಕೇಂದ್ರವನ್ನು ಬೇರೆಡೆ ಶಿಫ್ಟ್​ ಮಾಡಬೇಕು. ಒಂದು ವೇಳೆ ಪರೀಕ್ಷೆ ನಡೆದ ಒಂದೆರಡು ದಿನದ ನಂತರ ಆ ಪ್ರದೇಶದಲ್ಲಿ ಕೊರೋನಾ ದೃಢಪಟ್ಟರೆ ಅಂತಹ ಮಕ್ಕಳಿಗೆ ಜುಲೈ ತಿಂಗಳಲ್ಲಿ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.First published: June 3, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading