ಹಾಸನ; ಮರಾಠ ಪ್ರಾಧಿಕಾರ ರಚನೆ ನಿರ್ಧಾರವನ್ನು ಕೂಡಲೇ ಹಿಂಪಡೆಯಲು ಆಗ್ರಹಿಸಿ ಡಿಸೆಂಬರ್ 5ರ ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ನಡೆಯುವುದು ಖಚಿತ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡಿಗರ ನಡುವಿನ ಸವಾಲ್ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ತಿಳಿಸಿದರು.
ಹಾಸನದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಬಹಳ ಗಂಭೀರವಾದ ವಿಚಾರದಲ್ಲಿ ಕರ್ನಾಟಕ ಬಂದ್ ಕರೆದಿದ್ದೇವೆ. 5ನೇ ತಾರೀಖು ಬೆಳಿಗ್ಗೆ 6 ಗಂಟೆ ಸಮಯದಿಂದ ಸಂಜೆ 5 ಗಂಟೆವರೆಗೆ ಬಂದ್ ನಡೆಯಲಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡಿಗರ ನಡುವಿನ ಹೋರಾಟವಾಗಿದೆ. ಯಡಿಯೂರಪ್ಪರವರ ಸಚಿವ ಸಂಪುಟದ ಸದಸ್ಯರು, ಶಾಸಕರು ಬಂದ್ ವಿರೋಧಿಸಿ ಮಾತನಾಡಿಲ್ಲ. ಆದರೆ, ಸಿಎಂ ಯಡಿಯೂರಪ್ಪ ಅವರು ಯಾವ ರೀತಿ ಬಂದ್ ನಡೆಸುತ್ತಾರೆ ನಾನು ನೋಡುತ್ತೆನೆ ಎಂದು ಹೇಳಿದ್ದಾರೆ. ಅವರಿಗೆ ಅಂದೇ ನಾವು ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದರು.
ಚುನಾವಣೆ ಅಧಿಕಾರಕ್ಕೋಸ್ಕರ ವಿರೋಧ ಪಕ್ಷದವರು ಈ ಬಗ್ಗೆ ಏನು ಮಾತನಾಡುತ್ತಿಲ್ಲ. ಯಡಿಯೂರಪ್ಪ ಬಹಳ ದ್ವೇಷಿಯಾಗಿದ್ದು, ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ಯಾರನ್ನು ಮಂತ್ರಿ ಮಾಡಬೇಕು ಎಂಬುದರ ಬಗ್ಗೆ ಯೊಜನೆ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನದಿ ನೀರಿನ ಹೋರಾಟದಲ್ಲಿ ಸುಗ್ರಿವಾಜ್ಞೆ ಹೊರಡಿಸಿದರು. ಕರ್ನಾಟಕದಲ್ಲಿ ಅಂತಹ ಸಜ್ಜನ ರಾಜಕಾರಣಿಗಳು ಇದ್ದರು ಎಂದು ನೆನಪಿಸಿದರು.
ಕಾರವಾರ ನಿಪ್ಪಾಣಿ ಗಡಿ ಭಾಗದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಮರಾಠರು ಬಹುಸಂಖ್ಯಾತ ಜನಾಂಗ ಎಂದು ಪ್ರಾಧಿಕಾರ ರಚನೆ ಮಾಡಿದ್ದಾರೆ. ಸೊಲ್ಲಾಪುರದಲ್ಲಿ 1 ಲಕ್ಷ ಕನ್ನಡಿಗರಿದ್ದಾರೆ. ಅವರಿಗೆ ನೀವು ಯಾವುದೇ ಸಹಾಯ ಮಾಡಿಲ್ಲ. ಪ್ರಾಧಿಕಾರ ರಚನೆ ಹಿಂದೆ ಬಹಳ ಸಂಚಿದೆ. ಮರಾಠಿಗರ ಮತ ಪಡೆಯಲು ಪ್ರಧಾನಿಯವರು ಇದರ ಹಿಂದೆ ಇದ್ದಾರೆ. ನಾಳೆ ತಮಿಳು, ಕೇರಳ, ತೆಲುಗರು ಕೂಡ ಪ್ರಾಧಿಕಾರ ರಚನೆಗೆ ಕೇಳುತ್ತಾರೆ. ಕೊಡದಿದ್ದರೆ ನ್ಯಾಯಲಯಕ್ಕೆ ಹೋಗುತ್ತಾರೆ. ಗಡಿ ಭಾಗಗಳಲ್ಲಿ ಕನ್ನಡ ಶಾಲೆ ಮುಚ್ಚಿವೆ. ಅದಕ್ಕೆ ತೆಗೆದುಕೊಂಡ ಕ್ರಮವೇನು? ಪ್ರಾಧಿಕಾರ ರಚನೆ ಅಕ್ಷಮ್ಯ ಅಪರಾಧ. ನಾವು ಈ ಬಗ್ಗೆ ಜೈಲಿಗೆ ಹೋಗುತ್ತೇವೆ. ನಮ್ಮನ್ನು ಬಂಧಿಸಿ, ಜೈಲಿನಲ್ಲಿ ಇಡಿ. ಬೇಕಾದರೆ ಗುಂಡು ಹಾರಿಸಿ ಎಂದು ಆಕ್ರೋಶದಿಂದ ಹೇಳಿದರು.
ರಾಜ್ಯದಲ್ಲಿ ಸುಮಾರು 1600 ಸಂಘಟನೆಗಳು ಬಂದ್ ಗೆ ಬಹಿರಂಗ ಬೆಂಬಲ ಕೊಟ್ಟಿವೆ. ಬಸ್ ನಿಲ್ದಾಣಗಳಿಗೆ ಸಾರ್ವಜನಿಕರು ಬರುವುದು ಬೇಡ. ಬಸ್ ಸೌಲಭ್ಯ ಇರುವುದಿಲ್ಲ. ಟ್ಯಾಕ್ಸಿ ಆಟೋ ಚಾಲಕ ಸಂಘಟನೆಗಳು ನಮ್ಮ ಬಂದ್ ಗೆ ಬೆಂಬಲ ನೀಡಿವೆ. ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡಿದೆ. ಅಂದು ನ್ಯಾಯಾಲಗಳು ಬಂದ್ ಆಗುತ್ತವೆ. ಸರ್ಕಾರಿ ನೌಕರರು ಕೆಲಸಕ್ಕೆ ಬರಬೇಡಿ, ರೈಲು ಸಂಚಾರ ಇರುವುದಿಲ್ಲ. ಏನಾದರೂ ರೈಲು ಹೊರಟರೆ ರೈಲ್ವೆ ಹಳಿಗಳ ಮೇಲೆ ಜನ ಕುಳಿತು ಪ್ರತಿಭಟನೆ ನಡೆಸಲಿದ್ದಾರೆ. ಜನರಿಗೆ ತೊಂದರೆಯಾದರೆ ಕರ್ನಾಟಕಕ್ಕೆ ಬೆಂಕಿ ಬೀಳಲಿದೆ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಎಷ್ಟು ಜನರನ್ನು ಜೈಲಿಗೆ ಹಾಕುತ್ತಿರಿ ಹಾಕಿ. ನಿಮ್ಮ ತರ ಹಣ ಪಡೆದು ಜೈಲಿಗೆ ಹೋಗಲ್ಲ. ಹೋರಾಟದಿಂದ ಜೈಲಿಗೆ ಹೊಗುತ್ತೇವೆ. ಜೈಲಿಗೆ ಹೊಗಿ ಬಂದರೂ ಕೂಡ ಇನ್ನು ಯಡಿಯೂರಪ್ಪಗೆ ಬುದ್ದಿ ಬಂದಿಲ್ಲ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಇದನ್ನು ಓದಿ: ಕೊರೋನಾ ನಿಯಂತ್ರಣದಲ್ಲಿ ಗದಗ ಜಿಲ್ಲೆ ಅಭೂತಪೂರ್ವ ಸಾಧನೆ; 45 ದಿನದಲ್ಲಿ ಸಾವಿನ ಸಂಖ್ಯೆ ಶೂನ್ಯ, 16 ಪ್ರಕರಣ ಬಾಕಿ!
ನಾವು ಜೈಲಿಗೆ ಹೋದರೂ ಜಾಮೀನು ಪಡೆಯುವುದಿಲ್ಲ. ಈಗಾಗಲೇ 144 ಸೆಕ್ಷೆನ್ ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆಲ್ಲ ನಾವು ಹೆದರುವುದಿಲ್ಲ. ತಿರುವಳ್ಳುವರ್ ಪ್ರತಿಮೆ ಉದ್ಘಾಟನೆ ವೇಳೆ ಹಾಸನದಲ್ಲಿ ಅರೆಸ್ಟ್ ಆಗಿ 4 ದಿನ ಜೈಲಿನಲ್ಲಿದ್ದೆ ಎಂದು ನೆನಪಿಸಿದರು.
ವರದಿ - ಡಿಎಂಜಿ ಹಳ್ಳಿಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ