ಕೋಲಾರ (ಡಿಸೆಂಬರ್ 05); ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಕೋಲಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯಾದ್ಯಂತ ಕರ್ನಾಟಕ ಬಂದ್ ಎಫೆಕ್ಟ್ ಇಲ್ಲದೆ, ಎಂದಿನಂತೆ ಬಸ್ ನಿಲ್ದಾಣದಲ್ಲಿ ಸರ್ಕಾರಿ, ಖಾಸಗಿ ಬಸ್ ಸಂಚಾರ ಹಾಗೂ ಆಟೋ, ಕ್ಯಾಬ್, ಇತರೆ ಸಾರಿಗೆ ಸಂಚಾರ ಎಂದಿನಂತೆ ಇತ್ತು. ಇನ್ನು ಮಾರುಕಟ್ಟೆ, ಪ್ರಮುಖ ರಸ್ತೆಗಳಲ್ಲಿ ಜನರು ಎಂದಿನಂತೆ ಚರಿಸುತ್ತಿದ್ದರು. ಇತ್ತ ಕರ್ನಾಟಕ ಬಂದ್ ಕರೆ ಕೊಟ್ಟಿರುವ ಕನ್ನಡಪರ ಸಂಘಟನೆಗಳು ಬೆಳ್ಳಂ ಬೆಳಗ್ಗೆ 9 ಗಂಟೆ ವರೆಗೂ ಬೀದಿಗಿಳಿದು ಎಲ್ಲೂ ಹೋರಾಟ ನಡೆಸಿದ್ದು ಕಂಡು ಬಂದಿಲ್ಲ. ಆದರೆ, ಬಂದ್ ಕರೆ ಹಿನ್ನಲೆ ಬಸ್ ನಿಲ್ದಾಣ, ಕ್ಲಾಕ್ ಟವರ್ ವೃತ್ತ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು ಬೆಳಗ್ಗೆ ಕಂಡುಬಂದಿತ್ತು.
ಕರ್ನಾಟಕ ಬಂದ್ ಕರೆ ಬೆಂಬಲಿಸಿ ಕೋಲಾರದಲ್ಲಿ ಹಲವೆಡೆ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದರು. ಬಸ್ ನಿಲ್ದಾಣ ವೃತ್ತದಲ್ಲಿ, ಕರ್ನಾಟಕ ಬಂದ್ ಬೆಂಬಲಿಸಿ ಕರವೇ ನಾರಾಯಣಗೌಡ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸುಮಾರು 50ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಮರಾಠ ಪ್ರಾಧಿಕಾರ ರಚಿಸಿದ ನಿರ್ಧಾರವನ್ನು ರದ್ದು ಮಾಡುವಂತೆ ಆಗ್ರಹಿಸಿ ಸಿಎಂ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಜಯಕರ್ನಾಟಕ ಸಂಘಟನೆ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮರಾಠ ಪ್ರಾಧಿಕಾರ ರದ್ದು ಮಾಡುವಂತೆ ಆಗ್ರಹಿಸಿದರು. ಕೋಲಾರದ ಮೆಕ್ಕೆ ವೃತ್ತದಲ್ಲಿ ಕರವೇ ಕದಂಬ ಸೇನೆ ಸಂಘಟನೆ ಮುಖಂಡರು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕನ್ನಡಪರ ಹೋರಾಟಗಾರರ ವಿರುದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನ ಖಂಡಿಸಿ, ಕೋಲಾರದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗು ಹಸಿರುಸೇನೆ ಸಂಘಟನೆ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದೆ. ನಗರದ ಮೆಕ್ಕೆ ವೃತ್ತದಲ್ಲಿ ಪಾಟೀಲ್ ಅವರ, ಭಾವಚಿತ್ರವಿರೊ ಪ್ರತಿಕೃತಿಗೆ ಸಗಣಿ ನೀರನ್ನ ಸುರಿದು, ಮೊಟ್ಟೆ ಹೊಡೆದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಬಂದ್ ಕರೆ ನೀಡಿದ ಕನ್ನಡಪರ ಹೋರಾಟಗಾರರ ವಿರುದ್ದ ನೀಡಿರುವ ಅವಹೇಳನಾ ಕಾರಿ ಹೇಳಿಕೆಗೆ ಕ್ಷಮೆಯಾಚಿಸಿ, ಶಾಸಕರನ್ನ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಶಾಸಕ ಬಸವನಗೌಡ ಯತ್ನಾಳ್ ಪ್ರತಿಕೃತಿ ದಹಿಸಿ, ಭಾವಚಿತ್ರಗಳನ್ನ ಸುಟ್ಟು ದಿಕ್ಕಾರ ಕೂಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ