ದೊಡ್ಡಬಳ್ಳಾಪುರದಲ್ಲಿ ಮಾನವ ಸರಪಳಿ ನಿರ್ಮಿಸಿದ ಕನ್ನಡಪರ ಹೋರಾಟಗಾರರು

ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳಿಂದ ಮಾನವ ಸರಪಳಿ ನಿರ್ಮಾಣ

ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳಿಂದ ಮಾನವ ಸರಪಳಿ ನಿರ್ಮಾಣ

ಕರ್ನಾಟಕ ಬಂದ್​ಗೆ ದೊಡ್ಡಬಳ್ಳಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟಗಾರರು ಬೆಳಗ್ಗೆಯಿಂದಲೇ ಹೋರಾಟಕ್ಕೆ ಧುಮುಕ್ಕಿದ್ದು ಮಾನವ ಸರಪಳಿ ನಿರ್ಮಿಸಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

  • Share this:

ದೊಡ್ಡಬಳ್ಳಾಪುರ: ಮರಾಠ ಅಭಿವೃದ್ಧಿ ನಿಗಮಕ್ಕೆ ಮುಂದಾಗಿರುವ ಸರ್ಕಾರದ ಧೋರಣೆ  ವಿರುದ್ಧ ಕನ್ನಡಪರ  ಸಂಘಟನೆಗಳ ಒಕ್ಕೂಟ  ಇಂದು ಕರ್ನಾಟಕ ಬಂದ್​ಗೆ ಕರೆ ನೀಡಿದ ಹಿನ್ನೆಲೆ, ದೊಡ್ಡಬಳ್ಳಾಪುರ ನಗರದಲ್ಲಿ ಬಂದ್​ಗೆ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು ಬೆಳಗ್ಗೆ 7 ಗಂಟೆಗೆ ನಗರದ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಿಂದ ಬೈಕ್ ರ್ಯಾಲಿ ಆರಂಭಿಸಿದರು. ನಗರದ ಪ್ರಮುಖ ವೃತ್ತಗಳಲ್ಲಿ ನೂರಾರು ಕಾರ್ಯಕರ್ತರು ಬೈಕ್  ರ್ಯಾಲಿ ಮಾಡಿ ಸರ್ಕಾರದ ವಿರುದ್ಧ  ಘೋಷಣೆ  ಕೂಗಿದರು. ಬೆಳಗ್ಗೆ 11 ಗಂಟೆಗೆ ನಗರದ ನೆಲದಾಂಜನೇಯ ದೇವಸ್ಥಾನದಿಂದ ತಾಲೂಕು ಕಚೇರಿ ವೃತ್ತದವರೆಗೂ ಪ್ರತಿಭಟನೆ  ನಡೆಸಿದರು. 


ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ  ನಿರ್ಮಿಸಿ ಮುಖ್ಯಮಂತ್ರಿ  ಯಡಿಯೂರಪ್ಪ, ಬಸವಗೌಡ ಯತ್ನಾಳ್ ವಿರುದ್ಧ  ಘೋಷಣೆ  ಕೂಗಿ ಮರಾಠ ಅಭಿವೃದ್ಧಿ ನಿಗಮ ರಚನೆಯ ಆದೇಶ ಹಿಂಪಡೆಯುವಂತೆ  ಆಗ್ರಹಿಸಿದರು.


ಬಂದ್ ಹಿನ್ನೆಲೆ ನಗರದಲ್ಲಿ ಯಾವುದೇ  ರೀತಿಯ  ಅಹಿತಕರ  ಘಟನೆ  ನಡೆಯದಂತೆ  ಪೊಲೀಸ್  ಬಂದೋಬಸ್ತ್  ಮಾಡಲಾಗಿತ್ತು. ನಗರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಿದೆ. ಕೆಲವು ಕಡೆ ಅಂಗಡಿ ಎಂದಿನಂತೆ ಬಾಗಿಲು ತೆಗೆದು ವಹಿವಾಟು ನಡೆಸಿದವಾದರೂ, ಬಹುತೇಕ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.


ಇದನ್ನೂ ಓದಿ: ಡಿಸಿಎಂಗೆ ಪಂಚಾಯತ್ ಗೊತ್ತಿಲ್ಲ, ಕುಮಾರಸ್ವಾಮಿಗೆ ಕಾರ್ಯಕರ್ತರು ಬೇಕಿಲ್ಲ: ಡಿಕೆ ಸುರೇಶ್, ಬಾಲಕೃಷ್ಣ ಕಿಡಿ


ನಗರದಲ್ಲಿ ವಾಹನ ಓಡಾಟ ಮತ್ತು ಜನರ ಸಂಚಾರ ಇಲ್ಲದೆ ರಸ್ತೆಗಳು ಬಿಕೋ ಅನ್ನುತ್ತಿದ್ದವು. ಕೆಎಸ್​ಆರ್​ಟಿಸಿ ಬಸ್ ಮತ್ತು ಬಿಎಂಟಿಸಿ ಬಸ್​ಗಳು ಎಂದಿನಂತೆ ಸಂಚರಿಸಿವೆ. ವೀಕೆಂಡ್ ಮತ್ತು ಜಡಿಮಳೆಯಿಂದ ಸಹ ಜನರು ಮನೆಯಿಂದ ಹೊರ ಬಂದಿಲ್ಲದಿರಬಹುದು. ಇದೂ ಸಹ ಕರ್ನಾಟಕ ಬಂದ್ ಯಶಸ್ವಿಯಾಗಲು ಭಾಗಶಃ ಕಾರಣವಾಗಿದೆ.


ವರದಿ: ನವೀನ್ ಕುಮಾರ್

First published: