ರಾಯಚೂರು: ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ರೂಪಾಯಿ ನೀಡಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಯಚೂರಿನಲ್ಲಿ ನಿರಸ ಪ್ರತಿಕ್ರಿಯೆ ಉಂಟಾಗಿದೆ. ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆದವೇ ಹೊರತು ಬಂದ್ ಯಶಸ್ವಿಯಾಗಿಲ್ಲ ಎಂದೇ ಹೇಳಬೇಕು. ರಾಯಚೂರು ನಗರ ಸೇರಿದಂತೆ ಹಲವೆಡೆ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಬಂದ್ ಕರೆ ನೀಡಿದ್ದವು. ರಾಯಚೂರಿನಲ್ಲಿ 16 ಕನ್ನಡ ಪರ ಸಂಘಟನೆಗಳು ಸೇರಿ ಬಂದ್ ಆಚರಿಸುವುದಾಗಿ ಒಂದು ವಾರದ ಹಿಂದೆಯೇ ಘೋಷಿಸಿದ್ದರು. ಆದರೆ, ಪೊಲೀಸರು ಬಂದ್ ಗೆ ಅವಕಾಶವಿಲ್ಲ ಎಂದು ಹೇಳಿದ್ದರಲ್ಲದೆ, ಬಲವಂತದ ಬಂದ್ ಮಾಡಿಸಿದರೆ ಕಾನೂನು ಕ್ರಮ ಎಂಬ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಂಘಟನೆಗಳು ಬಂದ್ ಘೋಷಣೆ ಮಾಡಿದ್ದರು ಬಂದ್ ಮಾಡಿಸಲು ಮುಂದಾಗಿಲ್ಲ.
ಇದರಿಂದಾಗಿ ನಗರದಲ್ಲಿ ಮುಂಜಾನೆಯಿಂದಲೇ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ದೈನಿಂದಿನ ಕಾರ್ಯಗಳಿಗೆ ಯಾವುದೇ ಅಡ್ಡಿ ಆತಂಕವಿರಲಿಲ್ಲ. ಬಸ್, ಅಟೋ, ಖಾಸಗಿ ವಾಹನ ಗಳ ಸಂಚಾರ ಎಂದಿನಂತೆ ಆರಂಭವಾಯಿತು. ಆರಂಭದಲ್ಲಿ ಬಸ್ ಸಂಚಾರದ ಬಗ್ಗೆ ಜನರಲ್ಲಿ ಗೊಂದಲವಿತ್ತು. ಆದರೆ, ತದನಂತರ ಬಸ್ ಸಾರಿಗೆ ಎಂದಿನಂತೆ ಆರಂಭವಾಗಿದ್ದರಿಂದ ಜನರು ಬಸ್ ಪ್ರಯಾಣಕ್ಕೆ ಮುಂದಾದರು.
ಈ ಮಧ್ಯೆ ರಾಯಚೂರಿನ ಅಧಿಕೃತ ತರಕಾರಿ ಮಾರುಕಟ್ಟೆಯಾದ ಉಸ್ಮಾನಿಯಾ ಮಾರುಕಟ್ಟೆಯಲ್ಲಿ ನಿನ್ನೆಯೇ ಬಂದ್ ಘೋಷಣೆ ಮಾಡಿದ್ದ ಕಾರಣ ಇಂದು ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ, ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುವವರು ಹೋಲ್ಸೆಲ್ ಅಂಗಡಿಗಳಲ್ಲಿ ತರಕಾರಿ ಖರೀದಿಸಿ ಮಾರಾಟಕ್ಕೆ ಮುಂದಾದರು. 10 ಗಂಟೆಯ ನಂತರ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಸರ್ಕಾರ ಕನ್ನಡಿಗರ ಪಾಲಿಗೆ ಸತ್ತಿದೆ ಎಂದು ರಸ್ತೆ ಶ್ರದ್ದಾಂಜಲಿ ಸಲ್ಲಿಸಿದರು.
ಈ ವೇಳೆ ಕಾರ್ಯಕರ್ತರು ಶವದ ಮುಂದೆ ಅಳುವಂತೆ ಅಣಕು ರೋಧನ ಮಾಡಿದರು. ಇನ್ನಷ್ಟು ಸಂಘಟನೆಯವರು ಸರಕಾರ ನಮ್ಮನ್ನು ಬೆತ್ತಲೆ ಮಾಡಿ ತಲೆಯ ಮೇಲೆ ಕಲ್ಲು ಹಾಕಿದೆ ಎಂಬಂತೆ, ಅರೆನಗ್ನರಾಗಿ ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು. ಕರವೇ ನಾರಾಯಣಗೌಡ ಬಣ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಇದೇ ರೀತಿಯಲ್ಲಿ ಸಿಂಧನೂರಿನಲ್ಲಿ ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ತಹಸೀಲ್ದಾರ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಲಿಂಗಸಗೂರಿನಲ್ಲಿಯು ಸಹ ಕನ್ನಡ ಪರ ಸಂಘಟನೆಯವರು ರಸ್ತೆಯಲ್ಲಿ ಟಾಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ