ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ರಾಜ್ಯ, ಅಂತಾರಾಜ್ಯ ಸೈಬರ್ ಕ್ರೈಮ್ ವಂಚಕರ ಬಂಧಿಸಿದ ಕಾರವಾರ ಪೊಲೀಸರು

ಯಾವುದೇ ಅಪರಿಚಿತ ಇ- ಮೇಲ್, ಮೊಬೈಲ್ ಕರೆಗಳು, ವಾಟ್ಸಪ್ ಸಂದೇಶ, ಫೇಸ್ ಬುಕ್ ಪೋಸ್ಟ್ ಗಳು, ಉದ್ಯೋಗ ನೀಡುವುದು, ಬಹುಮಾನ ಬಂದಿದೆಯೆಂಬ ಸಂದೇಶ, ಲಕ್ಕಿ ಡಿಪ್ ನಲ್ಲಿ ವಿಜೇತರಾಗಿದ್ದೀರಿ ಎಂಬ ಇತ್ಯಾದಿ ಸಂದೇಶಗಳ ಆಮಿಷಗಳಿಗೆ ಒಳಗಾಗಿ ಮೋಸ ಹೋಗದಿರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿವಿಮಾತು ಹೇಳಿದ್ದಾರೆ.

ವಂಚಕರನ್ನು ಬಂಧಿಸಿರುವ ಕಾರವಾರ ಪೊಲೀಸರು.

ವಂಚಕರನ್ನು ಬಂಧಿಸಿರುವ ಕಾರವಾರ ಪೊಲೀಸರು.

  • Share this:
ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರ ತಾಲೂಕಿನ ಗುಣವಂತೆಯ ನಿವಾಸಿ ನೇತ್ರಾವತಿ ಗೌಡಾ ಎನ್ನುವವರಿಗೆ ಅಮೆರಿಕಾದಲ್ಲಿ ಉದ್ಯೋಗ ನೀಡುವುದಾಗಿ ಇ-ಮೇಲ್ ಕಳುಹಿಸಿ ನಂಬಿಕೆ ಹುಟ್ಟಿಸಿ ವಿವಿಧ ಸುಂಕದ ಹೆಸರಿನಲ್ಲಿ ಕರ್ನಾಟಕ, ತ್ರಿಪುರಾ, ಆಸ್ಸಾಂ, ತಮಿಳುನಾಡು, ಮಣಿಪುರ, ಗುಜರಾತ್, ದೆಹಲಿ ರಾಜ್ಯದಲ್ಲಿರುವ ತಮ್ಮ ಒಟ್ಟು 17 ಬ್ಯಾಂಕ್ ಖಾತೆಗಳಿಗೆ ನೇತ್ರಾವತಿಯಿಂದ ಒಟ್ಟು ರೂ.57,14,749ನ್ನು ವಂಚಕರು ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ ಇದು ವಂಚನೆ ಎಂದು ತಿಳಿದು ನೇತ್ರಾವತಿ ಜಿಲ್ಲಾ ಸೈಬರ್ ಕ್ರೈಂ ಠಾಣೆಗೆ ಫೆ.10ರಂದು ದೂರು ನೀಡಿದ್ದರು.

ಈ ಬಗ್ಗೆ ದೂರು ದಾಖಲಿಸಿಕೊಂಡ ಸಿಇನ್ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ ಪಿ. ಹಾಗೂ ಅವರ ಸಿಬ್ಬಂದಿಗಳು ತಕ್ಷಣ ಪ್ರಕರಣದ ತನಿಖೆಯನ್ನು ಮುಂದುವರೆಸಿ ಕೋಲಾರ ಮೂಲದ ಅಶೋಕ ಎಂ.ಎನ್, ಅಸ್ಸಾಂ ಮೂಲದ ಬುಲ್ಲಿಯಂಗಿರ್ ಹಲಾಮ್, ತ್ರಿಪುರ ಮೂಲದ ದರ್ತಿನ್ಬೀರ್ ಹಲಾಮ್, ಮಣಿಪುರ ಮೂಲದ ವೊರಿಂಗಮ್ ಫುಂಗ್ಶೋಕ್ ಎನ್ನುವವರನ್ನು ಬಂಧಿಸಿದ್ದಾರೆ. ಇವರೆಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದರು. ಆರೋಪಿತರು ಹಣ ವರ್ಗಾವಣೆ ಮಾಡಿಸಿಕೊಂಡ ಎಲ್ಲಾ ಬ್ಯಾಂಕ್ ಖಾತೆಗಳಿಂದ 2,61,528 ರೂ.ಗಳನ್ನು ಪ್ರೀಜ್ ಮಾಡಿಸಿದ್ದು, ಸದರಿ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಪಡೆದುಕೊಂಡು ತಾಂತ್ರಿಕವಾಗಿ ವಿಶ್ಲೇಷಣೆ ಮಾಡಿ, ಆರೋಪಿತರ ಪತ್ತೆಗಾಗಿ ತಂಡವನ್ನು ರಚಿಸಿಕೊಂಡು ಫೆ.28ರಂದು ಬೆಂಗಳೂರಿಗೆ ತೆರಳಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರಿಂದ ಏನೆಲ್ಲ ವಶಕ್ಕೆ ಪಡೆಯಲಾಯಿತು?

ಬಂಧಿತರಿಂದ 24,000 ನಗದು, ಒಂದು ಸ್ವೈಪ್ ಮಶೀನ್, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಥಂಬ್ ಮಶೀನ್, 24 ಬ್ಯಾಂಕ್ ಖಾತೆ, 24 ಎಟಿಎಮ್ ಕಾರ್ಡ್, 24 ಚೆಕ್ ಬುಕ್, 2 ಲ್ಯಾಪ್‌ಟಾಪ್, 23 ಮೊಬೈಲ್, 17 ಸಿಮ್, 1 ಟ್ಯಾಬ್, 2 ಪೆನ್‌ಡ್ರೈವ್, ಒಂದು ಡಾಂಗಲ್, ಒಂದು ವೈಫೈ ರೂಟರ್ ಮಶೀನ್ ಜಪ್ತಿಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ನೈಜೀರಿಯನ್ ದೇಶದ ಹಾಗೂ ಅಸ್ಸಾಂ ರಾಜ್ಯದ ಆರೋಪಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ. ಹೀಗಾಗಿ ಅವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಇದನ್ನು ಓದಿ: ಸಿನಿಮಾ ಸ್ಟೈಲ್ ನಲ್ಲಿ ನಡೆದ 11 ವರ್ಷದ ಬಾಲಕನ ಕೊಲೆ ಹಿಂದಿನ ರಹಸ್ಯ ಏನು?

ಈ ಪ್ರಕರಣದಲ್ಲಿ ಆರೋಪಿತರು ಹೊರ ರಾಜ್ಯದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಬೇಕಾಬಿಟ್ಟಿಯಾಗಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಈ ಬಗ್ಗೆ ಅವರ ಖಾತೆ ತೆರೆಯಲು ಯಾವುದೇ ರೀತಿಯ ಪರಿಶೀಲನೆ ಮಾಡದೇ ಖಾತೆಗಳನ್ನು ನೀಡಿ ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಪತ್ರ ವ್ಯವಹಾರ ಮಾಡಲಾಗುವುದು. ಯಾವುದೇ ಅಪರಿಚಿತ ಇ- ಮೇಲ್, ಮೊಬೈಲ್ ಕರೆಗಳು, ವಾಟ್ಸಪ್ ಸಂದೇಶ, ಫೇಸ್ ಬುಕ್ ಪೋಸ್ಟ್ ಗಳು, ಉದ್ಯೋಗ ನೀಡುವುದು, ಬಹುಮಾನ ಬಂದಿದೆಯೆಂಬ ಸಂದೇಶ, ಲಕ್ಕಿ ಡಿಪ್ ನಲ್ಲಿ ವಿಜೇತರಾಗಿದ್ದೀರಿ ಎಂಬ ಇತ್ಯಾದಿ ಸಂದೇಶಗಳ ಆಮಿಷಗಳಿಗೆ ಒಳಗಾಗಿ ಮೋಸ ಹೋಗದಿರಿ ಎಂದವರು ಕಿವಿಮಾತು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ, ಸಿಬ್ಬಂದಿಗಳಾದ ಉಮೇಶ ನಾಯ್ಕ, ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಹೆಗಡೆ, ಹನುಮಂತ ಕಬಾಡಿ, ನಾರಾಯಣ ಎಮ್.ಎಸ್, ಚಂದ್ರಶೇಖ ಪಾಟೀಲ್, ಸುರೇಶ ನಾಯ್ಕ, ಸಂದೀಪ್ ನಾಯ್ಕ, ಶಿವಾನಂದ ತಾನಸಿ, ಭರತೇಶ ಸದಲಗಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಸುಧೀರ ಮಡಿವಾಳ, ರಮೇಶ ನಾಯ್ಕ ಅವರು ಪಾಲ್ಗೊಂಡಿದ್ದರು.
Published by:HR Ramesh
First published: