ಕಲಬುರ್ಗಿ(ನ. 17): ಕಲಬುರ್ಗಿ ನಗರ ಒಂದು ಕಡೆ ಪ್ರತಿಭಟನೆ, ಮತ್ತೊಂದು ಕಡೆ ವಿಜಯೋತ್ಸವ ಎರಡಕ್ಕೂ ಸಾಕ್ಷಿಯಾಯಿತು. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರವೇ ಕಾರ್ಯಕರ್ತರು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ವಿನೂತನವಾಗಿ ಪ್ರತಿಭಟಿಸಿದರು. ಮತ್ತೊಂದೆಡೆ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ ವಿಜಯೋತ್ಸವದ ಸ್ವರೂಪ ಪಡೆದುಕೊಂಡಿತು. ಸಹಿ ಸಂಗ್ರಹ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟಗೊಂಡಿಂದ್ದರಿಂದ ವಿಜಯೋತ್ಸವ ಆಚರಿಸಿದರು.
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯ ನಿರ್ಧಾರ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ವಿನೂತನ ಪ್ರತಿಭಟನೆ ಮಾಡಲಾಯಿತು. ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು
ರಾಜ್ಯದಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಪರಿಹಾರ ಕೊಡುವುದರ ಬಗ್ಗೆ ಗಮನಹರಿಸದೆ ರಾಜ್ಯ ಸರ್ಕಾರ ಮರಾಠ ನಿಗಮ ಸ್ಥಾಪನೆ ಮಾಡಿದೆ. ರಾಜಕೀಯ ಸ್ವಾರ್ಥಕ್ಕಾಗಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದು ಕಿಡಿಕಾರಿದರು. ಕೂಡಲೇ ಮರಾಠಾ ಅಭಿವೃದ್ಧಿ ನಿಗಮ ರದ್ದುಗೊಳಿಸಬೇಕು. ಮಹಾಜನ್ ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕು. ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡೋದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಇದನ್ನೂ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಬೆನ್ನಲ್ಲೇ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೂ ಕೂಗು
ವೀರಶೈವ-ಲಿಂಗಾಯತ ವಿಜಯೋತ್ಸವ:
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಕಲಬುರ್ಗಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆಗಳಿಂದ ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಲಾಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಿಎಂ ಬಿಎಸ್ ಯಡಿಯೂರಪ್ಪಗೆ ಜಯಘೋಷ ಹಾಕಿದರು.
ಶ್ರೀಶೈಲ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಸ್ವಾಗತ:
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸುಲಫಲಶ್ರೀ ಸ್ವಾಗತ ಮಾಡಿದ್ದಾರೆ. ಕಲಬುರ್ಗಿಯಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದಿದ್ದಾರೆ.
ಆದರೆ, ಕೇವಲ ನಿಗಮ ಸ್ಥಾಪಿಸಿದರೆ ಉಪಯೋಗವಿಲ್ಲ. ಅದಕ್ಕೆ ತಕ್ಕಂತೆ ಹೆಚ್ಚಿನ ಅನುದಾನವನ್ನು ಕೊಡಬೇಕು. ಪ್ರತಿ ವರ್ಷ ಕನಿಷ್ಟ 500 ಕೋಟಿ ರೂಪಾಯಿ ಅನುದಾನ ನೀಡಬೇಕು. ಜೊತೆಗೆ ವೀರಶೈವ ಲಿಂಗಾಯತರನ್ನು 2ಎ ಗ್ರೂಪ್ಗೆ ಸೇರಿಸಬೇಕು. ವೀರಶೈವ ಲಿಂಗಾಯತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರ ಆಗ್ರಹ.
ವರದಿ: ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ