ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಆಗಸ್ಟ್ 23ರಂದು ಐವರು ಸುರಕ್ಷಿತವಾಗಿ ಬಂದಿದ್ದಾರೆ. ಆಗಸ್ಟ್ 17ರಂದು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಆದ ಐವರು ಮಂಗಳೂರಿಗರು, ಭಯಾನಕ ಸಂಗತಿ ತೆರೆದಿಟ್ಟಿದ್ದು, ಇನ್ಮುಂದೆ ಅಫ್ಘಾನಿಸ್ತಾನಕ್ಕೆ ಹೋಗಲ್ಲ. ಭಾರತದಲ್ಲೇ ಉಳಿದ ಜೀವನ ಮಾಡ್ತೀವಿ ಅಂತಾ ಹೇಳಿದ್ದಾರೆ. ಅಷ್ಟಕ್ಕೂ ಅಫ್ಘಾನಿಸ್ತಾನದಲ್ಲಿ ಅವರು ಕಂಡಿದ್ದೇನು?ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಅವರ ಜರ್ನಿ ಹೇಗಿತ್ತು ಅನ್ನೋದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಮಂಗಳೂರಿನ ಬಿಜೈ ಶ್ರವಣ್ ಅಂಚನ್, ಮೂಡಬಿದಿರೆಯ ಜಗದೀಶ್ ಪೂಜಾರಿ, ಬಜಪೆಯ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆಯ ನಿವಾಸಿ ಡೆಸ್ಮಂಡ್ ಡಿಸೋಜಾ ಸುರಕ್ಷಿತವಾಗಿ ಮಂಗಳೂರನ್ನು ತಲುಪಿದ್ದಾರೆ. ನಾಲ್ವರು ರಾತ್ರಿ ಮಂಗಳೂರನ್ನು ತಲುಪಿದರೆ, ಮಂಗಳೂರು ನಗರ ಹೊರವಲಯದ ಕೊಲ್ಯದ ಕನ್ನೀರ್ ತೋಟದ ನಿವಾಸಿ ಪ್ರಸಾದ್ ಆನಂದ್ ನಿನ್ನೆ ಮಧ್ಯಾಹ್ನವೇ ಮನೆ ತಲುಪಿದ್ದರು. ಆಗಸ್ಟ್ 23 ರಾತ್ರಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಲ್ವರು ಬಂದಿಳಿದಿದ್ದು, ಭಾರತಕ್ಕೆ ಬಂದಿಳಿದಿರೋದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ ಅಂತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿ ಪಕ್ಷಿಕೆರೆಯ ನಿವಾಸಿ ಡೆಸ್ಮಂಡ್ ಡಿಸೋಜಾ, ಈಗ ಮಂಗಳೂರಿನ ಮಣ್ಣಿನಲ್ಲಿ ಕಾಲಿಡುತ್ತಿರೋದಕ್ಕೆ ಬಹಳ ಖುಷಿಯಾಗುತ್ತಿದೆ. ಇಲ್ಲಿ ನಮಗೆ ಯಾರ ಭಯವೂ ಇಲ್ಲ. ಮಂಗಳೂರು ತಲುಪುವರೆಗೂ ಒಂದು ರೀತಿ ಭಯ ಇತ್ತು. ಆದರೆ ಈಗ ಭಾರತದಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಇರೋದರಿಂದ ಯಾವುದೇ ಭಯವೂ ಇಲ್ಲ. ಮಂಗಳೂರಿನಲ್ಲಿ ಇರುತ್ತಿರುವ ಬಗ್ಗೆ ಬಹಳ ಹೆಮ್ಮೆಯಾಗುತ್ತಿದೆ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Explained: ಕ್ರಿಮಿನಲ್ ಕೇಸ್ ಹೊಂದಿರುವ ವ್ಯಕ್ತಿ ಸರ್ಕಾರಿ ಕೆಲಸ ಪಡೆಯಬಹುದೇ? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ?
ಡೆಸ್ಮಂಡ್ ಡಿಸೋಜಾ ಅಮೇರಿಕಾ ಮಿಲಿಟರಿ ಯ ದಾಸ್ತಾನು ಕಛೇರಿಯ ಆಡಳಿತಾತ್ಮಕ ವಿಭಾಗದಲ್ಲಿ 2011 ರಿಂದ ಕೆಲಸ ಮಾಡುತ್ತಿದ್ದಾರೆ. ಈ ವೇರ್ ಹೌಸ್ ಪ್ರಮುಖವಾಗಿದ್ದು, ಸೇನಾ ನೆಲೆಗಳಿಗೆ ಆಹಾರ ಅಥವಾ ಬೇರೆ ವಸ್ತುಗಳು ಹೋಗುವ ಮುನ್ನ ಈ ವೇರ್ ಹೌಸ್ ನಲ್ಲೇ ತಪಾಸಣೆಯಾಗುತ್ತದೆ. ಯಾಕೆಂದರೆ ಅಮೆರಿಕಾ ಪಡೆಗಳ ವಿರುದ್ಧ ತಾಲಿಬಾನಿಗಳು ದ್ವೇಷ ಸಾರುವ ಹಿನ್ನಲೆಯಲ್ಲಿ, ಆಹಾರ ವಸ್ತುಗಳಿಗೆ ವಿಷ ಹಾಕುವ ಸಾಧ್ಯತೆಗಳೂ ಇರೋದರಿಂದ ಅಮೇರಿಕಾ ಮಿಲಿಟರಿ ವಿಭಾಗದಲ್ಲಿ ವೇರ್ ಹೌಸ್ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಇನ್ನು ಅಫ್ಘಾನಿಸ್ತಾನದಿಂದ ಮಂಗಳೂರು ತಲುಪಿದರ ಬಗ್ಗೆ ಮಾತನಾಡಿದ ಡೆಸ್ಮಂಡ್ ಡಿಸೋಜಾ, ಅಗಸ್ಟ್ 17 ನೇ ತಾರೀಖು ಅಮೇರಿಕಾ ಸೇನೆಯ ವಿಮಾನ ಕಾಬೂಲ್ ನಿಂದ ನಮ್ಮನ್ನು ಏರ್ ಲಿಫ್ಟ್ ಮಾಡಿತ್ತು. ಕಾಬೂಲ್ ನಿಂದ ಕತಾರ್ ಗೆ ಅಮೇರಿಕಾ ವಿಮಾನದಲ್ಲಿ ಸುರಕ್ಷಿತ ವಾಗಿ ಬಿಡಲಾಯಿತು. ಕತಾರ್ ನಲ್ಲಿ ಭಾರತೀಯ ರಾಯಭಾರಿ ಕಚೇರಿ ತುಂಬಾ ಸಹಾಯ ಮಾಡಿದೆ. ಭಾರತ ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಶೀಘ್ರವಾಗಿ ತಯಾರು ಮಾಡಿಕೊಟ್ಟಿದೆ. ಹೀಗಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಾಧ್ಯವಾಯಿತು ಅಂತಾ ಕಿನ್ನಿಗೋಳಿಯ ಪಕ್ಷಿಕೆರೆ ನಿವಾಸಿ ಡೆಸ್ಮಂಡ್ ಡಿಸೋಜಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೇರಿಕಾದ ನ್ಯಾಟೋ ಪಡೆ ಫೈರಿಂಗ್ ಮಾಡಿರುವ ದೃಶ್ಯವನ್ನು ಮಂಗಳೂರಿನ ಬಜಪೆ ನಿವಾಸಿ ದಿನೇಶ್ ರೈ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆಗಸ್ಟ್ 15ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ಅಫ್ಘಾನ್ ನಿವಾಸಿಗಳು, ತಮ್ಮನ್ನೂ ಕರೆದುಕೊಂಡು ಹೋಗುವಂತೆ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದರು. ಅಫ್ಘಾನ್ ನಿವಾಸಿಗಳನ್ನು ಚದುರಿಸಲು ನ್ಯಾಟೋ ಪಡೆ ಫೈರಿಂಗ್ ಮಾಡಿದ್ದು, ನ್ಯಾಟೋ ಪಡೆಯ ಫೈರಿಂಗ್ ನ್ನು ದಿನೇಶ್ ರೈ ಕಣ್ಣಾರೆ ಕಂಡಿದ್ದರು.
ಇದನ್ನೂ ಓದಿ:Anand Singh: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್; ಅಧಿಕಾರ ಸ್ವೀಕಾರ
ಕಾಬೂಲ್‌ನಲ್ಲಿ ಅಮೇರಿಕಾ ಸೇನಾ ನೆಲೆಯಲ್ಲಿ ಉದ್ಯೋಗದಲ್ಲಿ ದಿನೇಶ್, ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ ಮೇಲೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ನಾನು ಕಳೆದ ಹತ್ತು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಪಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ಹೊರಗಿನ ಜನರ ಯಾವುದೇ ಸಂಪರ್ಕ ಇರೋದಿಲ್ಲ. ನಾವಿದ್ದ ಜಾಗಕ್ಕೆ ನ್ಯಾಟೋ ಸಂಪೂರ್ಣ ಭಧ್ರತೆ ನೀಡಿದೆ. ಕಳೆದ ಕೆಲ ದಿನಗಳಿಂದ ಕಾಬೂಲ್ ಸೇರಿದಂತೆ ಪೂರ್ತಿ ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶ ವಾಗ್ತಿರೋದು ನೋಡಿ ಆತಂಕ ಉಂಟಾಗಿತ್ತು.. ಆದರೆ ನಮ್ಮನೆಲೆಗೆ ಅವರು ಬರೋಕೆ ಸಾಧ್ಯವಾಗಿಲ್ಲ. ನಮ್ಮ ನೆಲೆ ಯ ಹತ್ತಿರದಲ್ಲೇ ಕಾಬೂಲ್ ವಿಮಾನ ನಿಲ್ದಾಣ ಇರೋದರಿಂದ ಸ್ಥಳೀಯರು ಅಮೇರಿಕಾ ವಿಮಾನಕ್ಕೆ ಮುತ್ತಿಗೆ ಹಾಕಿದ್ದರು. ಈ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ಹೊರಭಾಗದಲ್ಲಿ ಗುಂಡಿನ ಮೊರೆತ ಆಗುತಿತ್ತು..ನಾವು ಕಾಬೂಲ್ ನಲ್ಲಿ ಇದ್ದಿದ್ದರಿಂದ ಮನೆಯವರಿಗೂ ಭಯವಾಗಿತ್ತು. ಸದ್ಯ ನಾವು ಸೇಫ್ ಆಗಿ ಮರಳಿ ಬಂದಿದ್ದೇವೆ ಅನ್ನೋದೊಂದೇ ಖುಷಿ ಅಂತಾ ದಿನೇಶ್ ರೈ ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ