Kannada Rajyotsava - ತೆಲಂಗಾಣದ ನಾರಾಯಣಪೇಟೆಯ ಗಡಿನಾಡ ಕನ್ನಡಿಗರ ಗೋಳು ಕೇಳುವವರಿಲ್ಲ

ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಕೃಷ್ಣಾ ತಾಲೂಕಿನ 13 ಗ್ರಾಮಗಳು ಕನ್ನಡಿಗರಿಗೆ ಸೇರಿವೆ. ಇಲ್ಲಿ 17 ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದು ಸಾವಿರದಷ್ಟು ಮಕ್ಕಳು ಕಲಿಕೆ ಮಾಡುತ್ತಿದ್ಧಾರೆ. ಕರ್ನಾಟಕ ಸರ್ಕಾರದ ಅಸಡ್ಡೆತನದಿಂದಾಗಿ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿವೆ.

news18-kannada
Updated:October 31, 2020, 7:36 AM IST
Kannada Rajyotsava - ತೆಲಂಗಾಣದ ನಾರಾಯಣಪೇಟೆಯ ಗಡಿನಾಡ ಕನ್ನಡಿಗರ ಗೋಳು ಕೇಳುವವರಿಲ್ಲ
ತೆಲಂಗಾಣದ ನಾರಾಯಣಪೇಟೆಯ ಕೃಷ್ಣಾ ತಾಲೂಕಿನಲ್ಲಿರುವ ಕನ್ನಡ ಶಾಲೆ ಮತ್ತು ಕನ್ನಡಿಗರು
  • Share this:
ರಾಯಚೂರು: ನವಂಬರ್ ಒಂದರಂದು ರಾಜ್ಯದಲ್ಲಿ ಕನ್ನಡ ಪ್ರೇಮ ಮೊಳಗುತ್ತಿದೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಲಿಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈ ಮಧ್ಯೆ ಪಕ್ಕದ ರಾಜ್ಯದಲ್ಲಿರುವ ಗಡಿನಾಡ ಕನ್ನಡಿಗರು, ನಾವು ಕನ್ನಡ ಕಲಿಯುತ್ತೇವೆ ನಮಗೆ ಒಂದಿಷ್ಟು ಸೌಲಭ್ಯ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಮೆಟ್ರಿಕ್ ನಂತರ ಕರ್ನಾಟಕದಲ್ಲಿ ಈ ಹಳ್ಳಿಗಳ ವಿದ್ಯಾರ್ಥಿಗಳು ಆನ್​ಲೈನ್ ಅರ್ಜಿ ಸಲ್ಲಿಸಲು ಮುಂದಾದರೆ ಸರಕಾರ ವೆಬ್​ಸೈಟ್​ನಲ್ಲಿ ಈ ಹಳ್ಳಿಗಳ ಹೆಸರು ಇಲ್ಲ. ರಾಜ್ಯ ಸರಕಾರ ತಂತ್ರಾಂಶದಲ್ಲಿ ಈ ಹಳ್ಳಿಗಳನ್ನು ಸೇರಿಸಬೇಕು. ಹಿಂದೆ ಯಡಿಯೂರಪ್ಪ ಸರಕಾರ ಹೊರಡಿಸಿದ್ದ ಹೊರನಾಡು ಹಾಗು ಗಡಿನಾಡು ಕನ್ನಡಿಗರಿಗೆ ಮೀಸಲಾತಿ ಗೆಜೆಟ್ ನೋಟಿಫಿಕೇಷನ್ ಜಾರಿಯಾಗಿಲ್ಲ. ಇದು ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರವ ಕೃಷ್ಣಾ ತಾಲೂಕಿನ ಹಳ್ಳಿಗಳ ಕನ್ನಡಿಗರ ಸಮಸ್ಯೆ.

ಈಗಿನ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣಾ ತಾಲೂಕಿನ 13 ಹಳ್ಳಿಗಳಾದ ಗುರ್ಜಾಳ, ಕೃಷ್ಣಾ, ಕುಸುಮೂರ್ತಿ, ಇನಾಪುರ, ಅಡವಿಖಾನಾಪುರ, ಎಸ್​ಕೆಎಲ್ ಪಾಳ್ಯ, ಹಿಂದುಪುರ, ಗುಡೇಬೆಲ್ಲೂರು, ಚೆಂಗುಂಟಾ, ತಂಗಡಗಿ, ಆಲಂಪಲ್ಲಿ, ಕುಣ್ಸಿ, ಕೊತ್ತಪಲ್ಲಿ ಗ್ರಾಮಗಳು ಅಪ್ಪಟ ಕನ್ನಡಿಗರ ಪ್ರದೇಶಗಳಾಗಿವೆ. ಯಾದಗಿರಿ ಹಾಗು ರಾಯಚೂರು ಜಿಲ್ಲೆಯ ಮಧ್ಯೆ ಇರುವ ಈ ಗ್ರಾಮಗಳಲ್ಲಿ ಜನರ ಭಾಷೆ ಕನ್ನಡ. ಇಲ್ಲಿಯ ಒಟ್ಟು 17,340 ಜನರು ಕನ್ನಡ ಭಾಷಿಕರು. ಅವರಿಗೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಇವರ ಮಕ್ಕಳು ಓದುವುದು ಕನ್ನಡ. ಇಲ್ಲಿ ಒಟ್ಟು 924 ಮಕ್ಕಳು 1 ರಿಂದ 10 ನೆಯ ತರಗತಿಯವರೆಗೆ ಓದುತ್ತಿದ್ದಾರೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಗ್ರಾಮಸ್ಥರು

ಆದರೆ ಇಲ್ಲಿ ಮೆಟ್ರಿಕ್​ವರೆಗೂ ಓದಿದ ನಂತರ ಅವರಿಗೆ ಮುಂದಿನ ಶಿಕ್ಷಣವು ಕೂಡದಲ್ಲಿ ಸಿಗುತ್ತಿಲ್ಲ. ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕದಲ್ಲಿ ಮೀಸಲಾತಿ ನೀಡುತ್ತಿಲ್ಲ. ಇನ್ನು, ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದರೂ ಅವರಿಗೆ ಕೃಷ್ಣಾದಿಂದ ರಾಯಚೂರುವರೆಗೂ ಬಂದು ಹೋಗಲು ಬಸ್ ಪಾಸ್ ನೀಡುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಂದಾಗಿ ಇಲ್ಲಿಯ ಕನ್ನಡಿಗರು ಕನ್ನಡ ಶಾಲೆಗಳಿಂದ ದೂರವಾಗುತ್ತಿದ್ದಾರೆ. ಕರ್ನಾಟಕ ಸರಕಾರದ ಅಸಡ್ಡೆಯಿಂದಾಗಿ ಈಗಾಗಲೇ ಮೂರು ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ.

2011 ರಲ್ಲಿ ಕೃಷ್ಣಾ ಭಾಗದ ಜನರ ಹೋರಾಟಕ್ಕೆ ಮಣಿದ ಸರಕಾರ ಇವರಿಗೆ ಮೀಸಲಾತಿ ನೀಡಲು ಪ್ರಯತ್ನಿಸಿದೆ. ದೇಶದ ಯಾವುದೇ ಭಾಗದಲ್ಲಿ ಕನ್ನಡ ಓದಿದ್ದರೂ ಅವರಿಗೆ ಮೀಸಲಾತಿ ನೀಡಬೇಕೆಂದು ಸರಕಾರ ಗೆಜೆಟ್ ಹೊರಡಿಸಿದೆ. ಆದರೆ ಇದು ಜಾರಿಯಾಗಿಲ್ಲ. ಇಲ್ಲಿ ವೃತ್ತಿಪರ ಕೋರ್ಸುಗಳಿಗೆ ಸ್ಥಳೀಯರಾಗಿರಬೇಕು. ಹಾಸ್ಟೆಲ್​ನಲ್ಲಿದ್ದು ಓದಬೇಕೆಂದರೆ ಅವರಿಗೆ ಜಾತಿ ಹಾಗು ಆದಾಯ ಪ್ರಮಾಣ ಪತ್ರವನ್ನು ರಾಯಚೂರು ಜಿಲ್ಲೆಯಿಂದ ನೀಡಬೇಕು. ಆದರೆ ಇವರು ತೆಲಂಗಾಣದವರು ಎಂಬ ಕಾರಣಕ್ಕೆ ಜಾತಿ ಆದಾಯ ಪ್ರಮಾಣ ಪತ್ರ ನೀಡುತ್ತಿಲ್ಲ. ಶಕ್ತಿನಗರದಿಂದ ರಾಯಚೂರುವರೆಗೂ ಬಸ್ ಪಾಸ್ ನೀಡುತ್ತಾರೆ. ಆದರೆ ಕೃಷ್ಣಾದಿಂದ ನೀಡುತ್ತಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಹಲವು ಬಾರಿ ಹೋರಾಟ ಮಾಡಿದ ಕನ್ನಡಿಗರು ಈಗ ನಿರಾಸೆಗೊಂಡಿದ್ದಾರೆ. ಈ ಮಧ್ಯೆ ನಾಳೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಣ ಸವದಿಯವರಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮನವಿ ನೀಡಲಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by: Vijayasarthy SN
First published: October 31, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading