ಚಾಮರಾಜನಗರ (ಜೂ.8) ಮಲೆ ಮಹದೇಶ್ವರ ದರ್ಶನಕ್ಕೆ ಸಾವಿರ ಸಾವಿರ ಭಕ್ತರು, ಬಂಡೀಪುರದ ಸಫಾರಿಗೆ ಬೆರಳಣಿಕೆಯಷ್ಟು ಪ್ರವಾಸಿಗರು. ಇದು ಲಾಕ್ ಡೌನ್ ಸಡಿಲಿಕೆ ನಂತರ ಮೊದಲ ದಿನ ಮಲೆಮಹದೇಶ್ವರ ಬೆಟ್ಟ ಹಾಗು ಬಂಡೀಪುರದಲ್ಲಿ ಕಂಡು ಬಂದ ಚಿತ್ರಣ.
ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಬರೋಬ್ಬರಿ 80 ದಿನಗಳ ನಂತರ ದೇಗುಲ ತೆರೆದ ಮೊದಲ ದಿನವೇ ರಾಜ್ಯದ ವಿವಿದೆಡೆಯಿಂದ ನಾಲ್ಕು ಸಾವಿರಕ್ಕು ಹೆಚ್ಚು ಮಂದಿ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 7 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಒಂದು ಬಾರಿಗೆ 180 ಜನರಂತೆ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದ ಭಕ್ತರು ದೇಗುಲದಲ್ಲಿ ಉಘೇ ಉಘೇ ಮಾದಪ್ಪ ಎಂದು ಜಯಘೋಷ ಮೊಳಗಿಸಿದರು.
ವ್ಯವಸ್ಥಿತವಾಗಿ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸ್ಯಾನಿಟೈಸರ್ ನೀಡಿ ನಂತರವಷ್ಟೇ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ವಿಶೇಷ ದಾಸೋಹ ಭವನದಲ್ಲಿ ಭಕ್ತರಿಗೆ ಪ್ಯಾಕೆಟ್ ರೂಪದಲ್ಲಿ ತಿಂಡಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ 36 ಬ್ಲಾಕ್ ಸ್ಪಾಟ್ಸ್; ಕಳೆದ ವರ್ಷ1,423 ಅಪಘಾತ, 96 ಸಾವು
ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ. ಸುಮಾರು 8,000 ಲಾಡು ಪ್ರಸಾದ ಖರ್ಚಾಗಿದೆ. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನ್ಯೂಸ್ 18 ಗೆ ತಿಳಿಸಿದರು.
ಬಂಡೀಪುರ ಸಫಾರಿಗೆ ಮೊದಲ ದಿನ ನೀರಸ ಪ್ರತಿಕ್ರಿಯೆ:
ಇನ್ನೊಂದೆಡೆ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲೂ ಇಂದಿನಿಂದ ಸಫಾರಿ ಆರಂಭಿಸಲಾಯ್ತು. 85 ದಿನಗಳ ನಂತರ ಮೊದಲ ಬಾರಿಗೆ ಆರಂಭವಾದ ಸಫಾರಿಗೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗೆ 6.30 ರಿಂದ 8.30 ರವರೆಗಿನ ಸಫಾರಿಗೆ ಕೇವಲ 11 ಮಂದಿ ಪ್ರವಾಸಿಗರು ಬಂದಿದ್ದರು. ಸಂಜೆ 3 ರಿಂದ 5.30 ರವರೆಗಿನ ಸಫಾರಿಗೆ 36 ಮಂದಿ ಪ್ರವಾಸಿಗರು ಆಗಮಿಸಿದ್ದರು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ನ್ಯೂಸ್ 18 ಗೆ ಮಾಹಿತಿ ನೀಡಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಯೊಬ್ಬ ಪ್ರವಾಸಿಗರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯ್ತು. ಅಲ್ಲದೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಸಫಾರಿ ಬಸ್ ಹಾಗು ಜಿಪ್ಸಿ ವಾಹನಗಳಲ್ಲಿ ಶೇಕಡಾ 50ರಷ್ಟು ಸೀಟ್ ಗಳನ್ನು ಮಾತ್ರ ಭರ್ತಿ ಮಾಡಿ ಸಫಾರಿಗೆ ಕರೆದೊಯ್ಯಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ