ಮಂಗಳೂರು : ಇಬ್ಬರು ಶಾಸಕರನ್ನು ನೀಡಿದರೂ ಇದು ಈಗಲೂ ಕುಗ್ರಾಮ - ಕಲ್ಲಡ್ಕದ ಕಥೆ ಕೇಳುವವರೇ ಇಲ್ಲ..!

ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಲ್ಲಡ್ಕ ಕಿರುಹೊಳೆಯಲ್ಲಿ ಶಾಲಾ ಮಕ್ಕಳು ಹಾಗೂ ದಿನನಿತ್ಯದ ಅಗತ್ಯತೆಯಲ್ಲಿ ಹೋಗಬೇಕಾದ ಜನತೆಯ ಪರದಾಟ ಹೇಳತೀರದಂತಾಗಿದೆ.

news18-kannada
Updated:September 9, 2020, 7:21 AM IST
ಮಂಗಳೂರು : ಇಬ್ಬರು ಶಾಸಕರನ್ನು ನೀಡಿದರೂ ಇದು ಈಗಲೂ ಕುಗ್ರಾಮ - ಕಲ್ಲಡ್ಕದ ಕಥೆ ಕೇಳುವವರೇ ಇಲ್ಲ..!
ಸೇತುವೆ ಇಲ್ಲದೇ ಹಳ್ಳವನ್ನು ಡಾಟುತ್ತಿರುವ ಜನರು
  • Share this:
ಮಂಗಳೂರು(ಸೆಪ್ಟೆಂಬರ್​. 09): ಅಗತ್ಯವಿಲ್ಲದಿದ್ದರೂ ಅನಗತ್ಯ ಖರ್ಚು ಮಾಡಿ ಸರಕಾರದ ಹಣ ಕೆಲವು ಕಡೆಗಳಲ್ಲಿ ದುಂದುವೆಚ್ಚ ಸಾಮಾನ್ಯವಾಗಿದೆ. ಆದರೆ ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆ  ಮಾಡುವುದಿಲ್ಲ ಎನ್ನುವ ಶಪಥವನ್ನು ಜನಪ್ರತಿನಿಧಿಗಳು ಮಾಡಿಕೊಂಡಿದ್ದಾರೋ ಎನ್ನುವ ಸಂಶಯ ದಕ್ಷಿಣಕನ್ನಡ ಜಿಲ್ಲೆಯ ಕುಗ್ರಾಮವೊಂದರ ಸಮಸ್ಯೆಯನ್ನು ನೋಡಿದಾಗ ಮೂಡುತ್ತದೆ. ಹೇಳಿಕೊಳ್ಳಲು ಈ ಗ್ರಾಮ ಇಬ್ಬರು ಶಾಸಕರನ್ನು ಜನಸೇವೆಗಾಗಿ ನೀಡಿದ್ದರೂ, ಈ ಗ್ರಾಮದ ಜನರ ಸಣ್ಣ ಬೇಡಿಕೆಗಾಗಿ ಕಳೆದ 4 ದಶಕಗಳಿಂದ ಕಾಯಬೇಕಾದ ಸ್ಥಿತಿಯಲ್ಲಿದ್ದಾರೆ. ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಕಲ್ಲಡ್ಕ ಎನ್ನುವ ಕುಗ್ರಾಮ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಪೆರಿಯಡ್ಕದಿಂದ ಕೊಯಿಲಾ ಸಂಪರ್ಕಿಸುವ ಮಧ್ಯೆ ಸಿಗುವ ಈ ಗ್ರಾಮದ ಜನ ವರ್ಷದ ಆರು ತಿಂಗಳು ತಮ್ಮ ಅಗತ್ಯಗಳಿಗಾಗಿ ಪಡುವ ಸಂಕಷ್ಟಗಳಿಗೆ ಎಲ್ಲೆಯಿಲ್ಲ.

ಈ ಗ್ರಾಮದ ಜನರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಹಳ್ಳವೊಂದು ಹರಿಯುತ್ತಿದ್ದು, ಈ ಹಳ್ಳ ಮಳೆಗಾಲ ಪೂರ್ತಿ ತುಂಬಿ ಹರಿಯುತ್ತದೆ. ಇದರಿಂದಾಗಿ ರಸ್ತೆ ಸಂಪೂರ್ಣ ನೀರಿನಿಂದ ಮುಳುಗಿಹೋಗುತ್ತಿದ್ದು, ತಮ್ಮ ಅಗತ್ಯಗಳಿಗಾಗಿ ಈ ಭಾಗದ ಜನ 5 ರಿಂದ 10 ಕಿಲೋಮೀಟರ್ ಸುತ್ತು ಬಳಸಬೇಕಾದ ಅನಿವಾರ್ಯತೆಯಿದೆ. ಈ ಕಾರಣದಿಂದಾಗಿ ಕಲ್ಲಡ್ಕ ಎಂಬಲ್ಲಿ ಕಿರು ಸೇತುವೆಯನ್ನು ನಿರ್ಮಿಸಿಕೊಡುವಂತೆ ಈ ಭಾಗದ ಜನ ಕಳೆದ 40 ವರ್ಷಗಳಿಂದ ಸರಕಾರ ಹಾಗೂ ಜನಪ್ರತಿನಿಧಿಗಳ ಹಿಂದೆ ಓಡಾಡುತ್ತಿದ್ದಾರೆ.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಹಾಲಿ ಶಾಸಕ ಸಂಜೀವ ಮಠಂದೂರರ ತವರು ಗ್ರಾಮವಾಗಿದ್ದರೂ ಇಲ್ಲಿನ ಜನರ ಬೇಡಿಕೆಗೆ ಈ ಶಾಸಕರು ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ದಲಿತ ಕಾಲೋನಿ ಸೇರಿದಂತೆ ಸುಮಾರು 150 ಮನೆಗಳು ಈ ರಸ್ತೆಯನ್ನೇ ಅವಲಂಭಿಸಿದ್ದು, ಸೇತುವೆ ನಿರ್ಮಿಸದೇ ಹೋದಲ್ಲಿ ಈ ಬಾರಿಯ ಪಂಚಾಯತ್ ಚುನಾವಣೆಗ ಬಹಿಷ್ಕಾರ ಹಾಕಲು ಇಲ್ಲಿನ ಜನ ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಸ್ಥಳೀಯ‌ ನಿವಾಸಿ ಚೆನ್ನಪ್ಪ‌ ಗೌಡ.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವಿನಯ್ ಕುಮಾರ್ ಸೊರಕೆಯಿಂದ ಹಿಡಿದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶಕುಂತಲಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಹಾಗೂ ಇದೀಗ ಶಾಸಕರಾಗಿರುವ ಸಂಜೀವ ಮಠಂದೂರು ಅವರಿಗೆ ನಿರಂತರವಾಗಿ ಮನವಿಗಳನ್ನು ಸಲ್ಲಿಸುತ್ತಲೇ ಬರಲಾಗುತ್ತಿದೆ. ಅದರಲ್ಲೂ ಶಕುಂತಲಾ ಶೆಟ್ಟಿ ಮತ್ತು ಸಂಜೀವ ಮಠಂದೂರು ಇದೇ ಗ್ರಾಮಕ್ಕೇ ಸೇರಿದವರಾಗಿದ್ದು, ಇಬ್ಬರ ಬಳಿಗೂ ವಿಶೇಷ ರೀತಿಯಲ್ಲಿ ಮನವಿ ನೀಡಲು ತೆರಳಲಾಗಿತ್ತು. ಶಕುಂತಲಾ ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಿಸುವ ಭರವಸೆಯನ್ನು ನೀಡಿದ್ದರಾದರೂ, ಹತ್ತು ವರ್ಷ ಶಾಸಕರಾಗಿದ್ದರೂ ಸೇತುವೆಯ ಭರವಸೆ ಭರವಸೆಯಾಗಿಯೇ ಉಳಿದಿದೆ. ಅದೇ ರೀತಿ ಸಂಜೀವ ಮಠಂದೂರಿಗೆ ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದು, ಸೇತುವೆ ನಿರ್ಮಿಸುವ ಭರವಸೆಯನ್ನು ಮಾತ್ರ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ದಲಿತ ವಿರೋಧಿ ಅಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ; ಛಲವಾದಿ ನಾರಾಯಣಸ್ವಾಮಿ

ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಲ್ಲಡ್ಕ ಕಿರುಹೊಳೆಯಲ್ಲಿ ಶಾಲಾ ಮಕ್ಕಳು ಹಾಗೂ ದಿನನಿತ್ಯದ ಅಗತ್ಯತೆಯಲ್ಲಿ ಹೋಗಬೇಕಾದ ಜನತೆಯ ಪರದಾಟ ಹೇಳತೀರದಂತಾಗಿದೆ. ಈ ಭಾಗದಲ್ಲಿ ಹಲವಾರು ಮಂದಿ ದನಗಳನ್ನು ಸಾಕುತ್ತಿದ್ದು, ಪೆರಿಯಡ್ಕ ಹಾಲು ಸೊಸೈಟಿಗೆ ಬರಬೇಕಾದರೆ ಸುಮಾರು ‌ 6 ಕಿಮೀ ದೂರ ಸುತ್ತಾಟ ಮಾಡಬೇಕಾಗುತ್ತದೆ. ಈ ಅಗರಿ ಭಾಗದಲ್ಲಿ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಒಯ್ಯಲು ಸಮಸ್ಯೆಯಾಗುತ್ತಿದೆ. ಇಂತಹ ಅವ್ಯವಸ್ಥೆ ತುಂಬಿರುವ ಈ ಗ್ರಾಮೀಣ ಭಾಗದ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮುಂದಾಗದಿರುವುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಬೆನ್ನಿಗೆ ಬಿದ್ದು, ಸೇತುವೆ ಮಾಡಿಕೊಡಿ ಎಂದು ಕೂಗಿದ ಇಲ್ಲಿನ ಜನತೆ ಇದೀಗ ನಿರಾಶರಾಗಿದ್ದಾರೆ. ಹಾಗಾಗಿ ಮುಂದೆ ಬರಲಿರುವ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಲು ಮುಂದಾಗಿದ್ದಾರೆ.
Published by: G Hareeshkumar
First published: September 9, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading