ಕಲಬುರ್ಗಿ (ನ.28): ರಾಜ್ಯ ಸರ್ಕಾರ ಈಗಾಗಲೇ ಕಬ್ಬಿನ ಎಫ್.ಆರ್.ಪಿ. ದರ ನಿಗದಿಗೊಳಿಸಿದೆ. ಇದರ ಬೆನ್ನ ಹಿಂದೆಯೇ ಜಿಲ್ಲೆಯಲ್ಲಿ ಡಿಸಿ ವಿ.ವಿ.ಜ್ಯೋತ್ಸ್ನಾ ನೇತೃತ್ವದಲ್ಲಿ ಕಬ್ಬು ಬೆಳಗಾರರ ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆಯನ್ನೂ ನಡೆಸಲಾಗಿದೆ. ಆದರೆ, ಇದುವರೆಗೂ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ಅಂತಿಮಗೊಳಿಸಿಲ್ಲ. ಕಾರ್ಖಾನೆಗಳು ಕಬ್ಬು ನುರಿಸೋದನ್ನು ಆರಂಭಿಸಿ ತಿಂಗಳಾಗುತ್ತಾ ಬಂದರೂ ಕಬ್ಬಿನ ದರ ನಿಗದಿ ಮಾಡದೇ ಇರೋದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಗೆ ನಾಲ್ಕು ಸಕ್ಕರೆ ಕಾರ್ಖಾನೆಗಳು ಬರುತ್ತವೆ. ಆಳಂದ ತಾಲೂಕಿನ ಭೂಸನೂರಿನ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ, ಅಫಜಲಪುರ ತಾಲೂಕಿನ ಹವಳಗಾದ ರೇಣುಕಾ ಸಕ್ಕರೆ ಕಾರ್ಖಾನೆ, ಜೇವರ್ಗಿ ತಾಲೂಕಿನ ಮಳ್ಳಿಯ ಉಗಾರ್ಸ್ ಸಕ್ಕರೆ ಕಾರ್ಖಾನೆ ಹಾಗೂ ಯಾದಗಿರಿಯ ಶಹಾಪುರ ತಾಲೂಕಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡಿವೆ.
ಜಿಲ್ಲೆಯ ರೈತರು ಈ ನಾಲ್ಕೂ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆ ಆರಂಭಗೊಂಡು ಒಂದು ತಿಂಗಳಾಗುತ್ತಾ ಬಂದರೂ ಕಬ್ಬಿನ ದರ ನಿಗದಿ ಮಾಡದೇ ಇರುವುದಕ್ಕೆ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡದೇ ಇರುವ ಎಚ್ಚರಿಕೆನ್ನೂ ನೀಡಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಜಗದೀಶ್ ಪಾಟೀಲ, ಜಿಲ್ಲೆಯ ವ್ಯಾಪ್ತಿಯಲ್ಲಿ ಬರೋ ನಾಲ್ಕೂ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ನಿಗದಿ ಮಾಡಲು ಮೀನಾ-ಮೇಷ ಎಣಿಸುತ್ತಿವೆ ಎಂದಿದ್ದಾರೆ.
ಕಳೆದ ಮೂರುದಿನಗಳ ಹಿಂದೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಕರೆದ ಸಭೆಗೆ ಮೂರು ಕಾರ್ಖಾನೆ ಪ್ರತಿನಿಧಿಗಳು ಮಾತ್ರ ಭಾಗಿಯಾಗಿದ್ದರು. ಯಾದಗಿರಿಯ ಕೋರ್ ಗ್ರೀನ್ ಕಾರ್ಖಾಯವರು ಗೈರು ಹಾಜರಾಗಿದ್ದರು. ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯ ವಿಫಲವಾಗಿತ್ತು. ಯಾವುದೇ ದರ ನಿಗದಿ ಮಾಡದೆ ಕಾರ್ಖಾನೆಗಳು ಉದ್ಧಟತನ ಮಾಡುತ್ತಿವೆ. ಆದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದನ್ನು ಓದಿ: ಪಾಕಿಸ್ತಾನದ ವರನಿಗೆ ಉಡುಗೊರೆಯಾಗಿ ಸಿಕ್ತು ಎಕೆ47 ಬಂದೂಕು; ಶಾಕ್ ಆದ ವಧು
2500 ರೂಪಾಯಿ ದರ ನಿಗದಿ ಮಾಡಿ, ಹೊಲದಿಂದಲೇ ಕಬ್ಬು ಖರೀದಿಸಬೇಕೆಂಬು ನಮ್ಮ ಬೇಡಿಕೆಯಾಗಿದೆ. ಕೂಡಲೇ ಕಾರ್ಖಾನೆಗಳು ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಕಬ್ಬು ಪೂರೈಕೆ ಮಾಡದಿರವಂತೆ ರೈತರಿಗೆ ಹೇಳುತ್ತೇವೆ. ಕಾರ್ಖಾನೆಗಳಿಗೆ ಕಬ್ಬು ಪೂರೈಕೆಯನ್ನೇ ನಿಲ್ಲಿಸುತ್ತೇವೆ. ಆಗ ಕಾರ್ಖಾನೆಗಳೇ ಸಂಕಷ್ಟ ಎದುರಿಸುವಂತಾಗುತ್ತದೆ ಎಂದು ಜಗದೀಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಕಬ್ಬು ದರ ನಿಗದಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ದತ್ತಾತ್ರೇಯ ಕುಲಕರ್ಣಿ, ಕಾರ್ಖಾನೆಗಳು ಪ್ರತಿ ವರ್ಷವೂ ಇದೇ ರೀತಿ ಉದ್ಧಟತನ ತೋರುತ್ತಿವೆ. ಸಕ್ಕರೆಗಿಂತ ಹೆಚ್ಚು ಎಥೆನಾಲ್ ಉತ್ಪಾದಿಸುತ್ತವೆ. ಪ್ರತಿ ಕ್ವಿಂಟಲ್ ಎಥೆನಾಲ್ ಗೆ 5638 ರೂಪಾಯಿ ದರ ಸಿಗುತ್ತದೆ. ಆದರೆ ರೈತರಿಗೆ 2500 ರೂಪಾಯಿ ದರ ನೀಡಲು ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಕಾರ್ಖಾನೆಗಳ ವರ್ತನೆ ಹೀಗೆಯೇ ಮುಂದುವರೆದರೆ, ರೈತರೇ ಎಥೆನಾಲ್ ತಯಾರಿಸಿ ಮಾರೋಕೆ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ