ಒಲ್ಲದ ಮನಸ್ಸಿನಿಂದಲೇ ಕೆಕೆಆರ್​ಡಿಬಿ ಕಾರ್ಯಭಾರ - ಸಚಿವ ಸ್ಥಾನದ ಆಸೆ ಬಿಟ್ಟಿಲ್ಲವೆಂದ ಶಾಸಕ ರೇವೂರ

ಕೊಟ್ಟ ಅವಕಾಶ ಬಳಸಿಕೊಂಡು ಕೆಲಸ ಮಾಡುತ್ತೇನೆ. ಚೆನ್ನಾಗಿ ಕೆಲಸ ಮಾಡಿ ಸಚಿವ ಸ್ಥಾನಕ್ಕೂ ಪ್ರಯತ್ನಿಸುತ್ತೇನೆ. ಕೊಟ್ಟ ಜವಾಬ್ದಾರಿ ಬಗ್ಗೆ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಟ್ಟೇ ಕೊಡ್ತಾರೆ ಎನ್ನುವ ನಂಬಿಕೆ ಇದೆ

ಶಾಸಕ ದತ್ತಾತ್ರೇಯ ಪಾಟೀಲ ರೇವೂರ್

ಶಾಸಕ ದತ್ತಾತ್ರೇಯ ಪಾಟೀಲ ರೇವೂರ್

  • Share this:
ಕಲಬುರ್ಗಿ(ಆಗಸ್ಟ್​. 04): ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹಲವು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಗಿಫ್ಟ್ ನೀಡಿದ್ದರು. ಆದರೆ ಅದನ್ನು ಕೆಲವರು ತಿರಸ್ಕರಿಸಿದ್ದರು. ಸ್ವೀಕರಿಸಬೇಕೋ, ತಿರಸ್ಕರಿಸಬೇಕೋ ಎನ್ನುವ ಗೊಂದಲದಲ್ಲಿದ್ದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಒಲ್ಲದ ಮನಸ್ಸಿನಿಂದಲೇ ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಚಿವ ಸ್ಥಾನದ ಆಸಯೆನ್ನು ಕೈಬಿಟ್ಟಿಲ್ಲವೆಂದೂ ಹೇಳಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಒಲ್ಲದ ಮನಸ್ಸಿನಿಂದಲೇ ಇಂದು ನೂತನ ಅಧ್ಯಕ್ಷರಾಗಿ ರೇವೂರ ಅಧಿಕಾರ ಸ್ವೀಕರಿಸಿದಕ್ದಾರೆ. ಕಲಬುರ್ಗಿಯಲ್ಲಿರೋ ಕೆಕೆಆರ್​ಡಿಬಿ ಕಛೇರಿಯಲ್ಲಿ ಅಧಿಕಾರ ಸ್ವೀಕಿಸಿದ್ದಾರೆ. ಸಂಸದ ಉಮೇಶ್ ಜಾಧವ್, ಶಾಸಕ ಸುಭಾಷ್ ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮತ್ತಿತರರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಗಣ್ಯರು ಶುಭ ಕೋರಿದರು. ಸಚಿವ ಸ್ಥಾನದ ಬದಲಿಗೆ ಕೆಕೆಆರ್​ಡಿಬಿ ಅಧ್ಯಕ್ಷ ಸ್ಥಾನ ಕೊಟ್ಟಿಡುವುದಕ್ಕೆ ಪ್ರತಿಕ್ರಿಯಿಸಿದ ದತ್ತಾತ್ರೇಯ ಪಾಟೀಲ ರೇವೂರ, ಮಂತ್ರಿ ರೇಸ್ ನಲ್ಲಿದ್ದುದು ಸತ್ಯ. ಮಂತ್ರಿ ಸ್ಥಾನದ ರೇಸ್ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ. ಸದ್ಯ ಕೊಟ್ಟ ಅವಕಾಶ ಬಳಸಿಕೊಂಡು ಕೆಲಸ ಮಾಡುತ್ತೇನೆ. ಚೆನ್ನಾಗಿ ಕೆಲಸ ಮಾಡಿ ಸಚಿವ ಸ್ಥಾನಕ್ಕೂ ಪ್ರಯತ್ನಿಸುತ್ತೇನೆ. ಕೊಟ್ಟ ಜವಾಬ್ದಾರಿ ಬಗ್ಗೆ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಟ್ಟೇ ಕೊಡ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿದೆ. ಹೀಗಾಗಿ ಅದರ ನಿರ್ಮೂಲನೆಗೆ ಮೊದಲ ಆದ್ಯತೆ ನೀಡಲಾಗುವುದು. ಈ ಭಾಗದಲ್ಲಿ ಬರುವ ಆರು ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ಭಾಗದ ಸಂಸದರು, ಶಾಸಕರನ್ನು ಜೊತೆಗೂಡಿಸಿಕೊಂಡು ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : Siddaramaiah Health - ಸಿದ್ದರಾಮಯ್ಯಗೆ ಅನಾರೋಗ್ಯ, ಮಣಿಪಾಲ ಆಸ್ಪತ್ರೆಗೆ ದಾಖಲು

ಅಧಿಕಾರ ಸ್ವೀಕಾರ ಸಮಾರಂಭದ ನಂತರ ನೂತನ ಅಧ್ಯಕ್ಷ ದತ್ತಾತ್ರೇಯ ಪಾಟೀಲ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭೆ ನಡೆಯಿತು. ಕೆಕೆಆರ್​ಡಿಬಿ ಅನುದಾನ, ವಿವಿಧ ಕಾಮಗಾರಿಗಳ ಪ್ರಗತಿ ಇತ್ಯಾದಿಗಳ ಮಾಹಿತಿಯನ್ನು ರೇವೂರ ಪಡೆದರು.

ಕೋವಿಡ್ ನಿಯಂತ್ರಣಕ್ಕಾಗಿ ತುರ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿಯೂ ಕೆಕೆಆರ್​ಡಿಬಿ ಕಾರ್ಯದರ್ಶಿ ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಮುಂಚೆ ಸಚಿವರಾದವರು ಮಾತ್ರ ಕೆಕೆಆರ್​ಡಿಬಿ ಅಧ್ಯಕ್ಷರಾಗಲು ಅವಕಾಶವಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಕಾಯ್ದೆಗೆ ತಿದ್ದುಪಡಿ ತಂದು, ಅಧ್ಯಕ್ಷರಾಗಲು ಶಾಸಕರಿಗೂ ಅವಕಾಶ ಕಲ್ಪಿಸಿತು. ತಿದ್ದುಪಡಿಯ ನಂತರ ಮೊದಲ ಅಧ್ಯಕ್ಷರಾಗಿ ದತ್ತಾತ್ರೇಯ ಪಾಟೀಲ ಅಧಿಕಾರ ವಹಿಸಿಕೊಂಡು, ಸಭೆಯನ್ನೂ ನಡೆಸಿದ್ದಾರೆ.
Published by:G Hareeshkumar
First published: