ಕಲಬುರ್ಗಿ ಪಾಲಿಕೆ: ಜೆಡಿಎಸ್ ನಡೆ ನಿಗೂಢ; ಬಿಜೆಪಿಗೆ ಅಧಿಕಾರ ತಪ್ಪಿಸಲು ಕೈ ಪ್ಲಾನ್

Kalburgi City Corporation- ಕಲ್ಬುರ್ಗಿ ಮೇಯರ್ ಆಯ್ಕೆ ದಿನಾಂಕ ಪ್ರಕಟ ಮಾಡಲು ಸರ್ಕಾರ ಹಿಂದೇಟು ಹಾಕಲು ಜೆಡಿಎಸ್ ಕಾರಣವಾಗಿದೆ. ಇತ್ತ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ಧಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು: ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ 5 ದಿನಗಳಾದರೂ ಮೇಯರ್ (Kalburgi City Corporation Mayor Election) ಆಯ್ಕೆಗೆ ಮಾತ್ರ ಸರ್ಕಾರ ಇನ್ನೂ ದಿನಾಂಕವನ್ನೇ ಪ್ರಕಟ ಮಾಡಿಲ್ಲ. ಇದೀಗ ಸರ್ಕಾರ ಈ ರೀತಿಯ ವಿಳಂಬ ಧೋರಣೆ ಮಾಡ್ತಿರೋದು ಜೆಡಿಎಸ್​ನ ನಿಲುವಿನಿಂದ ಎಂದು ಹೇಳಲಾಗ್ತಿದೆ. ಹೊಂದಾಣಿಕೆ ಬಗ್ಗೆ ಜೆಡಿಎಸ್ ವರಿಷ್ಠರು ಬಿಜೆಪಿಗೆ ಇನ್ನೂ ಸ್ಪಷ್ಟ ಸಂದೇಶ ಕೊಡದೇ ಇರೋದ್ರಿಂದ ಮೇಯರ್ ಆಯ್ಕೆ ದಿನಾಂಕವನ್ನು ಸರ್ಕಾರ ಹೊರಡಿಸಿಲ್ಲ. ಈಗಾಗಲೇ ಬಿಜೆಪಿ ಜೆಡಿಎಸ್​ನ ಸಪೋರ್ಟ್ ಕೇಳಿದೆ. ಆದರೆ ಜೆಡಿಎಸ್ ಮಾತ್ರ ಮೇಯರ್ ಸ್ಥಾನವನ್ನು ಕೇಳಲು ನಿರ್ಧರಿಸಿದ್ದು, ಇದೀಗ ಮೇಯರ್ ಸ್ಥಾನವನ್ನು ಬಿಟ್ಟು ಕೊಡುವ ಸಂಬಂಧ ಚರ್ಚೆ ಮಾತುಕತೆ ಹಂತದಲ್ಲಿ ಇದೆ. ಯಾವುದೇ ರೀತಿಯ ಸ್ಪಷ್ಟ ನಿಲುವನ್ನು ಜೆಡಿಎಸ್ ಪ್ರಕಟ ಮಾಡದೆ ಇರೋದ್ರಿಂದ ಬಿಜೆಪಿ ದಿನಾಂಕ ಪ್ರಕಟ ಮಾಡಿಲ್ಲ. ಜೆಡಿಎಸ್​ನಿಂದ ಸ್ಪಷ್ಟ ಸಂದೇಶ ಬಂದ ನಂತರ ಕಲ್ಬುರ್ಗಿ ಮೇಯರ್ ಆಯ್ಕೆಗೆ ದಿನಾಂಕವನ್ನು ಪ್ರಕಟ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಸಿಟ್ಟು: ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಅತಂತ್ರ ಫಲಿತಾಂಶಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಮೇಲೆ ಸಿಟ್ಟಾಗಿದೆ. ಕಲ್ಬುರ್ಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಖರ್ಗೆಗೆ ಮತ್ತೊಮ್ಮೆ ಮುಖಭಂಗ ಉಂಟು ಮಾಡಲು ಪಾಲಿಕೆಯಲ್ಲಿ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದೇ ಇರೋದ್ರಿಂದ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಗರಂ ಆಗಿದೆ. ಹೀಗಾಗಿ ಹೈಕಮಾಂಡ್​ನ ಕೋಪವನ್ನು ತಣ್ಣಗೆ ಮಾಡಲು ರಾಜ್ಯ ನಾಯಕರು ಮುಂದಾಗಿದ್ದು, ಪಕ್ಷಕ್ಕೆ ಆಗಿರುವ ಹಿನ್ನಡೆ ಬಿಟ್ಟು, ಪಾಲಿಕೆಯಲ್ಲಾದರೂ ಪಕ್ಷವನ್ನು ಅಧಿಕಾರಕ್ಕೆ ತಂದು ಚುನಾವಣೆಯಲ್ಲಿ ಆಗಿರುವ ಹಿನ್ನಡೆಗೆ ಪ್ಯಾಚಪ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ಫಲಿತಾಂಶ ಬಂದ ಕೂಡಲೇ ಸಿಎಂ ಬಸವರಾಜ್ ಬೊಮ್ಮಾಯಿಯೇ ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದು, ತಮಗೆ ಬೆಂಬಲ ಕೊಡುವಂತೆ ಕೇಳಿಕೊಂಡಿದ್ಸಾರೆ. ಇದರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಹಾಗೂ ಸ್ಥಳೀಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳ ಕಸರತ್ತು ಮಾಡ್ತಿದ್ದಾರೆ.

ಇದನ್ನೂ ಓದಿ: IQRA cheating- ಬೆಂಗಳೂರಲ್ಲಿ ಮತ್ತೊಂದು ಬ್ಲೇಡ್ ಕಂಪನಿ; ಇಕ್ರಾಗೆ ಲಕ್ಷ ಲಕ್ಷ ಕೊಟ್ಟವರ ಕಣ್ಣೀರು

ಸೇಡು ತೀರಿಸಿಕೊಳ್ಳಲು ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಸಜ್ಜು:

ಕಲ್ಬುರ್ಗಿಯಲ್ಲಿ ಅಧಿಕಾರ ಹಿಡಿಯುವ ಮೂಲಕ ತಮ್ಮನ್ನು ಸೋಲಿಸಿದ್ದ ಬಿಜೆಪಿಗೆ  ತಿರುಗೇಟು ಕೊಡಲು ಖರ್ಗೆ ಪ್ಲಾನ್ ರೂಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಜೆಪಿ ಹೈಕಮಾಂಡ್ ಹಠ ತೊಟ್ಟು ಸೋಲಿಸಿತ್ತು. ಇದೀಗ ಪಾಲಿಕೆ ಯಲ್ಲಿ ಅಧಿಕಾರ ಹಿಡಿಯೋದ್ರ ಮೂಲಕ ಬಿಜೆಪಿ ವಿರುದ್ದ ಸೇಡು ತೀರಿಸಿಕೊಳ್ಳಲು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಂತ್ರಗಾರಿಕೆ ರೂಪಿಸಿದ್ದಾರೆ. ಅದಕ್ಕಾಗಿಯೇ ಜೆಡಿಎಸ್ ವರಿಷ್ಠರ ದೇವೇಗೌಡರ ಜೊತೆ ಖುದ್ದು ಖರ್ಗೆಯವರೇ ಮಾತಾಡಿ, ಬೆಂಬಲ ನೀಡುವಂತೆ ಕೇಳಿ ಕೊಂಡಿದ್ದಾರೆ.

ಹಾಗೆಯೇ, ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡುವ ಸಂದರ್ಭ ಬಂದರೆ ಅದನ್ನ ಸ್ವೀಕರಿಸಿ ಎಂಬ ಸಂದೇಶವನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರು ತಮ್ಮ ಪಕ್ಷದ ಕಾರ್ಪೊರೇಟರ್​ಗಳಿಗೆ ನೀಡಿದ್ದಾರೆನ್ನಲಾಗಿದೆ. ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತೇವೆ. ಆದರೆ, ಜೆಡಿಎಸ್ ತನಗೆ ಮೇಯರ್ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದರೆ ಬಿಟ್ಟುಕೊಡಲು ಸಿದ್ಧರಿರಬೇಕು. ಕೊನೆಯ ಪಕ್ಷ ಉಪಮೇಯರ್ ಸ್ಥಾನವಾದರೂ ಸಿಗುತ್ತದೆ. ಅದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಪಾಲಿಕೆ ಅಧಿಕಾರ ಸಿಗದಂತೆ ತಪ್ಪಿಸುವುದು ನಮ್ಮ ಮುಖ್ಯ ಉದ್ದೇಶ. ಹೀಗಾಗಿ ಎಂಥ ಸಂದರ್ಭಕ್ಕೂ ಅಣಿಗೊಂಡಿರಿ ಎಂದು ಖರ್ಗೆ ಕರೆ ನೀಡಿರುವುದು ಮೂಲಗಳಿಂದ ಗೊತ್ತಾಗಿದೆ.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: