ಕಲಬುರ್ಗಿಗೆ ತಪ್ಪದ ಮಹಾ ಕಂಟಕ - ಇದರ ನಡುವೆಯೇ ಮುಂಬೈಗೆ ವಿಮಾನ ಹಾರಾಟಕ್ಕೆ ಸಿದ್ಧತೆ

ಬೆಂಗಳೂರು, ಬೆಳಗಾವಿ ಮೂಲಕ ಮುಂಬೈಗೆ ವಿಮಾನ ಹಾರಾಟ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಪ್ರತಿ ಶನಿವಾರ ಮುಂಬೈಗೆ ವಿಮಾನ ಹಾರಾಟ ನಡೆಯಲಿದೆ.

ಕಲಬುರ್ಗಿ ವಿಮಾನ ನಿಲ್ದಾಣ

ಕಲಬುರ್ಗಿ ವಿಮಾನ ನಿಲ್ದಾಣ

  • Share this:
ಕಲಬುರ್ಗಿ(ಜೂ.11): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದಕ್ಕೆ ಮಹಾರಾಷ್ಟ್ರ ಮುಖ್ಯ ಕಾರಣವಾಗಿದೆ. ಅದರಲ್ಲಿಯೂ ಮುಂಬೈಯಿಂದ ವಾಪಸ್ಸಾದ ವಲಸಿಗರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ವ್ಯಾಪಕಗೊಂಡಿದ್ದು, ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಜಿಲ್ಲೆಗೆ ಮಹಾ ಕಂಟಕ ಎದುರಾಗಿರುವ ಸಂದರ್ಭದಲ್ಲಿಯೇ ಕಲಬುರ್ಗಿಯಿಂದ ಮುಂಬೈಗೆ ವಿಮಾನ ಹಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ ಮುಂದಾಗಿದೆ.

ಬೆಂಗಳೂರು, ಬೆಳಗಾವಿ ಮೂಲಕ ಮುಂಬೈಗೆ ವಿಮಾನ ಹಾರಾಟ ನಡೆಸಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಪ್ರತಿ ಶನಿವಾರ ಮುಂಬೈಗೆ ವಿಮಾನ ಹಾರಾಟ ನಡೆಯಲಿದೆ. ಜೂನ್ 13 ರಿಂದ ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ. OG-118 ಸಂಖ್ಯೆಯ ವಿಮಾನ ಕಲಬುರ್ಗಿಯಿಂದ ಬೆಳಿಗ್ಗೆ 10.20 ಗಂಟೆಗೆ ಹೊರಟು ಬೆಳಿಗ್ಗೆ 11.25 ಕ್ಕೆ ಬೆಂಗಳೂರು ತಲುಪಲಿದೆ

ಇದೇ ವಿಮಾನ OG-105 ಸಂಖ್ಯೆಯೊಂದಿಗೆ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ಹಾಗೂ OG-111 ಸಂಖ್ಯೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.40 ಗಂಟೆಗೆ ಲ್ಯಾಂಡ್ ಆಗಲಿದೆ. ಈಗಾಗಲೇ ಬುಕಿಂಗ್ ಸಹ ಪ್ರಾರಂಭವಾಗಿದೆ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ಎಎಐ ನಿರ್ದೇಶಕ ಜ್ಞಾನೇಶ್ವರ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  ಎಸ್​ಎಸ್​ಎಲ್​​ಸಿ ಪ್ರಥಮ ಸ್ಥಾನಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಸರತ್ತು ; ಕೊರೊನಾ ಆತಂಕದ ನಡುವೆ ಪರೀಕ್ಷೆಗೆ ಭರದ ಸಿದ್ಧತೆ

ಸದ್ಯಕ್ಕೆ ಮುಂಬೈಯಿಂದ ಉದ್ಯಾನ್ ಎಕ್ಸ್ ಪ್ರೆಸ್, ಹುಸೇನ್ ಸಾಗರ್ ಎಕ್ಸೆಪ್ರೆಸ್ ಗಳ ಮೂಲಕ ಕಲಬುರ್ಗಿಗೆ ವಲಸಿಗರು ಆಗಮಿಸಲಾರಂಭಿಸಿದ್ದಾರೆ. ನಿತ್ಯ ನೂರಾರು ವಲಸಿಗರು ಆಗಮಿಸುತ್ತಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.

ಇದು ಹೀಗಿರಬೇಕಾದರೆ ವಿಮಾನ ಹಾರಾಟ ಆರಂಭಿಸುವುದಿರಂದ ಕಲಬುರ್ಗಿಗೆ ಬರುವ ವಲಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದು ಖಚಿತವಾಗಿದೆ. ಹೀಗಾಗಿ ಕಲಬುರ್ಗಿ ಜಿಲ್ಲೆಯ ಜನತೆ ಮತ್ತಷ್ಟು ಆತಂಕಗೊಳ್ಳುವಂತಾಗಿದೆ.
First published: