HOME » NEWS » District » KALBURGI DISTRICT COMMISSIONER VIJAYA V JYOTSNA WILL SPEND A DAY IN KONCHAVARAM SAKLB SESR

ಮಕ್ಕಳ ಮಾರಾಟದ ಕೇಂದ್ರ ಬಿಂದುವಾಗಿದ್ದ ಕೊಂಚವರಂನಲ್ಲಿ ಇಂದು ಕಲಬುರ್ಗಿ ಡಿಸಿ ವಾಸ್ತವ್ಯ; ಗರಿಗೆದರಿದ ಕುತೂಹಲ

ಬಡತನದ ಕಾರಣಕ್ಕಾಗಿ ಹುಟ್ಟಿದ ಹೆಣ್ಣು ಕೂಸುಗಳನ್ನು ಮಾರಾಟ ಮಾಡುವ ಮೂಲಕ ಅಪಖ್ಯಾತಿಗೆ ಗುರಿಯಾಗಿದ್ದ ಕೊಂಚವರಂ ಪ್ರದೇಶ ಎರಡು ದಶಕಗಳ ಹಿಂದೆ ದೇಶದ ಗಮನ ಸೆಳೆದಿತ್ತು

news18-kannada
Updated:February 20, 2021, 5:56 AM IST
ಮಕ್ಕಳ ಮಾರಾಟದ ಕೇಂದ್ರ ಬಿಂದುವಾಗಿದ್ದ ಕೊಂಚವರಂನಲ್ಲಿ ಇಂದು ಕಲಬುರ್ಗಿ ಡಿಸಿ ವಾಸ್ತವ್ಯ; ಗರಿಗೆದರಿದ ಕುತೂಹಲ
ವಿಜಯಾ ವಿ. ಜ್ಯೋತ್ಸ್ನಾ
  • Share this:
ಕಲಬುರ್ಗಿ (ಫೆ. 20): ಒಂದು ಕಾಲಕ್ಕೆ ಮಕ್ಕಳ ಮಾರಾಟದ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ  ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚವರಂ ಪ್ರದೇಶದಲ್ಲಿ ಇಂದು ಜಿಲ್ಲಾಧಿಕಾರಿ ವಿಜಯಾ ವಿ. ಜ್ಯೋತ್ಸ್ನಾ ವಾಸ್ತವ್ಯ ಹೂಡಲಿದ್ದಾರೆ. ಬಡತನದ ಕಾರಣಕ್ಕಾಗಿ ಹುಟ್ಟಿದ ಹೆಣ್ಣು ಕೂಸುಗಳನ್ನು ಮಾರಾಟ ಮಾಡುವ ಮೂಲಕ ಅಪಖ್ಯಾತಿಗೆ ಗುರಿಯಾಗಿದ್ದ ಕೊಂಚವರಂ ಪ್ರದೇಶ ಎರಡು ದಶಕಗಳ ಹಿಂದೆ ದೇಶದ ಗಮನ ಸೆಳೆದಿತ್ತು. ಈಗಲೂ ಸಹ ಈ ಪ್ರದೇಶದ ತಾಂಡಾಗಳಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಿಲ್ಲ. ಇಂತಹ ಮಕ್ಕಳ ಮಾರಾಟದ ಕೇಂದ್ರ ಬಿಂದುವಾಗಿರುವ ಕೊಂಚವರಂ ಪ್ರದೇಶದಲ್ಲಿ ವಾಸ್ತವ್ಯ ಮಾಡಲು ಜಿಲ್ಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ಇಂದು ಶನಿವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಜಿಲ್ಲಾಧಿಕಾರಿಗಳು ಕೊಂಚವರಂ ಗ್ರಾಮದಲ್ಲಿಯೆ ಇದ್ದು, ಗ್ರಾಮದ ಜನರ ಅಳಲನ್ನು ಆಲಿಸಲಿದ್ದಾರೆ.

ಜಿಲ್ಲಾಧಿಕಾರಿಗಳೊಂದಿಗೆ ಸೇಡಂ ಸಹಾಯಕ ಆಯುಕ್ತರು, ಚಿಂಚೋಳಿ ತಾಲೂಕಿನ ತಹಶೀಲ್ದಾರು ಸೇರಿದಂತೆ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು  ಜೊತೆಯಾಗಲಿದ್ದಾರೆ. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿ.ಪಿ.ಎಲ್. ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಿದ್ದಾರೆ. ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಕುರಿತು ಕ್ರಮ ವಹಿಸಲಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಿದ್ದಾರೆ. ಗ್ರಾಮದಲ್ಲಿ ಸ್ಮಶಾನಭೂಮಿ ಲಭ್ಯತೆಯ ಮತ್ತು ಆಶ್ರಯ ಯೋಜನೆಯಡಿ ಅವಶ್ಯಕತೆಯಿದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಆದೇಶಿಸಲಿದ್ದಾರೆ.

ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಗ್ರಾಮದಲ್ಲಿ ಪೌತಿ (ಮರಣ) ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ ನಂ. 9 ತೆಗೆದು ನೈಜ ವಾರಸುದಾರರ ಹೆಸರಿಗೆ ಸೇರಿಸುವುದು. ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವಕ್ಕೆ ಸೂಚನೆ ನೀಡಲಿದ್ದಾರೆ. ಜಮೀನಿನ ಹದ್ದು ಬಸ್ತು, ಪೋಡಿ, ಪೋಡಿ ಮುಕ್ತ ಗ್ರಾಮ, ದರಕಾಸ್ತು ಪೋಡಿ, ಕಂದಾಯ ಗ್ರಾಮಗಳ ರಚನೆ ಸೇರಿದಂತೆ ಗ್ರಾಮದಲ್ಲಿನ ಇತರೆ ಕುಂದುಕೊರತೆಗಳನ್ನು ಸಹ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಿದ್ದಾರೆ. ಗ್ರಾಮ ವಾಸ್ತವ್ಯದ ಭಾಗವಾಗಿ ಆಧಾರ್ ಕಾರ್ಡ್ ಅನುಕೂಲತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮುಖಾಂತರ ಪಡೆಯುವ ಬಗ್ಗೆ, ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ, ಅತೀವೃಷ್ಠಿ-ಅನಾವೃಷ್ಠಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮ ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ವಿವಿಧ ಇಲಾಖೆಗಳ ಸವಲತ್ತುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಡಿಸಿ ತೀರ್ಮಾನಿಸಿದ್ದಾರೆ.

ಕೊಂಚವರಂ ಗ್ರಾಮದಲ್ಲಿರುವ ಸರ್ಕಾರಿ ವಸತಿ ನಿಲಯ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೂ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಭೇಟಿ ನೀಡಿ ಶಿಕ್ಷಣ ಬೋಧನೆ, ಆಹಾರ ಮತ್ತು ಕಲಿಕೆಯ ಗುಣಮಟ್ಟ ಪರಿಶೀಲಿಸಲಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಾಯಂಕಾಲ ಸಾಂಸ್ಕಂತಿಕ ಸಂಜೆ ಸಹ ಆಯೋಜಿಸಲಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಜನರ ಮನೆ ಬಾಗಿಲಿಗೆ ಬರುತ್ತಿರುವುದರಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಜಿಲ್ಲೆಯ ಆಯಾ ಗ್ರಾಮದ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಬಂದು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ

ತಹಶೀಲ್ದಾರರಿಂದಲೂ ಗ್ರಾಮ ವಾಸ್ತವ್ಯ.

ಜಿಲ್ಲಾಧಿಕಾರಿಗಳು ಚಿಂಚೋಳಿ ತಾಲೂಕಿನ ಕುಂಚಾವರಂನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅದೇ ರೀತಿ ಮಹಾರಾಷ್ಟ್ರದ ಗಡಿಯಲ್ಲಿರುವ ಆಳಂದ ತಾಲೂಕಿನ ನಂದಗೂರ ಗ್ರಾಮದಲ್ಲಿ ಕಲಬುರ್ಗಿ ಸಹಾಯಕ ಆಯುಕ್ತರು ಮತ್ತು ಆಳಂದ ತಹಶೀಲ್ದಾರರು ಜಂಟಿಯಾಗಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಉಳಿದಂತೆ ಸೇಡಂ ತಾಲೂಕಿನ ಗೌಡನಹಳ್ಳಿ, ಚಿತ್ತಾಪೂರ ತಾಲೂಕಿನ ಗುಂಡಗುರ್ತಿ, ಶಹಾಬಾದ ತಾಲೂಕಿನ ಅಲದಿಹಾಳ, ಕಲಬುರ್ಗಿ ತಾಲೂಕಿನ ಅವರಾದ(ಬಿ), ಕಮಲಾಪುರ ತಾಲೂಕಿನ ಡೊಂಗರಗಾಂವ, ಕಾಳಗಿ ತಾಲೂಕಿನ ರಟಕಲ್, ಅಫಜಲಪೂರ ತಾಲೂಕಿನ ರೇವೂರ(ಬಿ), ಜೇವರ್ಗಿ ತಾಲೂಕಿನ ರಾಜವಾಳ ಹಾಗೂ ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: February 20, 2021, 5:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories