• Home
 • »
 • News
 • »
 • district
 • »
 • ಕಲಬುರ್ಗಿ ಪಾಲಿಕೆಗೆ ಮಹಿಳಾ ಮೇಯರ್; ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬಿಜೆಪಿ ಕಸರತ್ತು

ಕಲಬುರ್ಗಿ ಪಾಲಿಕೆಗೆ ಮಹಿಳಾ ಮೇಯರ್; ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬಿಜೆಪಿ ಕಸರತ್ತು

ಕಲಬುರ್ಗಿ ಮಹಾನಗರ ಪಾಲಿಕೆ

ಕಲಬುರ್ಗಿ ಮಹಾನಗರ ಪಾಲಿಕೆ

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ (Kalburgi City Corporation) ಬಿಜೆಪಿ ಪ್ರಥಮ ಬಾರಿಗೆ ಅಧಿಕಾರ ಹಿಡಿಯಲು ಪ್ಲಾನ್ ಮಾಡಿದೆ. ಮೇಯರ್ ಪಟ್ಟ ಗೆಲ್ಲಲು ಬಿಜೆಪಿಗೆ ಅಗತ್ಯ ಇರುವ 2 ಸ್ಥಾನಗಳಿಗೆ ಜೆಡಿಎಸ್ ಬೆಂಬಲ ಸಿಗುವ ನಿರೀಕ್ಷೆ ಇದೆ.

 • Share this:

  ಕಲಬುರ್ಗಿ: ಬೆಳಗಾವಿ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯಲಿರುವ ಬಿಜೆಪಿ ಕಲಬುರ್ಗಿ ಪಾಲಿಕೆಯನ್ನೂ (Kalburgi Corporation) ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಯಾರಿಗೂ ಬಹುಮತ ಬರದೇ ಅತಂತ್ರ ಸ್ಥಿತಿಯಲ್ಲಿರುವ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಕಲ ಪ್ರಯತ್ನವನ್ನೂ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ (Congress Party) ಅತಿ ಹೆಚ್ಚು ಸ್ಥಾನಗಳನ್ನ ಗೆದ್ದಿದ್ದರೂ ಜೆಡಿಎಸ್ (JDS party) ಬೆಂಬಲ ಪಡೆದು ಬಿಜೆಪಿ ಗದ್ದುಗೆಗೇರುವ ಸಾಧ್ಯತೆ ಹೆಚ್ಚಾಗಿದೆ. ಇದೇ ವೇಳೆ, ಕಲಬುರ್ಗಿ ಮಹಾನಗರ ಪಾಲಿಕೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಅಧ್ಯಕ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲು ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್​ಗಕ್ಕೆ ನೀಡಲಾಗಿದೆ. ಹೀಗಾಗಿ, ಬಿಜೆಪಿಯೊಳಗೆ ಮೇಯರ್ ಸ್ಥಾನಕ್ಕೆ ಮಹಿಳಾ ಸದಸ್ಯರ ಪೈಪೋಟಿ ಶುರುವಾಗಿದೆ.


  ಇನ್ನು, ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ಇರುವ ವಾರ್ಡ್ 55. ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಅಭ್ಯರ್ಥಿಯೂ ಆಯ್ಕೆಯಾಗಿದ್ದಾರೆ. ಪಾಲಿಕೆ ಅಧ್ಯಕ್ಷರ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಇದೆ. ಇವರೆಲ್ಲರನ್ನೂ ಸೇರಿ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ. ಬಿಜೆಪಿಯಲ್ಲಿ ಪಾಲಿಕೆ ಸದಸ್ಯರ ಸಂಖ್ಯೆ 23, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿಯ ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್​ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲುದು. ಹಾಗೆಯೇ, ಪಾಲಿಕೆಯಲ್ಲಿ ಗೆಲುವು ಸಾಧಿಸಿರುವ ಏಕೈಕ ಪಕ್ಷೇತರ ಅಭ್ಯರ್ಥಿ ವಾಸ್ತವವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಅವರು ಸ್ಪರ್ಧಿಸಿದ್ದರು. ಇವರನ್ನ ಮನವೊಲಿಸಿ ಬಿಜೆಪಿ ಬೆಂಬಲ ಗಿಟ್ಟಿಸುವ ನಿರೀಕ್ಷೆ ಇದೆ.


  ಅತ್ತ, ಕಾಂಗ್ರೆಸ್ ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬರ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್​ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಇದೆ. ನಿನ್ನೆ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಪಕ್ಷ ಜಾತ್ಯತೀತ ನಿಲುವು ಇರುವುದರಿಂದ ಅದರೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಮಸ್ಯೆ ಇಲ್ಲ ಎಂದಿದ್ದರು. ಆದರೆ, ಅಂತಿಮವಾಗಿ ಪಕ್ಷದ ನಾಯಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.


  ಇದನ್ನೂ ಓದಿ: Kollegala- ವಿಪ್ ಉಲ್ಲಂಘನೆ: ಕೊಳ್ಳೇಗಾಲದ 7 ಮಂದಿ ಬಿಎಸ್​ಪಿ ನಗರಸಭಾ ಸದಸ್ಯರ ಸದಸ್ಯತ್ವ ಅನರ್ಹ


  ಮೇಯರ್ ಸ್ಥಾನಕ್ಕೆ ಮಹಿಳೆಯರ ಪೈಪೋಟಿ:


  ಈ ಬಾರಿ ಕಲಬುರ್ಗಿ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲು ಮಾಡಲಾಗಿದೆ. ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬಿ ಗೆ ಕೊಡಲಾಗುತ್ತದೆ ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಅಧಿಕಾರಿ ಸ್ನೇಹಲ್ ಲೋಖಂಡೆ ಹೇಳಿದ್ದಾರೆ. ಈಗ ಬಿಜೆಪಿ ನಾಲ್ವರು ಸಾಮಾನ್ಯ ವರ್ಗದ ಮಹಿಳಾ ಸದಸ್ಯರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ಧಾರೆ. ವಾರ್ಡ್ ನಂಬರ್ 5ರ ಗಂಗಮ್ಮ ಮುನಳ್ಳಿ, ವಾರ್ಡ್ ನಂ 6ರ ಅರುಣಾ ದೇವಿ, ವಾರ್ಡ್ ನಂ. 51ರ ಪಾರ್ವತಿ ರಾಜೀವ್ ದೇವದುರ್ಗ, ವಾರ್ಡ್ ನಂ 52ರ ಶೋಭಾ ದೇಸಾಯಿ ಅವರು ಮೇಯತ್ ಹುದ್ದೆಗಾಗಿ ಈಗಲೇ ಪೈಪೋಟಿ ಶುರು ಮಾಡಿದ್ದಾರೆ. ತಮ್ಮ ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ.


  ವರದಿ: ಅರುಣ್ ಕುಮಾರ್ ಕದಂ

  Published by:Vijayasarthy SN
  First published: