HOME » NEWS » District » KALABURAGI BJP TWO MLAS DISAPPOINTED ON GOVERNMENT CORPORATION BOARD APPOINTMENT RH

ಕಲಬುರ್ಗಿ ಶಾಸಕರಿಗೆ ಬಿಸಿ ತುಪ್ಪವಾದ ನಿಗಮ, ಮಂಡಳಿ ನೇಮಕ; ಶಾಸಕರಾದ ರೇವೂರ, ತೇಲ್ಕೂರ ನಡೆ ನಿಗೂಢ

ಸಿಎಂ ಅವರನ್ನು ಭೇಟಿಯಾದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳುವ ಲೆಕ್ಕಾಚಾರವನ್ನು ಇಬ್ಬರೂ ಶಾಸಕರು ನಡೆಸಿದ್ದಾರೆ. ಬಹುತೇಕ ಇಬ್ಬರು ನಿಗಮ-ಮಂಡಳಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ ಎಂದು ಆಪ್ತ ವಲಯಗಳು ಹೇಳುತ್ತಿವೆ. ಇಬ್ಬರಿಗೂ ರಾಜ್ಯ ಸರ್ಕಾರದ ಆದೇಶ ಬಿಸಿ ತುಪ್ಪವಾಗಿದ್ದು, ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

news18-kannada
Updated:July 28, 2020, 2:28 PM IST
ಕಲಬುರ್ಗಿ ಶಾಸಕರಿಗೆ ಬಿಸಿ ತುಪ್ಪವಾದ ನಿಗಮ, ಮಂಡಳಿ ನೇಮಕ; ಶಾಸಕರಾದ ರೇವೂರ, ತೇಲ್ಕೂರ ನಡೆ ನಿಗೂಢ
ಬಿಜೆಪಿ
  • Share this:
ಕಲಬುರ್ಗಿ; ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಹಲವು ಅತೃಪ್ತ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಸಿಎಂ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಆದರೆ ಮುಖ್ಯಮಂತ್ರಿಗಳ ಈ ಗಿಫ್ಟ್ ಕಲಬುರ್ಗಿಯ ಬಿಜೆಪಿ ಶಾಸಕರಿಗೆ ರುಚಿಸಿಲ್ಲ. ಮುಖ್ಯಮಂತ್ರಿಗಳು ನೀಡಿರುವ ಗಿಫ್ಟ್ ಸ್ವೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಅನ್ನೋ ಗೊಂದಲದಲ್ಲಿದ್ದಾರೆ.

ಹಾಗೆ ನೋಡಿದರೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಗೆ ಒಬ್ಬರನ್ನಾದರೂ ಸಚಿವರನ್ನಾಗಿಸಬೇಕಿತ್ತು. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಕಲುಬರ್ಗಿ ದಕ್ಷಿಣ ಕ್ಷೇತ್ರದಿಂದ ದತ್ತಾತ್ರೇಯ ಪಾಟೀಲ ರೇವೂರ, ಆಳಂದದಿಂದ ಸುಭಾಷ್ ಗುತ್ತೇದಾರ, ಸೇಡಂ ನಿಂದ ರಾಜಕುಮಾರ ಪಾಟೀಲ ತೇಲ್ಕೂರ, ಗ್ರಾಮೀಣ ಕ್ಷೇತ್ರದಿಂದ ಬಸವರಾಜ ಮತ್ತಿಮೂಡ ಹಾಗೂ ಚಿಂಚೋಳಿ ಕ್ಷೇತ್ರದಿಂದ ಅವಿನಾಶ್ ಜಾಧವ್ ಆಯ್ಕೆಯಾಗಿದ್ದಾರೆ. ಈ ಪೈಕಿ ದತ್ತಾತ್ರೇಯ ಪಾಟೀಲ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದರು. ಇದೀಗ ನಿಗಮ ಮಂಡಳಿಯ ಪಟ್ಟಿ ಬಿಡುಗಡೆಗೊಂಡಿದ್ದು, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಗಾದಿ ಅವರನ್ನೊಲಿದು ಬಂದಿದೆ. ಆದರೆ ನಿಗಮ ಮಂಡಳಿಗೆ ಶಾಸಕರ ನೇಮಕ ಆದೇಶ ಕಲಬುರ್ಗಿಯ ಬಿಜೆಪಿ ಶಾಸಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ನೇಮಕಗೊಳಿಸಲಾಗಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಿಜೆಪಿ ಸರ್ಕಾರದ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಶಾಸಕರಿಗೆ ಸಿಎಂ ನೀಡಿರೋ ಗಿಫ್ಟ್ ಕಲಬುರ್ಗಿಯ ಇಬ್ಬರೂ ಶಾಸಕರಿಗೂ ಬಿಸಿತುಪ್ಪದ ರೀತಿಯಲ್ಲಿ ಪರಿಣಮಿಸಿದೆ. ಶಾಸಕ ದತ್ತಾತ್ರೇಯ ಪಾಟೀಲ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದರು. ಇಬ್ಬರು ಶಾಸಕರ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ನಿಗಮ-ಮಂಡಳಿ ಅಧ್ಯಕ್ಷ ಗಾದಿಗೆ ಹೇರಲು ಮೀನಾಮೇಷ ಎಣಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶ ಪ್ರಕಟಗೊಂಡು ಒಂದು ದಿನವಾದರೂ ಮಾಧ್ಯಮಗಳಿಗೆ ಸಿಗದ ಶಾಸಕರು, ಕೆ.ಕೆ.ಆರ್.ಡಿ.ಬಿ. ತೆಗೆದುಕೊಂಡರೆ ಸಚಿವ ಸ್ಥಾನ ಸಿಗಲ್ಲ ಎಂಬ ಲೆಕ್ಕ ರೇವೂರ ಅವರದ್ದಾಗಿದೆ. ಸತತ ಎರಡನೆಯ ಬಾರಿಗೆ ಶಾಸಕರಾಗಿರೋ ತಮಗೆ ಸಚಿವ ಸ್ಥಾನ ಒಲಿದು ಬರಬೇಕಿತ್ತು ಎಂಬ ಲೆಕ್ಕಾಚಾರ ಅವರದ್ದು. ಅಲ್ಲದೇ ಅವರ ತಂದೆ ಚಂದ್ರಶೇಖರ ಪಾಟೀಲ ರೇವೂರ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ತಂದೆಯ ಸ್ಥಾನವನ್ನು ಸದ್ಯ ಮಗ ತುಂಬುತ್ತಿದ್ದಾರೆ. ಹೀಗಾಗಿ ತಮ್ಮ ಕುಟುಂಬ ಬಿಜೆಪಿಗೆ ಸಲ್ಲಿಸಿದ ಸೇವೆ ಗುರುತಿಸಿ ಸಚಿವ ಸ್ಥಾನ ನೀಡೇಬೆಕೆಂಬ ಪಟ್ಟು ದತ್ತಾತ್ರೇಯ ಪಾಟೀಲ ರೇವೂರದ್ದಾಗಿದೆ.

ಹಾಗೆಯೇ ಎನ್.ಇ.ಕೆ.ಆರ್.ಟಿ.ಸಿ ನಿಗಮ ತೆಗೆದುಕೊಂಡರೆ ಕೆಕೆಆರ್​ಡಿಬಿ ಅಧ್ಯಕ್ಷ ಗಾದಿ ಸಿಗಲ್ಲವೆಂದು ತೇಲ್ಕೂರ ಲೆಕ್ಕವಾಗಿದೆ. ತೇಲ್ಕೂರ ಸೇಡಂ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದವರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಗಾದಿ ಮೇಲೆ ಕಣ್ಣಿಟ್ಟು, ಸಂಘ ಪರಿವಾರದ ಮುಖಂಡರ ಮೂಲಕ ಲಾಬಿಯನ್ನೂ ನಡೆಸಿದ್ದರು. ಆದರೆ ಅವರಿಗೆ ಕೆ.ಕೆ.ಆರ್.ಡಿ.ಬಿ. ಬಿಟ್ಟು ಸಾರಿಗೆ ನಿಗಮದ ಅಧ್ಯಕ್ಷ ಗಾದಿ ಒಲಿದು ಬಂದಿದೆ. ಇದನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕೊ ಅನ್ನೋ ಗೊಂದಲದಲ್ಲಿ ತೇಲ್ಕೂರ ಇದ್ದಾರೆ.

ಇದನ್ನು ಓದಿ: ಸಂಪುಟ ವಿಸ್ತರಣೆಯಾದರೆ ಆರು ಸಚಿವ ಸ್ಥಾನ ಭರ್ತಿ; ಯಾರಿಗೆ ಒಲಿಯುತ್ತೆ ಸಂಪುಟ ಭಾಗ್ಯ?
Youtube Video

ಹೀಗಾಗಿ ಸಿಎಂ ಅವರನ್ನು ಭೇಟಿಯಾದ ನಂತರವೇ ಮುಂದಿನ ನಿರ್ಧಾರ ಕೈಗೊಳ್ಳುವ ಲೆಕ್ಕಾಚಾರವನ್ನು ಇಬ್ಬರೂ ಶಾಸಕರು ನಡೆಸಿದ್ದಾರೆ. ಬಹುತೇಕ ಇಬ್ಬರು ನಿಗಮ-ಮಂಡಳಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ ಎಂದು ಆಪ್ತ ವಲಯಗಳು ಹೇಳುತ್ತಿವೆ. ಇಬ್ಬರಿಗೂ ರಾಜ್ಯ ಸರ್ಕಾರದ ಆದೇಶ ಬಿಸಿ ತುಪ್ಪವಾಗಿದ್ದು, ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.
Published by: HR Ramesh
First published: July 28, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories