HOME » NEWS » District » KALABURAGI ATMNIRBHAR BHARAT ACTIVITIES TOOK PLACE AS DAAL MILLS LIKELY TO REOPEN HK

ತೊಗರಿಯ ಕಣಜದಲ್ಲಿ ಹೊಸ ಭರವಸೆ ಮೂಡಿಸಿದ ಆತ್ಮನಿರ್ಭರ; ನೆಲಕಚ್ಚಿದ ದಾಲ್ ಮಿಲ್​ಗಳ ಪುನಶ್ಚೇತನ ನಿರೀಕ್ಷೆ

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಂತೆ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ಯಮಗಳ ಸಂಘಟನಾ ಯೋಜನೆ(ಪಿಎಂಎಫ್ಎಂಇ)ಯಿಂದ ಕಲಬುರ್ಗಿಯ ತೊಗರಿಗೆ ಭಾರಿ ಪ್ರೋತ್ಸಾಹ ಸಿಗಲಿದೆ ಎಂಬ ಮಾತು ಕೇಳಿ ಬಂದಿದೆ.

news18-kannada
Updated:September 10, 2020, 7:09 AM IST
ತೊಗರಿಯ ಕಣಜದಲ್ಲಿ ಹೊಸ ಭರವಸೆ ಮೂಡಿಸಿದ ಆತ್ಮನಿರ್ಭರ; ನೆಲಕಚ್ಚಿದ ದಾಲ್ ಮಿಲ್​ಗಳ ಪುನಶ್ಚೇತನ ನಿರೀಕ್ಷೆ
ತೊಗರಿ ಬೆಳೆ
  • Share this:
ಕಲಬುರ್ಗಿ(ಸೆಪ್ಟೆಂಬರ್​ 10): ಕಲಬುರ್ಗಿ ತೊಗರಿಯ ಕಣಜ ಎಂದೇ ಪ್ರಸಿದ್ಧಿ. ಆದರೆ, ಕಳೆದ ಹಲವು ವರ್ಷಗಳಿಂದ ತೊಗರಿಯ ಕಣಜದಲ್ಲಿ ತಲ್ಲಣದ ವಾತಾವರಣ ಸೃಷ್ಟಿಯಾಗಿದೆ. ತೊಗರಿ ಬೆಳೆಯುತ್ತಿರುವ ರೈತನೂ ಸಂಕಷ್ಟಕ್ಕೆ ಗುರಿಯಾಗಿ ತತ್ತರಿಸುವಂತಾಗಿದೆ. ಮತ್ತೊಂದೆಡೆ ತೊಗರಿಯನ್ನೇ ನಂಬಿ ಕಾರ್ಖಾನೆ ಹಾಕಿದ ದಾಲ್ ಮಿಲ್ ಮಾಲೀಕರು ನಾನಾ ತೊಂದರೆಗಳನ್ನು ಎದುರಿಸಿ ಮಿಲ್ ಗಳನ್ನು ಮುಚ್ಚುವಂತಾಗಿದೆ. ಇದೆಲ್ಲದರ ಬೆನ್ನ ಹಿಂದೆಯೇ ಕೇಂದ್ರ ಸರ್ಕಾರದ ಆತ್ಮನಿರ್ಭರ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನ ತೊಗರಿಯ ಕಣಜದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ. ದರಗಳ ಏರುಪೇರು, ತೊಗರಿ ಉತ್ಪಾದನೆಯಲ್ಲಿನ ಏರುಪೇರು, ವಿದ್ಯುತ್ ಕೊರತೆ, ಆರ್ಥಿಕ ಸಂಕಷ್ಟ, ಕೈಗಾರಿಕಾ ನೀತಿ ಇತ್ಯಾದಿಗಳ ಕಾರಣದಿಂದಾಗಿ ದಾಲ್ ಮಿಲ್ ಗಳ ಮೇಲೆ ಕಾರ್ಮೋಡ ಕವಿದಿದೆ. ಬಹುತೇಕ ದಾಲ್ ಮಿಲ್ ಗಳು ಸೀಜನ್ ಇದ್ದಾಗ ಮಾತ್ರ ಕಾರ್ಯನಿರ್ವಹಣೆ ಮಾಡುತ್ತವೆ. ಕೇವಲ ಬೆರಳೆಣಿಕೆಯಷ್ಟು ದಾಲ್ ಮಿಲ್ ಗಳು ಮಾತ್ರ ವರ್ಷವಿಡೀ ಕಾರ್ಯನಿರ್ವಹಣೆ ಮಾಡಲಿವೆ. ಜಿಲ್ಲೆಯಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗುತ್ತದೆ.

ಜಿಲ್ಲೆಯ ಶೇ.70 ರಷ್ಟು ಪ್ರದೇಶದಲ್ಲಿ ತೊಗರಿ ಬಿತ್ತನೆ ನಡೆಯುತ್ತದೆ. ಕಲಬುರ್ಗಿ ಭಾರತದ ತೊಗರಿಯ ಕಣಜ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಭೂಮಿ, ಹವಾಗುಣ ಇತ್ಯಾದಿಗಳ ಕಾರಣದಿಂದಾಗಿ ವಿಶ್ವದಲ್ಲಿಯೇ ಅತ್ಯುತ್ಕೃಷ್ಟ ತೊಗರಿ ಇಲ್ಲಿ ಬೆಳಯಲಾಗುತ್ತದೆ. ಅತಿ ಹೆಚ್ಚು ಪೌಷ್ಟಿಕಾಂಶ ಇಲ್ಲಿನ ತೊಗರಿಯಲ್ಲಿರಲಿದೆ. ಹೀಗಾಗಿಯೇ ತೊಗರಿಯನ್ನು ನಂಬಿ ಜಿಲ್ಲೆಯಲ್ಲಿ ನೂರಾರು ದಾಲ್ ಮಿಲ್ ಗಳು ಅಸ್ತಿತ್ವಕ್ಕೆ ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಕಲಬುರ್ಗಿ ಜಿಲ್ಲೆಯಲ್ಲಿ 307 ದಾಲ್ ಮಿಲ್ ಗಳಿವೆ. ಈ ಪೈಕಿ ಹಲವು ದಾಲ್ ಮಿಲ್ ಗಳು ಮುಚ್ಚಲ್ಪಟ್ಟಿವೆ. ಕೆಲವು ದಾಲ್ ಮಿಲ್ ಗಲು ಸೀಜನಲ್ ಎನ್ನುವಂತಾಗಿದೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನದಂತೆ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ಯಮಗಳ ಸಂಘಟನಾ ಯೋಜನೆ(ಪಿಎಂಎಫ್ಎಂಇ)ಯಿಂದ ಕಲಬುರ್ಗಿಯ ತೊಗರಿಗೆ ಭಾರಿ ಪ್ರೋತ್ಸಾಹ ಸಿಗಲಿದೆ ಎಂಬ ಮಾತು ಕೇಳಿ ಬಂದಿದೆ. ಪಿಎಂಎಫ್ಎಂಇ ಯೋಜನೆ ಅಡಿ ಒಂದು ಜಿಲ್ಲೆಗೆ ಒಂದು ಬೆಳೆ ಅಥವಾ ಉತ್ಪನ್ನ ಆಯ್ಕೆ ಮಾಡಬಹುದಾಗಿದೆ. ಅದರಂತೆ ಕಲಬುರ್ಗಿ ಜಿಲ್ಲೆಯಿಂದ ತೊಗರಿ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಕಿರು ಆಹಾರ ಘಟಕಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅಳವಡಿಸಲು ಬೇಕಾದ ಹಣಕಾಸು ಸೌಲಭ್ಯ, ತಾಂತ್ರಿಕ ಹಾಗೂ ವಾಣಿಜ್ಯ ಒತ್ತಾಸೆಗಳನ್ನು ಇದರ ಅಡಿ ಒದಗಿಸಲಾಗುತ್ತದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿರುವ ಸಭೆಯಲ್ಲಿ ಕೈಗಾರಿಕೋದ್ಯಮಿಗಳು, ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಪಾಲ್ಗೊಂಡು ಆತ್ಮನಿರ್ಭರ ಭಾರತ ಅಭಿಯಾನದಡಿ ತೊಗರಿ ಆಯ್ಕೆಗೆ ಸಹಮತ ಸೂಚಿಸಿದ್ದಾರೆ. ಆತ್ಮನಿರ್ಭರದ ಅಡಿ 200 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಗೆ ಯೋಜಿಸಲಾಗಿದ್ದು, ಶೇ.30 ರಷ್ಟು ಸಬ್ಸಿಡಿಯೂ ಸಿಗಲಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿ ಈಗಾಗಲೇ ತೊಗರಿಯನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ : ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹತ್ಯೆಗೆ ಸಂಚು ರೂಪಿಸಿದ್ದ ಟೈಗರ್ ಗ್ಯಾಂಗ್ ; ಮೀಸೆ ಚಿಗುರದ ಯುವಕರಿಂದ ಆಗಿತ್ತು ಬಿಗ್ ಪ್ಲಾನ್

ಒಂದೊಂದು ಜಿಲ್ಲೆಯಿಂದ ಒಂದು ಬೆಳೆ ಆಯ್ಕೆ ಮಾಡಲು ಅವಕಾಶವಿತ್ತು. ಕಲಬುರ್ಗಿ ತೊಗರಿಯ ಕಣಜ ಆಗಿರುವುದರಿಂದ ಅದನ್ನೇ ಆಯ್ಕೆ ಮಾಡಿ ಕಳಿಸಿದ್ದೇವೆ. ಇದರಿಂದಾಗಿ ತೊಗರಿ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. ದೊಡ್ಡ ದಾಲ್ ಮಿಲ್ ಗಳ ಜೊತೆಗೆ ಮಿನಿ ದಾನ್ ಮಿಲ್ ಗಳೂ ಬರಲಿದ್ದು, ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಜಿಐ ಟ್ಯಾಗ್ ಸಹ ಸಿಕ್ಕಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲಬುರ್ಗಿ ತೊಗರಿಗೆ ಒಳ್ಳೆಯ ಬ್ರ್ಯಾಂಡ್ ಎನಿಸಿಕೊಳ್ಳಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸೂಗೂರ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಈ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಅಧ್ಯಕ್ಷ ಅಮರನಾಥ ಪಾಟೀಲ, ಕಲಬುರ್ಗಿ ತೊಗರಿ ಬೆಳೆ ತನ್ನದೇ ಆದ ಪೌಷ್ಟಿಕತೆಯನ್ನು ಹೊಂದಿದೆ. ದೇಶದ ವಿವಿಧೆಡೆ ಬೇಡಿಕೆ ಇಟ್ಟುಕೊಂಡಿದೆ. ಆದರೆ ದಾಲ್ ಮಿಲ್ ಗಳು ದಯನೀಯ ಸ್ಥಿತಿಗೆ ತಲುಪಿವೆ. ಆತ್ಮನಿರ್ಭರ ಭಾರತ ಅಭಿಯಾನಕ್ಕೆ ತೊಗರಿ ಬೆಳೆ ಆಯ್ಕೆ ಮಾಡಿರುವುದರಿಂದ ಖಂಡಿತಾ ಸಕಾರಾತ್ಮಕ ಬೆಳೆವಣಿಗೆಯಾಲಿದೆ. ದಾಲ್ ಮಿಲ್ ಗಳ ಪುನಶ್ಚೇತನ ಆಗುವ ಜೊತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದ ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Published by: G Hareeshkumar
First published: September 10, 2020, 7:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories