ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಹೋರಾಟಕ್ಕೆ ಕೋಲಾರದ ಕಾಗಿನೆಲೆ ಪೀಠವೇ ಮುಂದಾಳತ್ವ!

ಜನವರಿ15 ರಂದು ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಪ್ರತಿ ಜಿಲ್ಲೆಗಳಿಂದಲು ಜನರು‌ ಹೋರಾಟದಲ್ಲಿ ಸೇರಿಕೊಳ್ಳಲಿದ್ದಾರೆ. ಮೀಸಲಾತಿ ನಮ್ಮ ಹಕ್ಕು ಎಂದು ಕಾಗಿನೆಲೆ ಈಶ್ವರಾನಂದಪುರಿ ಸ್ವಾಮಿಗಳು ಹೇಳಿದ್ದಾರೆ.

ಈಶ್ವರಾನಂದಪುರಿ ಸ್ವಾಮಿ ಪತ್ರಿಕಾಗೋಷ್ಠಿ.

ಈಶ್ವರಾನಂದಪುರಿ ಸ್ವಾಮಿ ಪತ್ರಿಕಾಗೋಷ್ಠಿ.

  • Share this:
ಕೋಲಾರ: ಕುರುಬ ಸಮುದಾಯವನ್ನ‌ ಎಸ್​ಟಿ (ST-Reservation)  ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಈಗಾಗಲೇ ಹಲವೆಡೆ ಹಿರಿಯ ನಾಯಕರು ಹೋರಾಟ ನಡೆಸುತ್ತಿದ್ದು, ಕೋಲಾರದ ಕಾಗಿನೆಲೆಯಿಂದ ಬೆಂಗಳೂರಿಗೆ ಕರೆ ನೀಡಿರುವ ಪಾದಯಾತ್ರಯೆನ್ನ ಬೆಂಬಲಿಸುವಂತೆ ಕುರುಬ ಸಮುದಾಯಕ್ಕೆ ಈಶ್ವರಾನಂದಪುರಿ ಸ್ವಾಮೀಜಿಗಳು ಕರೆ ನೀಡಿದ್ದಾರೆ. ಕೋಲಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ, ಹೊಸದುರ್ಗ ಶಾಖಾ  ಮಠದ  ಈಶ್ವರಾನಂದ ಪುರಿ ಸ್ವಾಮೀಜಿಗಳು, ಮಾಜಿ ಸಚಿವ  ಪರಿಷತ್​ ಸದಸ್ಯ ಎಚ್​ಎಂ ರೇವಣ್ಣ, ಮುಕ್ಕುಡಪ್ಪ, ಸಾಗರ್  ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಎಸ್‍ಟಿ ಮೀಸಲಾತಿಗೆ ಕುರುಬ ಸಮುದಾಯನ್ನ ಸೇರಿಸುವ ವಿಚಾರವಾಗಿ ಮಾತನಾಡಿದ ರಾಜ್ಯ ಮತ್ತು ಜಿಲ್ಲಾ ಮುಖಂಡರು ಸಮುದಾಯದ ನಾಯಕರು ಎಲ್ಲರು ಒಗ್ಗೂಡಿ ಹೋರಾಟದಲ್ಲಿ ಭಾಗಿಯಾಗಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ  ಈಶ್ವರಾನಂದಪುರಿ ಸ್ವಾಮೀಜಿಗಳು,   "ಬ್ರಿಟೀಷರ ಕಾಲದಲ್ಲಿಯೇ ಕುರುಬ ಸಮುದಾಯ ಎಲ್ಲಾ ವರ್ಗಗಳಲ್ಲು ಹಿಂದುಳಿದ ಕಾರಣ ಅಂದೇ ಕುರುಬ ಸಮುದಾಯಕ್ಕೆ ಬ್ರಿಟೀಷರು  ಮೀಸಲಾತಿ ನೀಡಿದ್ದರು. ಆದರೆ, ಕೆಲ ವರ್ಷಗಳ ಹಿಂದೆ ಕೆಲ ಜಾತಿಗಳಿಗೆ ಮಾತ್ರ ಎಸ್​ಟಿ ಮೀಸಲಾತಿ ನೀಡಿದ್ದು, ಕುರುಬ ಸಮುದಾಯವನ್ನ ಸಂಪೂರ್ಣವಾಗಿ ಎಸ್​ಟಿ ಮೀಸಲಾತಿಯಿಂದ ವಂಚಿಸಲಾಗಿತ್ತು. ಹೀಗಾಗಿ ನಮ್ಮ ಸಮುದಾಯಕ್ಕೆ ನ್ಯಾಯಬದ್ಧ ಮೀಸಲಾತಿ ನೀಡಬೇಕು ಎಂದು ಈಶ್ವರಾನಂದಪುರಿ ಸ್ವಾಮಿಗಳು ಒತ್ತಾಯಿಸಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಕಾಗಿನೆಲೆ ಮಠದ ನೇತೃತ್ವದಲ್ಲಿಯೇ ಮುಂದಿನ ಹೋರಾಟ ನಡೆಯಲಿದೆ" ಎಂದು ಸ್ವಾಮೀಜಿಗಳು ಕರೆ ನೀಡಿದ್ದಾರೆ.

ಪೂರ್ವಭಾವಿ ಸಭೆ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿಗಳು, "ಜನವರಿ15 ರಂದು ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಪ್ರತಿ ಜಿಲ್ಲೆಗಳಿಂದಲು ಜನರು‌ ಹೋರಾಟದಲ್ಲಿ ಸೇರಿಕೊಳ್ಳಲಿದ್ದಾರೆ. ಮೀಸಲಾತಿ ನಮ್ಮ ಹಕ್ಕು. ಈ ಹೋರಾಟದಲ್ಲಿ ನಮ್ಮ ಹಾಗೂ ನಮ್ಮ ಸಮುದಾಯದ ಮುಖಂಡರ ನಡುವೆ ಯಾವುದೇ ಭಿನ್ನಮತ ಇಲ್ಲ.

ಇದನ್ನೂ ಓದಿ: ಯಡಿಯೂರಪ್ಪರನ್ನು ಕೆಳಗಿಳಿಸುವುದು ಹಗಲುಗನಸು, ಸಿದ್ದರಾಮಯ್ಯಗೆ ಮತಿ ಭ್ರಮಣೆ; ಶ್ರೀರಾಮುಲು ಕಿಡಿ

ಮಾಜಿ ಸಿಎಂ  ಸಿದ್ದರಾಮಯ್ಯ ಅವರ  ಗಮನಕ್ಕೆ ತಂದು ಈ ಹೋರಾಟ ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ನಾವು ಯಾವುದೇ ಪಕ್ಷದ ವಿರುದ್ದವೂ ಹೋರಾಟ ನಡೆಸುತ್ತಿಲ್ಲ. ಸಮಾಜದ ಅಭಿವೃದ್ಧಿ ಭಾಗವಾಗಿ ಸಿಗಬೇಕಿರುವ ಸೌಲಭ್ಯವನ್ನ ಕೇಳುತ್ತಿದ್ದೇವೆ. ಸರ್ಕಾರ ಮನವಿಯನ್ನ‌ ಪರಿಗಣಿಸುವ ವಿಶ್ವಾಸ ಇದೆ" ಎಂದು ತಿಳಿಸಿದ್ದಾರೆ.

ಮೀಸಲಾತಿ ಹೋರಾಟದ ರೂಪುರೇಷೆ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್​ಎಂ ರೇವಣ್ಣ, "ಸಿದ್ದರಾಮಯ್ಯ ಸಿಎಂ ಆಗಲು ಈ ಹಿಂದೆ ಅವರು ಅಕ್ರಮ ಗಣಿಗಾರಿಕೆ ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸಿದ ಕಾಲ್ನಡಿಗೆ ಯಾತ್ರೆಯೇ ಕಾರಣ. ಅಂತಹ ಯಶಸ್ವಿ ಕಾಲ್ನಡಿಗೆ ಯಾತ್ರೆಯ ಮೂಲಕ ನಾವು ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿಕೊಡೋಣ" ಎಂದು ತಿಳಿಸಿದ್ದಾರೆ.
Published by:MAshok Kumar
First published: