ಚಿಕ್ಕಮಗಳೂರು: ಬಯಲು ಸೀಮೆಯ ಕಡೂರಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಕಲ್ಲು ಗಣಿಗಾರಿಕೆಯ ಭಾರೀ ಸ್ಫೋಟದಿಂದ ಮನೆಗಳು ಬಿರುಕು ಬಿಟ್ಟಿವೆ. ಇದರಿಂದ ಗ್ರಾಮದ ಜನರು ಭಯದಲ್ಲೇ ಬದುಕುತ್ತಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಡ್ಡದಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕಡೂರು ತಾಲೂಕಿನ ಗುಡ್ಡದಹಟ್ಟಿ ಗ್ರಾಮದ 40-50 ಮನೆಗಳಿರುವ ಈ ಗ್ರಾಮದಲ್ಲಿ ಬಾಯ್ಬಿಡದ ಮನೆಗಳೇ ಇಲ್ಲ. ಯಾಕಂದ್ರೆ, ಈ ಗ್ರಾಮದಿಂದ ಕೇವಲ 200 ಮೀಟರ್ ದೂರದಲ್ಲಿ ಬೃಹತ್ ಗಣಿಗಾರಿಕೆ ನಡೆಯುತ್ತಿದೆ. ಇದು ಅಕ್ರಮ ಅನ್ನೋದು ಸ್ಥಳಿಯರು ಆರೋಪ. ಕಲ್ಲು ಗಣಿಗಾರಿಕೆಯಿಂದ ಈ ಗ್ರಾಮ 2 ವರ್ಷದ ಹಿಂದೆ ಕಟ್ಟಿದ ಮನೆಯೂ ಬಿರುಕು ಬಿಡ್ತಿವೆ. ಗ್ರಾಮದಲ್ಲಿರೋ ಎಲ್ಲಾ ಮನೆಗಳದ್ದೂ ಇದೆ ಕಥೆ. ಕೆಲವರು ಎಷ್ಟು ಬಾರಿ ದುರಸ್ತಿ ಮಾಡಿಸೋದು ಅಂತ ಗುಡಿಸಲು ಹಾಕಿಕೊಂಡಿದ್ದಾರೆ. ಇಲ್ಲಿನ ಜನ ಕೂಲಿಯನ್ನೇ ನಂಬಿ ಬದುಕುತ್ತಿರೋರು. ದಿನಕ್ಕೆ 200-300 ಕೂಲಿ. ಮಕ್ಕಳಿಗಾಗಿ ಹೊಟ್ಟೆ-ಬಟ್ಟೆ ಕಟ್ಟಿ ಕಟ್ಟಿದ ಮನೆ ಕಥೆ ಹೀಗಾದ್ರೆ, ಹೊಲದಲ್ಲಿ ಯಾವ ಬೆಳೆಯೂ ಸರಿಯಾಗಿ ಬರಲ್ಲ.
ಕುಡಿಯೋಕೆ ಶುದ್ಧ ನೀರೂ ಇಲ್ಲ. ಎಲ್ಲದಕ್ಕೂ ಮೂಲ ಧೂಳು. ಸೂರಿನ ಆಸೆಗೆ 10 ಪರ್ಸೆಂಟ್ ಬಡ್ಡಿಗೆ ದುಡ್ಡು ತಂದು ಮನೆ ಕಟ್ಟಿದವರು ನಮಗೆ ಬೇರೆ ಕಡೆ ಮನೆ ಕಟ್ಟಿಕೊಡಿ ನಾವು ಹೋಗ್ತೀವಿ. ಇಲ್ಲಿ ಬದ್ಕಕ್ಕೆ ಆಗಲ್ಲ ಅಂತ ಅವಲತ್ತು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸರ್ವೇ ನಂಬರ್ 67 ಹಾಗೂ 68ರಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ಯಾರೂ ಅನುಮತಿ ನೀಡಿಲ್ಲ. ಆದರೂ ಗಣಿಗಾರಿಕೆ ನಡೆಯುತ್ತಿದೆ. ಹೇಳೋರಿಲ್ಲ. ಕೇಳೋರಿಲ್ಲ. ಪ್ರಶ್ನಿಸಲು ಹೋದರೆ ದೌರ್ಜನ್ಯದಿಂದ ಹೊಡೆಯಲು ಬರುತ್ತಾರೆ. ಪೊಲೀಸರನ್ನು ಕಳಿಸುತ್ತಾರೆ. ಇದು ಸಂಪೂರ್ಣ ಅಕ್ರಮ ಗಣಿಗಾರಿಕೆ ಎಂದು ಆರೋಪಿಸಿರೋ ಸ್ಥಳೀಯರು, ಇಲ್ಲಿ ಎಲ್ಲರೂ ಸಾಯುವ ಭೀತಿಯಲ್ಲಿದ್ದಾರೆ. ಕೂಡಲೇ ಇದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕ್ರಷರ್ ನಿಲ್ಲಿಸಲಿ. ಇಲ್ಲ ನಮಗೆ ಬೇರೆ ಕಡೆ ಮನೆ ಕಟ್ಟಿಕೊಡಲಿ ಅಂತ ಹಳ್ಳಿಗರು ಕ್ರಷರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಶೋಕ ಬಿಲ್ಡಕಾನ್ ಕಂಪನಿ ಯವರು ಅಕ್ರಮ ಕಲ್ಲು ಗಣಿಗಾರಿಕೆ ಮಾಡ್ತಿರಾರೆಂದು ಸ್ಥಳೀಯರ ಆರೋಪ ಮಾಡಿದ್ದಾರೆ.
ಇದನ್ನು ಓದಿ: Justice Satish Chandra Sharma; ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸತೀಶ್ ಚಂದ್ರ ಶರ್ಮಾ ನೇಮಕ
ಒಟ್ಟಾರೆ, ಇದಕ್ಕೆ ಅನುಮತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅಧಿಕಾರಿಗಳು ಲೀಗಲ್ ಅಂತಿದ್ರೆ, ಸ್ಥಳೀಯರು ಅಕ್ರಮ ಅಂತಿದ್ದಾರೆ. ಆದರೆ, ಅಕ್ರಮ- ಸಕ್ರಮದ ಹಗ್ಗ- ಜಗ್ಗಾಟದಲ್ಲಿ ಬೀದಿಗೆ ಬೀಳ್ತಿರೋದು ಮಾತ್ರ ಪಾಪ ಹಳ್ಳಿ ಜನ ಕಟ್ಟಿದ ಮನೆಗಳೇ 6 ತಿಂಗಳು, ವರ್ಷಕ್ಕೆ ಬಿರುಕು ಬಿಟ್ಟು ಪ್ಲ್ಯಾಸ್ಟ್ರಿಂಗ್ ಕಳಚಿ ಬೀಳ್ತಿದೆ ಅಂದ್ರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬೇಡ. ಅವರು ಜೀವಮಾನ ಪೂರ್ತಿ ಮನೆ ಕಟ್ಟಿಕೊಂಡೇ ಇರಬೇಕು. ಮನೆ ಬಿದ್ದಂತೆ ಕಟ್ಟೋದಕ್ಕೆ ಮತ್ತೆ-ಮತ್ತೆ ಸಾಲ ಮಾಡಿ ಸಾಲಗಾರರಾಗ್ತಿದ್ದಾರೆ. ಕ್ರಷರ್ ಸಕ್ರಮವೇ ಆದರೂ ಬಡವರ ಈ ಜೀವನಕ್ಕೆ ಹೊಣೆ ಯಾರು?. ಸರ್ಕಾರ ಒಂದೋ ಕ್ರಷರ್ ಬದಲಿಸಬೇಕು. ಇಲ್ಲ ಇಲ್ಲಿನ ಜನರಿಗೆ ಎಲ್ಲಾ ಸೌಕರ್ಯ ನೀಡಿ ಸ್ಥಳಾಂತರಸಬೇಕು ಎಂಬುದು ಇಲ್ಲಿನ ಜನರ ಆಗ್ರವವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ