• Home
  • »
  • News
  • »
  • district
  • »
  • ಯಲಹಂಕ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಹಣ ನುಂಗಿದ ಜನಪ್ರತಿನಿಧಿ

ಯಲಹಂಕ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಹಣ ನುಂಗಿದ ಜನಪ್ರತಿನಿಧಿ

ಕಾಚೋಹಳ್ಳಿಯ ರಾಜಣ್ಣ

ಕಾಚೋಹಳ್ಳಿಯ ರಾಜಣ್ಣ

ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಕಾಚೋಹಳ್ಳಿ ಗ್ರಾಪಂ ಉಪಾಧ್ಯಕ್ಷ ನರಸಿಂಹಮೂರ್ತಿ ಎರಡು ಕುಡಿಯುವ ನೀರಿನ ಘಟಕಗಳಿಂದ ಬಂದ 4.8 ಲಕ್ಷ ಹಣ ವಂಚಿಸಿ ಸಿಕ್ಕಿಬಿದ್ದಿದ್ದಾರೆ.

  • Share this:

ಬೆಂಗಳೂರು: ಗ್ರಾಮಪಂಚಾಯ್ತಿ ಮಟ್ಟದ ರಾಜಕಾರಣಿಯಿಂದ ಹಿಡಿದು ಪಾರ್ಲಿಮೆಂಟ್‌ನಲ್ಲಿ ಕುಳಿತುಕೊಳ್ಳುವ ರಾಜಕಾರಣಿಗಳವರೆಗೆ ಭ್ರಷ್ಟಾಚಾರ ಎನ್ನುವ ಕಪ್ಪು ಮಸಿಯ ಆರೋಪ ಕೇಳಿ ಬರುವುದು ಸರ್ವೇಸಾಮಾನ್ಯ. ಬಹುತೇಕ ಆರೋಪಗಳು ಸಾಬೀತಾಗಿ ಅನೇಕ ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ದಂಡ ತೆತ್ತಿದ್ದಾರೆ. ದೊಡ್ಡ ದೊಡ್ಡ ಯೋಜನೆಗಳಲ್ಲಿ ಭ್ರಷ್ಟಚಾರ ಮಾಡಿ ಹಣ ಕೊಳ್ಳೆ ಹೊಡೆಯುವುದು ಸಾಮಾನ್ಯವಾಗಿದ್ದರೆ ಇಲ್ಲೊಬ್ಬರು ಮೂಲಭೂತ ಸೌಕರ್ಯವಾದ ಶುದ್ದ ಕುಡಿಯಿವ ನೀರಿನ ಘಟಕದಲ್ಲಿ ಸಂಗ್ರಹವಾಗುವ ಹಣವನ್ನೇ ಕೊಳ್ಳೆ ಹೊಡೆದ ಭ್ರಷ್ಟಾಚಾರದ ಮಸಿ ಆರೋಪ ಎದುರಿಸುತ್ತಿದ್ದಾರೆ.


ಬೆಂಗಳೂರು ಉತ್ತರ ತಾಲೂಕು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಿಂದ ಸಂಗ್ರಹವಾದ ಹಣದಲ್ಲಿ ಭ್ರಷ್ಟಾಚಾರ ಕಂಡುಬಂದಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಸ್.ಆರ್. ವಿಶ್ವನಾಥ್ ಅವರ ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಾಸನೆ ಎದ್ದಿದೆ. ದಾಸನಪುರ ಹೋಬಳಿಯ ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನರಸಿಂಹಮೂರ್ತಿ ಅಕಾ ರಾಜಣ್ಣ ಕಳೆದ 8 ರಿಂದ 9 ತಿಂಗಳುಗಳಿಂದ ಕಾಚೋಹಳ್ಳಿಯಲ್ಲಿನ 2 ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಸಂಗ್ರಹವಾಗುವ ಹಣವನ್ನ ಪಂಚಾಯ್ತಿ ಖಾತೆಗೆ ನೀಡದೆ, ತಾನೇ ಬಳಸಿಕೊಂಡಿದ್ದಾರೆ. ಎರಡು ನೀರಿನ ಘಟಕದಿಂದ 4.80 ಲಕ್ಷ ರುಪಾಯಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.


ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ್ ದೂರಿನನ್ವಯ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತನಿಖೆ ನಡೆಸಿದ್ದು, ಭ್ರಷ್ಟಾಚಾರ ಸಾಬೀತಾಗಿದೆ. ಬೆಂಗಳೂರು ಉತ್ತರ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಕಾಚೋಹಳ್ಳಿ ಗ್ರಾಮಾಂಚಾಯ್ತಿ ಅಭಿವೃದ್ದಿ ಅಧಿಕಾರಿ ಸುಕನ್ಯಾ ಬಡಿಗೇರ್‌ಗೆ ನೋಟಿಸ್ ನೀಡಿದ್ದು, ನರಸಿಂಗಮೂರ್ತಿ ಬಳಸಿಕೊಂಡಿರುವ ಹಣವನ್ನ ಕೂಡಲೇ ಪಂಚಾಯ್ತಿ ಖಾತೆಗೆ ಜಮೆ ಮಾಡಿಸಿಕೊಳ್ಳಿ. ಇಲ್ಲವಾದರೆ ಉಪಾಧ್ಯಕ್ಷನ ವಿರುದ್ದ ಕ್ರಿಮಿನಲ್ ದಾವೆ ಹೂಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದೆ.


ಇದನ್ನೂ ಓದಿ: ತನ್ನ ಹೆಸರಿನಲ್ಲಿ ನಕಲಿ ಫೇಸ್​​ಬುಕ್​​ ತೆರೆದ ಕಿಡಿಗೇಡಿಗಳು - ಪೊಲೀಸ್​ ಠಾಣೆ ಮೆಟ್ಟಿಲೇರಿದ ಶಿಕ್ಷಕಿ


ಸದ್ಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನರಸಿಂಹಮೂರ್ತಿ ತನ್ನ ತಪ್ಪನು ಒಪ್ಪಿಕೊಂಡಿದ್ದಾರೆ. 1.20 ಲಕ್ಷ ಹಣವನ್ನು ಪಂಚಾಯ್ತಿಗೆ ಜಮೆ ಮಾಡುತ್ತೇನೆ. ಉಳಿದ ಹಣದಲ್ಲಿ ಘಟಕದ ದುರಸ್ತಿ ಹಾಗೂ ನಿರ್ವಹಣೆ ಮಾಡಿಸಿದ್ದೇನೆ. ಅದರ ಬಿಲ್‌ಗಳನ್ನು ಒದಗಿಸುತ್ತೇನೆ ಎಂದು ಸಬೂಬು ಹೇಳುತ್ತಿದ್ದಾರೆ.
ಒಟ್ಟಾರೆ ಯೋಜನೆ ರೂಪಿಸುವ ವೇಳೆ ಭ್ರಷ್ಟಾಚಾರ ಮಾಡುವುದು ಸಾಮಾನ್ಯ. ಆದ್ರೆ ಶುದ್ದ ಕುಡಿಯುವ ನೀರಿನ ಘಟಕದ ಹಣವನ್ನ ಗ್ರಾಮ ಪಂಚಾಯತಿ ಉಪಾಧ್ಯಕ್ಷನೇ ಗುಳುಂ ಮಾಡಿದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಕಣ್ಮರೆಯಾಗುತ್ತಿರಬಹುದು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಕೆಲಸವಾಗಬೇಕಿದೆ.

Published by:Vijayasarthy SN
First published: