ಕೆ ಕಲ್ಯಾಣ್ ಕುಟುಂಬಕ್ಕೆ ವಂಚನೆ: ಮನೆಗೆಲಸದ ಗಂಗಾ ಮತ್ತು ಮಾಟ-ಮಂತ್ರ ಹಿನ್ನೆಲೆ ಬೆಳಕಿಗೆ
ಕೆ ಕಲ್ಯಾಣ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಳ ನಿಜವಾದ ಹೆಸರು ಜ್ಯೋತಿ ಕುಲಕರ್ಣಿಯಾಗಿದೆ. ಈಕೆ ಹಾಗೂ ಶಿವಾನಂದ ವಾಲಿ ಸೇರಿ ಮಾಟ ಮಂತ್ರಗಳ ಮೂಲಕ ಸಾಕಷ್ಟು ಮಂದಿಗೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
ಧಾರವಾಡ: ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಕುಟುಂಬದ ಕಲಹದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಕಲ್ಯಾಣ್ ಕುಟುಂಬಕ್ಕೆ ಮೋಸ ಮಾಡಿದವರ ಹಿನ್ನೆಲೆಯ ಒಂದೊಂದೇ ಬಣ್ಣ ಬಯಲಿಗೆ ಬರುತ್ತಿದೆ. ಕಲ್ಯಾಣ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗಂಗಾಳ ಅಸಲಿ ರೂಪ ಜಾಹೀರಾಗಿದೆ. ಗಂಗಾಳ ನಿಜವಾದ ಹೆಸರು ಜ್ಯೋತಿ ಕುಲಕರ್ಣಿ ಎಂಬುದು ತಿಳಿದುಬಂದಿದೆ. ಈಕೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ವಾಲಿ ಜೊತೆ ಸೇರಿ ವಂಚನೆ, ಮಾಟ-ಮಂತ್ರ ಇತ್ಯಾದಿ ಕಾರ್ಯಗಳ ಮೂಲಕ ಬಹಳಷ್ಟು ಅಪರಾಧ ಎಸಗಿದ್ದಾಳೆ. ಕುಷ್ಟಗಿಯಲ್ಲಿ ಹಲವರಿಗೆ ನೌಕರಿ ಕೊಡಿಸುವುದಾಗಿ ವಂಚನೆ ಮಾಡಿದ್ದಳು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈಕೆ ವಂಚನೆಯಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಂದವೆನ್ನಲಾಗಿದೆ. ಇದೇ ಕಾರಣಕ್ಕೆ ಈಕೆಯ ಬಂಧನವೂ ಆಗಿತ್ತು.
2016ರಲ್ಲಿ ಜ್ಯೋತಿ ಕುಲಕರ್ಣಿ ಧಾರವಾಡದ ವಿಜಯಲಕ್ಷ್ಮೀ ಮತ್ತು ರಾಜೇಂದ್ರ ಧಾರವಾಡಕರ್ ದಂಪತಿಯ ಮನೆಗೆ ತಿಂಗಳಿಗೆ 5 ಸಾವಿರ ರೂ ಸಂಬಳಕ್ಕೆ ಮನೆಗೆಲಸಕ್ಕೆ ಸೇರಿದ್ದಳು. ಈಕೆಯ ಹಿನ್ನೆಲೆ ತಿಳಿಯದ ಧಾರವಾಡಕರ್ ಕುಟುಂಬ ಈಕೆಗೆ ಆಶ್ರಯ ನೀಡಿತ್ತು. ಮೊದಲ ಆರು ತಿಂಗಳು ಚೆನ್ನಾಗಿ ಕೆಲಸ ಮಾಡಿದ್ದ ಗಂಗಾ ಕುಲಕರ್ಣಿ ಕ್ರಮೇಣ ಕುಟುಂಬ ಸದಸ್ಯರ ಮಧ್ಯೆ ಕಲಹ ಹಚ್ಚುವ ಕೆಲಸ ಮಾಡುತ್ತಾಳೆ. ಈ ವೇಳೆ ಶಿವಾನಂದ ವಾಲಿ ಅಕಾ ಉದ್ದಿನಕಡ್ಡಿ ಸ್ವಾಮಿ ಕೂಡ ಜೊತೆ ಸೇರಿ ಚಿತಾವಣಿ ಮಾಡುತ್ತಾನೆ. ಕೊನೆಗೆ ಮನೆಯ ಮಾಲೀಕ ರಾಜೇಂದ್ರ ಧಾರವಾಡಕರ್ ಅವರ ಮೃತ್ಯುವಾಗುತ್ತದೆ. ಈಗ ತನ್ನ ಪತಿ ರಾಜೇಂದ್ರ ಅವರನ್ನು ಇವರಿಬ್ಬರೇ ಸೇರಿ ಕೊಲೆ ಮಾಡಿದ್ದಾರೆ. ಇವರಿಗೆ ಗಲ್ಲು ಶಿಕ್ಷೆ ಸಿಗುವಂತೆ ಮಾಡಿ ಎಂದು ವಿಜಯಲಕ್ಷ್ಮೀ ಧಾರವಾಡಕರ್ ಒತ್ತಾಯ ಮಾಡಿದ್ದಾರೆ.
ಧಾರವಾಡಕರ್ ಕುಟುಂಬಕ್ಕೆ ಮಾಡಿದ ರೀತಿಯಲ್ಲೇ ಸಾಹಿತಿ ಕೆ ಕಲ್ಯಾಣ್ ಮನೆಗೂ ಜ್ಯೋತಿ ಕುಲಕರ್ಣಿ ಮತ್ತು ಶಿವಾನಂದ ವಾಲಿ ಸಂಚಕಾರ ತಂದಿರುವಂತಿದೆ. ಕಲ್ಯಾಣ್ ಅವರ ಮನೆ ಈಗ ಒಡೆದ ಹೋಳಾಗಿದೆ. ಹೆಂಡತಿ ಅಶ್ವಿನಿ ಮನೆ ಬಿಟ್ಟು ಹೋಗಿದ್ದಾರೆ. ಅವರ ಅಕೌಂಟ್ನಿಂದ 20 ಲಕ್ಷ ರೂ ನಾಪತ್ತೆಯಾಗಿದೆ. ತಮ್ಮಿಬ್ಬರ ಹೆಸರಲ್ಲಿದ್ದ ಆಸ್ತಿ ಶಿವಾನಂದ ವಾಲಿ ಹೆಸರಿಗೆ ವರ್ಗಾವಣೆ ಆಗಿದೆ. ಈಕೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಿರುವ ಶಂಕೆ ಇದೆ. ಮಾವನ ಮನೆಯಲ್ಲಿ ಶಿವಾನಂದ ವಾಲಿಯಿಂದ ಪೂಜೆ ಆದ ಮೇಲೆ ತನ್ನ ಹೆಂಡತಿಯ ವರ್ತನೆ ಬದಲಾಗಿ ಹೋಗಿತ್ತು ಎಂದು ಕೆ ಕಲ್ಯಾಣ್ ದೂರಿದ್ಧಾರೆ.
ವರದಿ: ಮಂಜುನಾಥ ಯಡಳ್ಳಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ