news18-kannada Updated:October 26, 2020, 8:55 PM IST
ರಾಯಚೂರಿನಲ್ಲಿ ಹಗೆವಿನಲ್ಲಿದ್ದ ಜೋಶ ಹಾಳಾಗಿರುವುದು
ರಾಯಚೂರು: ಜಿಲ್ಲೆಯಲ್ಲಿ ಈ ಬಾರಿ ಮಳೆ ಅತ್ಯಧಿಕವಾಗಿದೆ. ಮಳೆಯಿಂದಾಗಿ ಭೂಮಿಯಲ್ಲಿ ಜಲ ಉಕ್ಕುತ್ತಿದೆ. ಗ್ರಾಮಗಳ ಮನೆಗಳಲ್ಲಿ ಬಸಿ ನೀರು ಬರುತ್ತಿದೆ. ಇದೇ ವೇಳೆ ಕಷ್ಟ ಕಾಲದಲ್ಲಿ ಇರಲಿ ಎಂಬ ಕಾರಣಕ್ಕೆ ಭೂಮಿಯಲ್ಲಿ ಹಗೆವು ತೆಗೆದು ಹಾಕಿದ್ದ ಜೋಳವು ಸಹ ಸಂಪೂರ್ಣ ವಾಗಿ ಕೊಳೆತು ಹೋಗಿದೆ. ಹಗೆವಿನ ಜೋಳ ತೆಗೆದರೆ ದುರ್ವಾಸನೆ ಬರುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಜೋಳ ನಾಶವಾಗಿದ್ದು ಸರಕಾರ ಹಾಳಾಗಿರುವ ಜೋಳವನ್ನು ಖರೀದಿಸಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಎಂಬ ಗ್ರಾಮದಲ್ಲಿ ಹಗೆವಿನಲ್ಲಿದ್ದ ಜೋಳ ಸಂಪೂರ್ಣವಾಗಿ ನಾಶವಾಗಿದೆ. ಗ್ರಾಮದಲ್ಲಿ ಸುಮಾರು 200 ಕ್ಕೂ ಅಧಿಕ ಹಗೆವುಗಳಿವೆ. ಅವುಗಳಲ್ಲಿ ಒಂದೊಂದು ಹಗೆವಿನಲ್ಲಿ 20 ರಿಂದ 50 ಕ್ವಿಂಟಾಲ್ವರೆಗೂ ಜೋಳವನ್ನು ದಾಸ್ತಾನು ಮಾಡಿದ್ದಾರೆ. ದಾಸ್ತಾನು ಮಾಡಿದ ಹಗೆವು ಜೋಳವನ್ನು ಈಗ ತೆಗೆಯುತ್ತಿದ್ದ ಒಂದೊಂದು ಹಗೆವಿನಲ್ಲಿ 5-10 ಅಡಿಯವರೆಗೂ ನೀರು ನಿಂತಿವೆ. ಭೂಮಿಯಲ್ಲಿ ಬಸಿ ನೀರು ಬಂದು ಹಗೆವು ನೀರಿನಿಂದ ತುಂಬಿಕೊಂಡಿವೆ. ಇದರಿಂದಾಗಿ ಹೆಗೆವಿನಲ್ಲಿದ್ದ ಜೋಳ ಸಂಪೂರ್ಣವಾಗಿ ಕೊಳೆತು ಹೋಗಿದೆ. ಈಗ 13 ಹಗೆವುಗಳನ್ನು ತೆಗೆದಿದ್ದು ಅವುಗಳಲ್ಲಿಯೇ ಜೋಳ ನಾಶವಾಗಿದೆ. ಒಂದೊಂದು ಹಗೆವಿನಲ್ಲಿದ್ದ ಸುಮಾರು ಒಂದು ಲಕ್ಷ ದಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಜೋಳ ನಾಶವಾಗಿದೆ.
ಇದನ್ನೂ ಓದಿ: ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರದಿಂದ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್ ಘೋಷಣೆ ಸಾಧ್ಯತೆ
ಹಿಂದಿನ ಕಾಲದಿಂದಲೂ ಭೂಮಿಯಲ್ಲಿ ಹಗೆವು ತೆಗೆದು ಅದಕ್ಕೆ ಮೇವಿನ ಸೊಪ್ಪು ಸುತ್ತಿ ಅದರಲ್ಲಿ ಜೋಳವನ್ನು ಹಾಕಿದರೆ ಈ ಜೋಳವು ನಾಲ್ಕು ಐದು ವರ್ಷದವರೆಗೂ ಕೆಡುವುದಿಲ್ಲ. ಸಾಮಾನ್ಯವಾಗಿ ಹಿಂಗಾರು ಬೆಳೆ ಕಟಾವು ಮಾಡಿದ ನಂತರ ಜೋಳವನ್ನು ಹಗೆವಿಗೆ ಹಾಕುತ್ತಾರೆ. ಮುಂದಿನ ವರ್ಷದ ಬೆಳೆ ನೋಡಿಕೊಂಡು ಉತ್ತಮ ಬೆಳೆ ಇದ್ದರೆ ಹಗೆವಿನ ಜೋಳ ತೆಗೆದು ತಮ್ಮ ಅವಶ್ಯಕತೆಗೆ ಬೇಕಾಗುಷ್ಟು ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡುತ್ತಾರೆ.
ಅದರಂತೆ ಕಳೆದ ವರ್ಷ ಬೆಳೆ ಬಿಳಿಜೋಳವನ್ನು ಹಗೆವಿನಲ್ಲಿ ಹಾಕಿದ್ದು, ಈಗ ಈ ಜೋಳ ಹಾಳಾಗಿದೆ. ಹೆಗೆವಿನ ಜೋಳವನ್ನು ಹೊರತೆಗೆದರೆ ಕೊಳತೆ ಕೋಳಿಯ ವಾಸನೆ ಬರುವಂತೆ ಜೋಳದ ವಾಸನೆ ಇದೆ. ಈ ದುರ್ವಾಸನೆ ತಡೆದುಕೊಳ್ಳಲು ಆಗದೆ ರೈತರು ಹಗೆವು ತೆಗೆಯಲು ಹಿಂಜರಿಯುತ್ತಿದ್ದಾರೆ. ಕೂಡಿಟ್ಟ ಜೋಳ ಹಾಳಾಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ. ಸರಕಾರ ಈ ಜೋಳವನ್ನು ಖರೀದಿಸಬೇಕು ಇಲ್ಲವೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಕೇವಲ ಸರ್ಜಾಪುರ ಮಾತ್ರವಲ್ಲ ಜಿಲ್ಲೆಯ ಹಲವು ಕಡೆ ಹೆಗೆವಿನ ಜೋಳ ಹಾಳಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕಾಗಿದೆ.
ವರದಿ: ಶರಣಪ್ಪ ಬಾಚಲಾಪುರ
Published by:
Vijayasarthy SN
First published:
October 26, 2020, 8:55 PM IST